ಭೀಕರ ಬರಗಾಲ, ಕುಡಿವ ನೀರಿಗೆ ತತ್ವಾರ

KannadaprabhaNewsNetwork | Published : Mar 10, 2024 1:46 AM

ಸಾರಾಂಶ

ಜಿಲ್ಲಾ ಕೇಂದ್ರ ಹಾವೇರಿ ನಗರದ ತುಂಗಭದ್ರಾ ನದಿ ನೀರನ್ನೆ ಅವಲಂಬಿಸಿದ್ದು, ಬೇಸಿಗೆ ಮುನ್ನವೇ ತುಂಗಭದ್ರಾ ನದಿ ಬತ್ತಿದ್ದರಿಂದ ಕಳೆದ ೨೦ ದಿನಗಳಿಂದ ನಗರಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಅಲ್ಲದೇ ಮಳೆಯ ಕೊರತೆಯಿಂದಾಗಿ ಅಂತರ್ಜಲಮಟ್ಟ ಕುಸಿಯುತ್ತಿದ್ದು, ಬೋರ್‌ವೆಲ್‌ಗಳು ಕೈಕೊಡುತ್ತಿವೆ

ನಾರಾಯಣ ಹೆಗಡೆ ಹಾವೇರಿ

ಜಿಲ್ಲೆಯಲ್ಲಿ ಬಿರು ಬೇಸಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬರಗಾಲದಿಂದಾಗಿ ನದಿ, ಕೆರೆ-ಕಟ್ಟೆಗಳು ಬರಿದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಈಗಾಗಲೇ 62 ಹಳ್ಳಿಗಳಲ್ಲಿ ಹಾಗೂ ನಗರಗಳ 90 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು, ಮುಂದಿನ ಎರಡು ತಿಂಗಳ ಪರಿಸ್ಥಿತಿ ಭೀಕರವಾಗುವ ಸಾಧ್ಯತೆ ಗೋಚರಿಸುತ್ತಿದೆ.

ಜಿಲ್ಲೆಯ ಜೀವನದಿಗಳಾದ ತುಂಗಭದ್ರಾ, ವರದಾ, ಕುಮದ್ವತಿ, ಧರ್ಮಾ ನದಿಗಳ ಒಡಲು ಬರಿದಾಗಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಬಹುಗ್ರಾಮ ನೀರಿನ ಯೋಜನೆಗಳೆಲ್ಲ ಸ್ಥಗಿತಗೊಂಡಿವೆ. ಬೋರ್‌ವೆಲ್‌ಗಳು ಬತ್ತಿ ಬರಡಾಗುತ್ತಿವೆ. ಜಾನುವಾರುಗಳಿಗೂ ನೀರಿನ ಸಮಸ್ಯೆ ಎದುರಾಗಿದ್ದು, ಮುಂದಿನ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಎಲ್ಲ ಲಕ್ಷಣ ಕಂಡುಬರುತ್ತಿದೆ.

ಜಿಲ್ಲಾ ಕೇಂದ್ರ ಹಾವೇರಿ ನಗರದ ತುಂಗಭದ್ರಾ ನದಿ ನೀರನ್ನೆ ಅವಲಂಬಿಸಿದ್ದು, ಬೇಸಿಗೆ ಮುನ್ನವೇ ತುಂಗಭದ್ರಾ ನದಿ ಬತ್ತಿದ್ದರಿಂದ ಕಳೆದ ೨೦ ದಿನಗಳಿಂದ ನಗರಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಅಲ್ಲದೇ ಮಳೆಯ ಕೊರತೆಯಿಂದಾಗಿ ಅಂತರ್ಜಲಮಟ್ಟ ಕುಸಿಯುತ್ತಿದ್ದು, ಬೋರ್‌ವೆಲ್‌ಗಳು ಕೈಕೊಡುತ್ತಿವೆ. ಹೀಗಾಗಿ ಹಾವೇರಿ ನಗರದ ಬಹುತೇಕ ವಾರ್ಡ್‌ಗಳಲ್ಲಿ ನೀರಿಗಾಗಿ ಹಾಹಾಕಾರ ತಲೆದೋರಿದೆ. ಇನ್ನು ನದಿ ತೀರದ ಗ್ರಾಮಗಳು ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ವರದಾ ನದಿ ತೀರದ ಕೂಡಲ, ನಾಗನೂರ, ನದಿನೀರಲಗಿ, ತುಂಗಭದ್ರಾ ನದಿ ತೀರದ ಹಾವನೂರ, ಗುತ್ತಲ ಬೆಳವಗಿ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಮಳೆಯ ಕೊರತೆಯಿಂದಾಗಿ ಬೋರ್‌ವೆಲ್‌ಗಳು ಬತ್ತುತ್ತಿದ್ದು, ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗುತ್ತಿವೆ. ನಾಲ್ಕೈದು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಅದು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಗ್ರಾಮದ ಜನರು ನದಿ ತೀರದಲ್ಲಿ ಗುಂಡಿಗಳನ್ನು ತೋಡಿ ವರತೆ ನೀರು ಸಂಗ್ರಹಿಸಿ ಕುಡಿಯವಂತಾಗಿದೆ. ನಿತ್ಯ ಗ್ರಾಮದ ಜನರು ನದಿ ತೀರಕ್ಕೆ ಆಗಮಿಸಿ ಅಲ್ಲಿ ವರತೆ ತೋಡಿ ನೀರು ಸಂಗ್ರಹಿಸಿ ಕೊಂಡ್ಯೊಯುವಂತಹ ಸ್ಥಿತಿ ಎದುರಾಗಿದೆ.

62 ಗ್ರಾಮಗಳಲ್ಲಿ ನೀರಿನ ಸಮಸ್ಯೆ:

ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳ 317 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾಡಳಿತ ಗುರುತಿಸಿದೆ. ಈಗಾಗಲೇ 62 ಗ್ರಾಮಗಳಿಗೆ 108 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಎಂಟು ಸ್ಥಳೀಯ ನಗರ ಸಂಸ್ಥೆಗಳ ಪೈಕಿ 90 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ವಿಶೇಷವಾಗಿ ನಗರ ಪ್ರದೇಶಗಳು ನದಿ ಮೂಲಗಳಿಂದ ಅವಲಂಬಿತವಾಗಿರುವುದರಿಂದ ಹಾವೇರಿ ಮತ್ತು ಗುತ್ತಲ ನಗರ ಪ್ರದೇಶಗಳಿಗೆ ನದಿ ನೀರು ಪೂರೈಕೆಗೆ ತೊಂದರೆಯಾಗಿದೆ. ನಗರದಲ್ಲಿ ಬೋರ್‌ವೆಲ್‌ಗಳು ಕೈಕೊಡುತ್ತಿದ್ದು, ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ತುಂಗಭದ್ರಾ, ವರದಾ ನದಿಗಳು ಹರಿದಿದ್ದರೂ ಜಿಲ್ಲಾ ಕೇಂದ್ರಕ್ಕೆ ಬೇಸಿಗೆ ಕಾಲದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬ್ಯಾರೇಜ್‌ಗಳು ಖಾಲಿ: ಮಳೆಗಾಲದ ಸಂದರ್ಭದಲ್ಲಿ ಮೈದುಂಬಿ ಹರಿಯುವ ವರದಾ ನದಿ, ಬೇಸಿಗೆ ಕಾಲದಲ್ಲಿ ತನ್ನ ಒಡಲನ್ನು ಬರಿದಾಗಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಬೇಸಿಗೆ ಕಾಲದಲ್ಲಿಯೂ ನದಿಯಲ್ಲಿ ಸಮರ್ಪಕ ನೀರು ಹರಿಸಬೇಕು ಎಂಬ ಉದ್ದೇಶದಿಂದ ನದಿಗೆ ಅಡ್ಡಲಾಗಿ ಜಿಲ್ಲೆಯಲ್ಲಿ ೧೦ಕ್ಕೂ ಹೆಚ್ಚು ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಆದರೆ, ಮಳೆ ಕೈಕೊಟ್ಟಿದ್ದರಿಂದ ನದಿಯ ಒಡಲು ಬರಿದಾಗಿರುವ ಪರಿಣಾಮ ಈಗ ಬ್ಯಾರೇಜ್‌ಗಳಲ್ಲಿಯೂ ಹನಿ ನೀರು ಇಲ್ಲದ ಪರಿಸ್ಥಿತಿ ಎದುರಾಗಿದೆ.

ಇನ್ನು ವರದಾ, ತುಂಗಭದ್ರಾ ನದಿ ನೀರು ಆಧರಿಸಿ ಕೆಲವು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ನದಿಯಲ್ಲಿ ನೀರು ಇಲ್ಲದೇ ಇರುವುದರಿಂದ ಬಹುತೇಕ ಆ ಗ್ರಾಮಸ್ಥರೆಲ್ಲ ಕುಡಿಯುವ ನೀರಿಗಾಗಿ ಕೊಳವೆಬಾವಿಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಜಿಲ್ಲೆಯ ೩೧೭ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಅಂದಾಜು ಮಾಡಲಾಗಿದೆ. ಈ ಗ್ರಾಮಗಳಲ್ಲಿ ೪೫೮ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಪ್ರಸ್ತುತ ೬೨ ಗ್ರಾಮಗಳಿಗೆ ೧೦೮ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಯಾವುದೇ ಗ್ರಾಮಕ್ಕೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿಲ್ಲ. ಮುಂದಿನ ೪೪ ವಾರಗಳ ವರೆಗೆ ಮೇವಿನ ಲಭ್ಯತೆ ಇದೆ. ಬರ ನಿರ್ವಹಣೆಗೆ ಪ್ರತಿ ತಹಸೀಲ್ದಾರರಿಗೆ ₹೫೦ ಲಕ್ಷ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ವಿಪತ್ತು ನಿರ್ವಹಣಾ ಖಾತೆಯಲ್ಲಿ ₹೮ ಕೋಟಿ ಹಣ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದ್ದಾರೆ.

Share this article