ಉದ್ಘಾಟನೆಗೊಳ್ಳದ ಫುಡ್‌ ಜೋನ್‌ ಬಳಿ ಕೊಳಚೆ ನೀರು

KannadaprabhaNewsNetwork |  
Published : Feb 01, 2025, 12:03 AM IST
ಉದ್ಘಾಟನೆಗೊಳ್ಳದ ಫುಡ್‌ ಜೋನ್‌ ಬಳಿ ಕೊಳಚೆ ನೀರು! | Kannada Prabha

ಸಾರಾಂಶ

ಗುಂಡ್ಲುಪೇಟೆ ಸೆಸ್ಕಾಂ ಬಳಿ ಫುಡ್‌ ಜೋನ್‌ ಪೂರ್ವ ದಿಕ್ಕಿನಲ್ಲಿ ಕೊಳಚೆ ನೀರು ಕೆರೆಯಂತಾಗಿದ್ದು, ಈ ಭಾಗದ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದೆ.

• ರಂಗೂಪುರ ಶಿವಕುಮಾರ್

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದಲ್ಲಿ ಫುಡ್ ಜೋನ್‌ಗೆ ಬಿಡುಗಡೆಯಾದ ಅನುದಾನ ಬಳಕೆಗೆ ತೋರಿದ ಆಸಕ್ತಿಯನ್ನು ಪುರಸಭೆ ಮಳಿಗೆ ನಿರ್ಮಿಸುವಲ್ಲಿ ತೋರದಿದ್ದಕ್ಕೆ ಫುಡ್ ಜೋನ್ ಜಾಗವೀಗ ಕೊಳಚೆ ನೀರು ತಾಣವಾಗಿದೆ.ಮೈಸೂರು-ಊಟಿ ಹೆದ್ದಾರಿಯ ಸೆಸ್ಕಾಂ (ಕೆಇಬಿ) ಕಚೇರಿ ಬಳಿ ೧೮ ಲಕ್ಷ ರು.ವೆಚ್ಚದಲ್ಲಿ ೩೬ ಸೀಟ್ ಮಳಿಗೆ ನಿರ್ಮಿಸಿ ನಾಲ್ಕು ವರ್ಷ ಕಳೆದಿದೆ. ಆದರೀಗ ಫುಡ್ ಜೋನ್ ಮಳಿಗೆಗಳ ಬಳಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಪುರಸಭೆ ಮಳಿಗೆ ನಿರ್ಮಿಸಲು ತೋರಿದ ಕಾಳಜಿಯನ್ನು ಮಳಿಗೆ ಉದ್ಘಾಟನೆಗೂ ತೋರಲಿಲ್ಲ. ಪುರಸಭೆ ಫುಡ್‌ ಜೋನ್‌ ನಿರ್ಮಿಸಿ, ಅನುದಾನ ವ್ಯರ್ಥ ಮಾಡಿದ್ದೇ ಸಾಧನೆಯಾಗಿದ್ದು, ನಾಲ್ಕು ವರ್ಷಗಳಿಂದ ಫುಡ್‌ ಜೋನ್‌ ನಿರುಪಯುಕ್ತವಾಗಿದೆ. ೩೬ ಸೀಟ್ ಮಳಿಗೆಯೊಳಗೆ ವಿದ್ಯುತ್ ಕಂಬಗಳಿವೆ. ಅಲ್ಲದೆ ಮಳಿಗೆ ಮೇಲೆ ವಿದ್ಯುತ್ ಮೂರು ತಂತಿಗಳು ಹಾದು ಹೋಗಿವೆ. ವಿದ್ಯುತ್ ಕಂಬ ಸ್ಥಳಾಂತರಿಸಿ ಮಳಿಗೆ ಕಟ್ಟೋದು ಬಿಟ್ಟು ವಿದ್ಯುತ್ ಕಂಬದೊಳಗೆ ಮಳಿಗೆ ಕಟ್ಟಿದ್ದಾರೆ.

ನಾಲ್ಕು ವರ್ಷದ ಹಿಂದೆ ಕಟ್ಟಿದ ಫುಡ್ ಜೋನ್‌ನ ಎಲ್ಲ ಕೆಲಸ ಮುಗಿದಿದ್ದು ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ಆದರೆ ಸೆಸ್ಕಾಂ ಮಾತ್ರ ಸೀಟ್ ಮಳಿಗೆಯೊಳಗಿರುವ ವಿದ್ಯುತ್ ಕಂಬ ಮತ್ತು ಬದಲಾಯಿಸುವ ತನಕ ವಿದ್ಯುತ್ ಸಂಪರ್ಕ ಸೆಸ್ಕಾಂ ನೀಡುತ್ತಿಲ್ಲ.

ಅನಾಹುತ?:

ಒಂದು ವೇಳೆ ಪುರಸಭೆ ಒತ್ತಡಕ್ಕೆ ಮಣಿದು ವಿದ್ಯುತ್ ಸಂಪರ್ಕ ನೀಡಿದರೆ ಸೀಟ್ ಮಳಿಗೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬಿದ್ದರೆ ಆಗುವ ಅನಾಹುತಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಲಿದೆ.ಫುಡ್ ಜೋನ್ ಬೇಕಿತ್ತು:

ಫಾಸ್ಟ್ ಫುಡ್ ಒಂದೆಡೆ ಸಿಗಬೇಕು ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ನಿರ್ಮಾಣ ಮಾಡಲಾದ ಸುಮಾರು ೩೬ ಮಳಿಗೆಗಳು ಇದೀಗ ವ್ಯರ್ಥವಾಗಿ ಬಿದ್ದಿವೆ. ಕುಡುಕರ ಹಾಗೂ ಅನೈತಿಕ ಚಟುವಟಿಕೆಗೆ ತಾಣವಾಗಿ ಮಾರ್ಪಟ್ಟಿದೆ.

ಫುಡ್‌ ಜೋನ್‌ ಬಳಿ ಕೊಳಚೆ ನೀರು:

ಪಟ್ಟಣದ ಸೆಸ್ಕಾಂ (ಕೆಇಬಿ) ಬಳಿಯ ರಸ್ತೆ ಬದಿ ಫುಡ್‌ ಜೋನ್‌ನ ಪಕ್ಕದಲ್ಲೇ ದೊಡ್ಡ ಮೋರಿ ಇದೆ. ಅಲ್ಲದೆ ಫುಡ್‌ ಜೋನ್‌ ಹಿಂಭಾಗ ಹಾಗೂ ಪೂರ್ವ ಭಾಗದಲ್ಲಿ ಕೊಳಚೆ ನೀರು ನೀರು ನಿಂತು ಕಟ್ಟೆಯಂತಾಗಿದೆ. ದೊಡ್ಡ ಮೋರಿ ಬಳಿಯ ಬೇಕರಿ ಹಾಗೂ ಹೋಟೆಲ್‌, ಕ್ಯಾಂಟೀನ್‌ಗಳ ತ್ಯಾಜ್ಯ ದೊಡ್ಡ ಮೋರಿಯಲ್ಲಿ ಸುರಿದಿದ್ದಾರೆ. ಅಲ್ಲದೆ ಮೋರಿ ಬಳಿಯ ಫುಡ್‌ ಜೋನ್‌ ಹಿಂಭಾಗದ ಸಣ್ಣ ಜಾಗದಲ್ಲಿ ಕೊಳಚೆ ನೀರು ಹರಿಯುತ್ತಿದೆ.

ಸುತ್ತಲು ಗಿಡಗಂಟಿ:

ಸೀಟ್ ಮಳಿಗೆ ನಿರ್ಮಿಸಿ ವರ್ಷ ಕಳೆದಿರುವ ಹಿನ್ನೆಲೆ ಹಾಗೂ ಸಮರ್ಪಕವಾಗಿ ನಿರ್ವಹಣೆ ಇಲ್ಲದಿರುವ ಕಾರಣ ಫುಡ್ ಜೋನ್ ಸುತ್ತಲು ಗಿಡಗಂಟಿ ಬೆಳೆದು ನಿಂತಿವೆ. ಅಲ್ಲದೆ ವ್ಯರ್ಥವಾದ ಮಣ್ಣನ್ನು ಗುಡ್ಡ ಹಾಕಿದ್ದಾರೆ. ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ಬಿದ್ದು ಅನೈರ್ಮಲ್ಯ ತಾಂಡವವಾಡುತ್ತಿದೆ. ಫುಡ್‌ ಜೋನ್‌ ಹರಾಜು ಮಾಡಬೇಕು ಎಂದು ಅನುಮತಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಫುಡ್‌ ಜೋನ್‌ ಸ್ಥಳಾಂತರಿಸಿ ಎಂದು ಎಸ್ಸಿ, ಎಸ್ಟಿ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ. ಯುಜಿಡಿಯಿಂದ ಕೊಳಚೆ ನೀರು ಪ್ಲೋ ಆಗುತ್ತಿದೆ. ಕೊಳಚೆ ನೀರು ನಿಲ್ಲದಂತೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ.

-ಕೆ.ಪಿ.ವಸಂತಕುಮಾರಿ,ಪುರಸಭೆ ಮುಖ್ಯಾಧಿಕಾರಿ

‘ಫುಡ್ ಜೋನ್ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಉಪಯೋಗವಿಲ್ಲದೆ ನಿರುಪಯುಕ್ತವಾಗಿದೆ. ಫುಡ್‌ ಜೋನ್‌ ಸ್ಥಳಾಂತರಿಸಿ, ಅಲ್ಲಿ ಖಾಸಗಿ ಕಾರು ನಿಲ್ದಾಣ ಮಾಡಲಿ. ಇದೇ ಜಾಗದ ಮೂಲಕ ವಾಲ್ಮೀಕಿ ಭವನಕ್ಕೆ ಹೋಗಲು ಪುರಸಭೆ ಅವಕಾಶ ಮಾಡಿದರೆ ಫುಡ್‌ ಜೋನ್‌ ಜಾಗದಲ್ಲಿ ಸ್ವಚ್ಛತೆ ಕಾಣಲು ಸಾಧ್ಯ.

-ಮಹೇಶ್‌, ನಿವಾಸಿ, ಗುಂಡ್ಲುಪೇಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ