ಉಮ್ಮಚಗಿಯಲ್ಲಿ ರೈತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಹವಾಮಾನ ವೈಪರೀತ್ಯ ಜಾಗತಿಕ ಮಟ್ಟದ ಸಮಸ್ಯೆಯಾಗಿದ್ದು, ಅದರಿಂದ ನಮಗೆ ತೊಂದರೆ ಇಲ್ಲವೆಂದು ಹೇಳುವುದು ಸರಿಯಲ್ಲ. ನಾವಿರುವುದು ಪಶ್ಚಿಮ ಘಟ್ಟವಾದ್ದರಿಂದ ಅರಣ್ಯದ ಮೇಲೆ ಆಗುತ್ತಿರುವ ಗಂಭೀರ ಪರಿಣಾಮದ ಕುರಿತು ಗಮನಿಸಬೇಕು ಎಂದು ಶಿರಸಿ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್. ವಾಸುದೇವ ಹೇಳಿದರು.
ಧಾರವಾಡದ ಕೃಷಿ ವಿಶ್ವ ವಿದ್ಯಾಲಯ, ಧಾರವಾಡದ ಕೃಷಿ ಹವಾಮಾನ ಮುನ್ಸೂಚನಾ ಘಟಕ, ನವದೆಹಲಿಯ ಭಾರತ ಹವಾಮಾನ ಇಲಾಖೆ, ಉಮ್ಮಚಗಿ ವಿಎಸ್‌ಎಸ್ ಸಂಯುಕ್ತ ಆಶ್ರಯದಲ್ಲಿ ಉಮ್ಮಚಗಿ ಸೊಸೈಟಿ ಸಭಾಭವನದಲ್ಲಿ ಹವಾಮಾನ ಆಧಾರಿತ ಕೃಷಿ ಸಲಹೆ ಹಾಗೂ ಹವಾಮಾನ ಬದಲಾವಣೆಯಿಂದ ಕೃಷಿಯ ಮೇಲಾಗುವ ಪರಿಣಾಮಗಳು ಎಂಬ ವಿಷಯದಲ್ಲಿ ರೈತರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಡಕೆಗೆ ಬಂದಿರುವ ಎಲೆಚುಕ್ಕೆ ರೋಗಕ್ಕೆ ಮೂಲ ಕಾರಣ ಏನೆಂಬುದು ಇನ್ನೂ ಗೊತ್ತಿಲ್ಲ ಎಂದು ಹೇಳಿದರು.ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕ ಹಾಗೂ ಪ್ರಧಾನ ನೋಡಲ್ ಅಧಿಕಾರಿ ಡಾ. ಎಂ.ಪಿ. ಪೋತದಾರ ಮಾತನಾಡಿ, ನಮಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಂಗಳೂರಿನಿಂದ ಮುಂದಿನ ನಾಲ್ಕು ದಿನಗಳ ಹವಾಮಾನ ಮುನ್ಸೂಚನೆ, ಮುಖ್ಯವಾಗಿ ನಮ್ಮ ಪ್ರದೇಶದಲ್ಲಿ ಆಗಬಹುದಾದ ಮಳೆಯ ಮಾಹಿತಿ ಬರುತ್ತದೆ. ಅಂದಿನ ಮಾಹಿತಿ ಅಂದೇ ಗುಂಪುಗಳಿಗೆ ಹಂಚುವ ಮೂಲಕ ರೈತರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಆ ಮೂಲಕ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಕ್ರಮಬದ್ಧವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಚರ್ಚೆಯಲ್ಲಿ ಪ್ರಗತಿಪರ ಕೃಷಿಕ ಶ್ರೀಧರ ಭಟ್ಟ ಹೊಸ್ಮನೆ ಮಾತನಾಡಿ, ಹವಾಮಾನ ಮುನ್ಸೂಚನೆಗಳು ರೈತರಿಗೆ ಸರಿಯಾಗಿ ತಲುಪದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸೇವಾ ಸಹಕಾರಿ ಸಂಘ ಮತ್ತು ಎಫ್‌ಟಿಒಗಳಿಗೆ ಹವಾಮಾನ ವರದಿಗಳನ್ನು ತಲುಪಿಸುವ ಕೆಲಸ ಮಾಡಿದರೆ ಅದು ಸುಲಭವಾಗಿ ರೈತರಿಗೆ ಸಿಗುತ್ತದೆಂಬ ಅಭಿಪ್ರಾಯ ರೈತ ವಲಯದಿಂದ ಮೂಡಿ ಬಂದಿತು.
ತಾಲೂಕಿನ ಕೃಷಿಸಖಿಯರು ಪ್ರಾರ್ಥಿಸಿದರು. ಪ್ರಾಧ್ಯಾಪಕ ಮತ್ತು ನೋಡಲ್ ಅಧಿಕಾರಿ ಡಾ. ಎಸ್.ಎಸ್. ಇನಾಮತಿ ಸ್ವಾಗತಿಸಿದರು. ತಾಂತ್ರಿಕ ಅಧಿಕಾರಿ ಡಾ. ಎಸ್ ಬಿ. ಯಲೇಹಳ್ಳಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.