ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಭೀಕರ ಬರಗಾಲ

KannadaprabhaNewsNetwork |  
Published : Jul 19, 2026, 03:00 AM IST
17ಕೆಎಂಎನ್ ಡಿ33 | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ತಾಲೂಕಿನ ಉದ್ದಗಲಕ್ಕೂ ಹಾದು ಹೋಗಿರುವ ಹೇಮಾವತಿ ನಾಲೆಗಳಲ್ಲಿ ನೀರು ಹರಿಸದ ಕಾರಣ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದೆ. ರೈತರ ಕಣ್ಣೆದುರೇ ಬೆಳೆದು ನಿಂತಿರುವ ಕಬ್ಬು, ಬಾಳೆ, ತೆಂಗು, ಅಡಿಕೆ ಮುಂತಾದ ಬೆಳೆಗಳು ಒಣಗಲಾರಂಭಿಸಿವೆ.

ಎಂ.ಕೆ.ಹರಿಚರಣ್ ತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ತಾಲೂಕಿನ ಉದ್ದಗಲಕ್ಕೂ ಹಾದು ಹೋಗಿರುವ ಹೇಮಾವತಿ ನಾಲೆಗಳಲ್ಲಿ ನೀರು ಹರಿಸದ ಕಾರಣ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದೆ. ರೈತರ ಕಣ್ಣೆದುರೇ ಬೆಳೆದು ನಿಂತಿರುವ ಕಬ್ಬು, ಬಾಳೆ, ತೆಂಗು, ಅಡಿಕೆ ಮುಂತಾದ ಬೆಳೆಗಳು ಒಣಗಲಾರಂಭಿಸಿವೆ.

ತಾಲೂಕಿನಾದ್ಯಂತ ಇರುವ ಕೆರೆ- ಕಟ್ಟೆಗಳು ನೀರಿಲ್ಲದೆ ಭತ್ತಿ ಹೋಗುವ ಸ್ಥಿತಿಗೆ ತಲುಪಿವೆ. ಅಂತರ್ಜಲ ಮಟ್ಟ ಕುಸಿತವಾಗಿ ತಮ್ಮ ಕೃಷಿ ಭೂಮಿಯಲ್ಲಿ ಅಳಿದುಳಿದ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವುದಕ್ಕೆ ರೈತಾಪಿ ವರ್ಗ ಹರಸಾಹಸ ಪಡುತ್ತಿದೆ.

ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದ ವ್ಯಾಪ್ತಿಗೆ ಸೇರಿದ ಹೇಮಾವತಿ ಎಡದಂಡೆ ನಾಲೆಯ ತಾಲೂಕು ವ್ಯಾಪ್ತಿ 54088 ಎಕರೆ ಪ್ರದೇಶ ಅರೆ ನೀರಾವರಿಗೆ ಒಳಪಟ್ಟಿದೆ. ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ನೂರಾರು ಕೆರೆಗಳನ್ನು ಹೇಮೆ ನೀರಿನಿಂದ ತುಂಬಿಸಲಾಗುತ್ತಿತ್ತು.

ಆದರೆ, ಹೇಮಾವತಿ ಜಲಾಶಯದಲ್ಲಿ ನೀರಿದ್ದರೂ ನೀರಾವರಿ ಇಲಾಖೆ ಎಡದಂಡೆ ನಾಲೆಗಳ ಮೂಲಕ ಕಳೆದ 6 ತಿಂಗಳಿನಿಂದ ನೀರು ಹರಿಸದ ಕಾರಣ ಕೆರೆಗಳು ಮತ್ತು ಅಚ್ಚುಕಟ್ಟು ಪ್ರದೇಶದ ಬೆಳೆಗಳು ಒಣಗಲಾರಂಭಿಸಿವೆ. ಈ ಬಾರಿ ನಿರೀಕ್ಷಿತ ಪ್ರಮಣದ ಮಳೆಯಾಗದ ಕಾರಣ ಅರೆ ನೀರಾವರಿ ಬೆಳೆಗಳ ಬಿತ್ತನೆ ಕಾರ್ಯ ಕುಸಿದಿದೆ. ಮಳೆಯಾಗದ ಕಾರಣ ಬಿತ್ತನೆ ಮಾಡಿರುವ ಅರೆ ನೀರಾವರಿ ಬೆಳೆಗಳೂ ಒಣಗುತ್ತಿವೆ.

ಮಲೆನಾಡಿನಲ್ಲಿ ಒಂದಷ್ಟು ಮಳೆಯಾದರೆ ಹೇಮಾವತಿ ನದಿಯಲ್ಲಿ ನೀರಿನ ಹರಿಯುವಿಕೆಯ ಪ್ರಮಾಣ ಹೆಚ್ಚಾಗುತ್ತದೆ. ನದಿ ಒಳ ಹರಿವಿನ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಕಳೆದ ಒಂದು ಶತಮಾನಗಳ ಹಿಂದೆಯೇ ಹೇಮೆ ನೀರನ್ನು ರೈತರ ಕೃಷಿ ಭೂಮಿಗೆ ಹರಿಸಲು ಅಂದಿನ ಮೈಸೂರು ಅರಸರು ತಾಲೂಕಿನ ಮಂದಗೆರೆ ಮತ್ತು ಹೇಮಗಿರಿಯ ಬಳಿ ತಲಾ ಒಂದೊಂದು ನದಿ ಒಡ್ಡು, ಅಣೆಕಟ್ಟೆಗಳನ್ನು ನಿರ್ಮಿಸಿದ್ದಾರೆ.

ಮಂದಗೆರೆ ಎಡದಂಡೆ ನಾಲೆ 33 ಕಿಮೀ ಉದ್ದ ಹರಿದರೆ ಮಂದಗೆರೆ ಬಲದಂಡೆ ನಾಲೆ 56 ಕಿಮೀ ಉದ್ದವಿದೆ. ಹೇಮಗಿರಿ ನಾಲೆ 37 ಕಿಮೀ ಉದ್ದವಿದೆ. ಈ ಮೂರು ನಾಲೆಗಳಿಂದ ತಾಲೂಕಿನ 16,556 ಎಕರೆ ಪ್ರದೇಶ ಸಂಪೂರ್ಣ ನೀರಾವರಿಗೆ ಒಳಪಟ್ಟಿದೆ. ಸದರಿ ನಾಲಾ ಬಯಲಿನ ವ್ಯಾಪ್ತಿಯಲ್ಲಿ ಶೇ.80 ರಷ್ಟು ರೈತರು ಭತ್ತ ಮತ್ತು ಕಬ್ಬು ಬೆಳೆದರೆ ಉಳಿದಂತೆ ತೆಂಗು, ಅಡಿಕೆ, ಬಾಳೆ ಮುಂತಾದ ವಾಣಿಜ್ಯ ಬೆಳೆಗಳಿವೆ.

ಹೇಮಾವತಿ ಜಲಾಶಯ ನಿರ್ಮಾಣದ ಅನಂತರ ನದಿಗೆ ಹರಿದು ಬರುವ ಮಳೆ ನೀರನ್ನು ಗೊರೂರು ಅಣೆಕಟ್ಟೆಯಲ್ಲಿ ತಡೆ ಹಿಡಿಯಲಾಗುತ್ತಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಈ ನಾಲೆಗಳಿಗೆ ನೀರು ಬಿಟ್ಟಿಲ್ಲ. ನದಿ ಅಣೆಕಟ್ಟೆ ನಾಲೆಗಳ ವ್ಯಾಪ್ತಿಯಲ್ಲಿ ಸುಮಾರು 5500 ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆಯಿದೆ. ಇದರ ಜೊತೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ತೆಂಗು ಮತ್ತು ಅಡಿಕೆ ಬೆಳೆಯಿದೆ. ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಹರಿಸದಿರುವ ಕಾರಣ ರೈತರ ಕಬ್ಬಿನ ಗದ್ದೆಗಳು ಒಣಗುತ್ತಿವೆ. ಇದರಿಂದ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುತ್ತಿದೆ.

ನದಿ ಅಣೆಕಟ್ಟೆ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆ ಸಂರಕ್ಷಣೆ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದರೂ ನೀರಾವರಿ ಇಲಾಖೆ ಬೆಳೆ ಸಂರಕ್ಷಣೆಗೆ ಕ್ರಮ ವಹಿಸುತ್ತಿಲ್ಲ. ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿ ರೈತಸಂಘ, ರಾಜಕೀಯ ಮುಖಂಡರು, ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ. ಆದರೆ, ಕೆ.ಆರ್.ಪೇಟೆ ತಾಲೂಕಿನಲ್ಲಿ ರೈತ ಸಂಘ ಬಿಟ್ಟರೆ ಮತ್ಯಾರೂ ನೀರು ಬಿಡುವಂತೆ ಧ್ವನಿಯೆತ್ತುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಈ ಬಾರಿ ಸಾಕಷ್ಟು ಮಳೆಯಾಗದ ಕಾರಣ ತಾಲೂಕು ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ರೈತರು ಭತ್ತ, ಹೊಸದಾಗಿ ಕಬ್ಬು ಮುಂತಾದ ದೀರ್ಘಕಾಲಿನ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಆದರೆ, ನೀರಾವರಿ ಇಲಾಖೆ ನದಿಯ ಹೊರಹರಿವಿನ ಪ್ರಮಾಣ ಹೆಚ್ಚಿಸಿ ಕನಿಷ್ಠ 20 ದಿನಗಳಿಗೆ ಒಮ್ಮೆ ಒಂದು ಕಂತು ನೀರನ್ನಾದರೂ ಹರಿಸಿ ಬೆಳೆದು ನಿಂತಿರುವ ತೆಂಗು, ಅಡಿಕೆ, ಕಬ್ಬು ಮುಂತಾದ ಬೆಳೆಗಳ ಸಂರಕ್ಷಣೆಗೆ ಮುಂದಾಗಬೇಕು.

- ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತಸಂಘದ ಅಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಗೀತೆಗೆ ಬೌದ್ಧರುದ್ಯಾನ ಪದಸೇರ್ಪಡೆಗೆ ಸಂಘ-ಸಂಸ್ಥೆ ಬೆಂಬಲ
ಹಾಸನದಲ್ಲಿ ರೌಡಿ ಶೀಟರ್ ಮಂಜೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು