ಮನೆಯಂಗಳಕ್ಕೆ ಚರಂಡಿ ನೀರು: ಉಕ್ಕಡಗಾತ್ರಿ ಜನ ಹೈರಾಣ!

KannadaprabhaNewsNetwork |  
Published : Jul 17, 2024, 12:52 AM IST
 ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರು | Kannada Prabha

ಸಾರಾಂಶ

ರಾಜ್ಯಾದ್ಯಂತ ಡೆಂಘೀಜ್ವರ ಮತ್ತು ಚಿಕೂನ್‌ ಗುನ್ಯಾ ಬಾಧೆಗೆ ಅನೇಕ ಮಕ್ಕಳು, ನಾಗರೀಕರು ನರಳುತ್ತಿದ್ದಾರೆ. ಕೆಲವೆಡೆ ಮರಣವೂ ಸಂಭವಿಸಿದೆ. ಆರೋಗ್ಯ ಇಲಾಖೆ ಲಾರ್ವಾ ಸಮೀಕ್ಷೆಗೆ ಆದೇಶ ನೀಡಿದೆ. ಆದರೆ ಹರಿಹರ ತಾಲೂಕು ಉಕ್ಕಡಗಾತ್ರಿ ಗ್ರಾಮದಲ್ಲಿ ಸ್ಥಳೀಯ ಆಡಳಿತ ಮತ್ತು ಆರೋಗ್ಯ ಇಲಾಖೆ ಮಾತ್ರ ಡೆಂಘೀ, ಚಿಕೂನ್‌ ಗುನ್ಯಾ ನಿಯಂತ್ರಣಕ್ಕೆ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿದಂತಿದೆ.

- ಚರಂಡಿ ಕಾಮಗಾರಿ ಅಪೂರ್ಣ ಪರಿಣಾಮ 2 ವರ್ಷಗಳಿಂದ ಸಮಸ್ಯೆ ।

- ಸಮಸ್ಯೆ ಪರಿಹರಿಸಲಾಗದ ಹಾಲಿ-ಮಾಜಿ ಶಾಸಕರು, ಡಿಸಿ, ಇಒ - - -

ಎಚ್.ಎಂ.ಸದಾನಂದ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ರಾಜ್ಯಾದ್ಯಂತ ಡೆಂಘೀಜ್ವರ ಮತ್ತು ಚಿಕೂನ್‌ ಗುನ್ಯಾ ಬಾಧೆಗೆ ಅನೇಕ ಮಕ್ಕಳು, ನಾಗರೀಕರು ನರಳುತ್ತಿದ್ದಾರೆ. ಕೆಲವೆಡೆ ಮರಣವೂ ಸಂಭವಿಸಿದೆ. ಆರೋಗ್ಯ ಇಲಾಖೆ ಲಾರ್ವಾ ಸಮೀಕ್ಷೆಗೆ ಆದೇಶ ನೀಡಿದೆ. ಆದರೆ ಹರಿಹರ ತಾಲೂಕು ಉಕ್ಕಡಗಾತ್ರಿ ಗ್ರಾಮದಲ್ಲಿ ಸ್ಥಳೀಯ ಆಡಳಿತ ಮತ್ತು ಆರೋಗ್ಯ ಇಲಾಖೆ ಮಾತ್ರ ಡೆಂಘೀ, ಚಿಕೂನ್‌ ಗುನ್ಯಾ ನಿಯಂತ್ರಣಕ್ಕೆ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿದಂತಿದೆ.

ಉಕ್ಕಡಗಾತ್ರಿಯಲ್ಲಿ ಚರಂಡಿಗಳೆಲ್ಲ ಕೊಳಚೆ ನೀರಿನಿಂದ ಕೂಡಿದ್ದು, ದುರ್ವಾಸನೆ ಬೀರುತ್ತಿವೆ. ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್‌ ವ್ಯಾಪ್ತಿ ಜನತೆಗಂತೂ ಚರಂಡಿ ಕೊಳಚೆ ನೀರು ಪ್ರತಿದಿನ ನರಕ ತೋರಿಸುತ್ತಿದೆ. ಮನೆ ಮುಂಭಾಗದ ರಸ್ತೆಯಲ್ಲಿ ಚರಂಡಿ ನೀರು ಹರಿದು 5 ಅಡಿಯಷ್ಟು ಸಂಗ್ರಹವಾಗಿದೆ. ಇದರಿಂದ ಇಲ್ಲಿಯ ನಿವಾಸಿಗಳಿಗೆ ದುರ್ವಾಸನೆ ಉಸಿರಾಡುತ್ತಲೇ ಜೀವನ ಸಾಗಿಸಬೇಕಾದ ದುರಂತ ಎದುರಾಗಿದೆ.

ಮಳೆಗಾಲದಲ್ಲಿ ಜನರ ಸಮಸ್ಯೆಗೆ ಸಕಾಲಕ್ಕೆ ಸ್ಪಂದಿಸಿ, ಕ್ರಮ ಕೈಗೊಳ್ಳದ ಗ್ರಾಪಂ ಆಡಳಿತ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಡೆಂಘೀ, ಚಿಕೂನ್‌ ಗುನ್ಯಾ, ಮಲೇರಿಯಾ, ಕಾಲರಾ ರೋಗಗಳು ಹರಡುವ ಭಯ ಹೆಚ್ಚಾಗಿ ಕಾಡುತ್ತಿದೆ. ಮನೆಗಳಲ್ಲಿ ತೇವಾಂಶ ಕಂಡುಬಂದಿದೆ. ಬದುಕು ಕಟ್ಟಿಕೊಂಡ ಮನೆಗಳನ್ನೇ ತೊರೆಯಬೇಕಾಗಿದೆ ಎಂಬ ವಿಚಾರ ಅವರನ್ನು ಘಾಸಿಗೊಳಿಸಿದೆ.

ದಿನಕ್ಕೆ ಚರಂಡಿಯಲ್ಲಿ ಸಾವಿರಗಟ್ಟಲೆ ಸೊಳ್ಳೆ ಮೊಟ್ಟೆಗಳು, ಲಾರ್ವಾ ಮತ್ತು ಸೊಳ್ಳೆಗಳು ಉತ್ಪತ್ತಿಯಾಗುವ ಕೇಂದ್ರವಾಗಿ ಮಾರ್ಪಟ್ಟಿದೆ. ಹೀಗಿದ್ದರೂ ಯಾವೊಬ್ಬ ಜನಪ್ರತಿನಿಧಿಗೂ ಇಲ್ಲಿನ ಸಮಸ್ಯೆ ಗಮನಕ್ಕೆ ಬಂದಿಲ್ಲ. ಕರಿಬಸವೇಶ್ವರ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರು ಮತ್ತು ನಿವಾಸಿಗಳ ಆರೋಗ್ಯ ಕಾಪಾಡುವುದು ಗ್ರಾಮ ಪಂಚಾಯಿತಿ ಆದ್ಯ ಕರ್ತವ್ಯವಾಗಿದೆ, ಭಕ್ತರ ವಾಹನಗಳಿಗೆ ಶುಲ್ಕ ವಸೂಲಿ ಮಾಡುವುದಕ್ಕೆ ಮಾತ್ರ ಆಡಳಿತವೇ ಎಂಬುದು ನಿವಾಸಿಗಳು, ಸಾರ್ವಜನಿಕರ ಪ್ರಶ್ನೆ.

ಗ್ರಾಪಂ ಒಂದನೇ ವಾರ್ಡ್‌ನ ಸಾವಿರಾರು ಜನಸಂಖ್ಯೆಯ ಹೀನಾಯ ಸ್ಥಿತಿ ಕಂಡು ಎಂಥವರಿಗೂ ಮರುಕ ಬರುತ್ತಿದೆ. ಡೆಂಘೀ ಹಾಗೂ ಚಿಕೂನ್‌ ಗುನ್ಯಾ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಸತತ 2 ವರ್ಷಗಳಿಂದ ಚರಂಡಿ ನೀರಿನ ಸಮಸ್ಯೆ ಜನರನ್ನು ಬಾಧಿಸುತ್ತಿದೆ. ಜಿಲ್ಲಾಧಿಕಾರಿ, ತಾಪಂ ಇಒ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಲಿ ಶಾಸಕ ಹರೀಶ್‌, ಮಾಜಿ ಶಾಸಕ ರಾಮಪ್ಪ ಸಹ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಏನೆಂಬುದು ಅರಿತಿದ್ದಾರೆ. ಆದರೆ, ಇದುವರೆಗೂ ಯಾರೊಬ್ಬರೂ ಸಮಸ್ಯೆಗೆ ಪರಿಹಾರ ಮಾತ್ರ ನೀಡಿಲ್ಲ.

ಜಿಲ್ಲಾಮಟ್ಟದ ಅಧಿಕಾರಿಗಳು ಈ ಗ್ರಾಪಂ ವಾರ್ಡ್‌ಗೆ ಬಂದು ಚರಂಡಿ ಅಪೂರ್ಣ ಕಾಮಗಾರಿ ಪರಿಶೀಲಿಸಿದ್ದಾರೆ. ಚರಂಡಿ ನೀರು ಮುಂದೆ ಹರಿಸಲು ಖಾಸಗಿ ಮಾಲೀಕರ ಜಮೀನು ಅಡ್ಡ ಬರುತ್ತದೆ. ಚರಂಡಿ ನೀರಿನ ಪೈಪ್‌ಲೈನ್‌ ಅಳವಡಿಸಲು ಜಮೀನು ಮಾಲೀಕರು ಒಪ್ಪದಿರುವುದೇ ಹದಿನೈದಕ್ಕೂ ಅಧಿಕ ಕುಟುಂಬಗಳ ಜನರು ಚರಂಡಿ ದುರ್ವಾಸನೆ, ಕೊಳಚೆ ನೀರಿನಿಂದ ಸಂಕಟ ಪಡುವಂತಾಗಿದೆ.

- - -

ಬಾಕ್ಸ್‌

* ಹತ್ತಾರು ಕುಟುಂಬಗಳಿಗೆ ನಿತ್ಯನರಕ

ಕಾಮಗಾರಿ ಕುರಿತು ಗುತ್ತಿಗೆದಾರರ ಜತೆ ಚರ್ಚೆ ನಡೆಸುತ್ತೇವೆ ಎಂದು ಗ್ರಾಪಂ ಪಿಡಿಒ ರಾಮಚಂದ್ರಪ್ಪ ಹೇಳಿ ಕೈ ತೊಳೆದುಕೊಂಡಿದ್ದಾರೆ. ಆದರೆ, ಚರಂಡಿ ನೀರು ಸರಾಗವಾಗಿ ಹರಿಯದೇ ಮನೆಗಳ ಬುನಾದಿಗೆ ಹಾನಿ ತರುವ ಆತಂಕ ಎದುರಾಗಿದೆ. ಮಳೆಗಾಲದಲ್ಲಿ ಮೊಳಕಾಲುದ್ದ ಸಂಗ್ರಹವಾಗಿರುವ ಚರಂಡಿ ನೀರಿನಲ್ಲಿಯೇ 15ಕ್ಕೂ ಅಧಿಕ ಕುಟುಂಬಗಳ ಜನರು ಸಮಸ್ಯೆ ಅನುಭವಿಸುತ್ತ ಸಂಚರಿಸಬೇಕಾದ ದುಸ್ಥಿತಿ ಇಲ್ಲಿದೆ ಎಂದು ಗ್ರಾಮಸ್ಥರಾದ ಕರಿಬಸಪ್ಪ, ಬಸವರಾಜ್, ಸಿದ್ದಪ್ಪ, ಚಂದ್ರಪ್ಪ, ಅನುಸೂಯಮ್ಮ, ಬಸಪ್ಪ, ದೂರಿದ್ದಾರೆ.

- - - -೨.: ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರು

-೩.: ರಸ್ತೆಯಲ್ಲಿ ನಿಂತಿರುವ ದುರ್ನಾತದ ಚರಂಡಿ ನೀರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ