ಶಿರಹಟ್ಟಿ: ಸಂತ ಸೇವಾಲಾಲ್ ಮಹಾರಾಜರು ಕರ್ನಾಟಕದ ಪ್ರಮುಖ ದಾರ್ಶನಿಕರಲ್ಲಿ ಒಬ್ಬರು. ಬಂಜಾರ ಸಮುದಾಯದ ಆರಾಧ್ಯ ದೈವರಾದ ಅವರು ಜನಾಂಗದಲ್ಲಿ ಅಪಾರ ಬದಲಾವಣೆ ತಂದು ಸಾಂಸ್ಕೃತಿಕ ರಾಯಭಾರಿಯಾದರು. ಅವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಅವುಗಳ ಅರಿತು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಿದಾಗ ಜಯಂತಿಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ನಾಗರಿಕತೆಯ ಅರಿವೇ ಇಲ್ಲದ ಜನಾಂಗವೊಂದು ಸಂತ ಶ್ರೀಸೇವಾಲಾಲ್ ಮಹಾರಾಜರ ತತ್ವಾದರ್ಶ ಚಾಚು ತಪ್ಪದೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶ, ರಾಜ್ಯಕ್ಕೆ ತಮ್ಮ ಸಾಧನೆ ತೋರಿಸಿಕೊಟ್ಟಿದ್ದಾರೆ ಎಂದರು.
ಅಹಿಂಸೆ ತತ್ವಗಳಡಿ ಬಾಳಬೇಕು. ಅಂದಾಗ ಮಾತ್ರ ಒಳ್ಳೆಯ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂಬುದನ್ನು ಶ್ರೀಸೇವಾಲಾಲ್ ಮಹಾರಾಜರು ಸುಮಾರು ೨೫೦ ವರ್ಷಗಳ ಹಿಂದೆಯೇ ಸಮಾಜಕ್ಕೆ ನೀಡಿದ ಸಂದೇಶ ಅರಿತಿರುವ ಲಂಬಾಣಿ ಸಮುದಾಯ ಸುಧಾರಣೆ ಕಂಡಿದ್ದಾರೆ. ೧೭೩೯ರಲ್ಲಿ ಜನಿಸಿದ ಸಂತ ಶ್ರೀಸೇವಾಲಾಲ್ ಮಹಾರಾಜರ ತತ್ವ ನಾಗರಿಕ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದು ಹೇಳಿದರು.ಶ್ರೀ ಸಂತ ಸೇವಾಲಾಲ್ ಮಹಾರಾಜರು ಬಾಲ್ಯದಲ್ಲಿಯೇ ಪವಾಡ ಪುರುಷರಾಗಿದ್ದರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.ಅನೇಕ ಭವಿಷ್ಯವಾಣಿ ನುಡಿದಿರುವ ಸೇವಾಲಾಲರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ಅಳವಡಿಸಿಕೊಂಡು ಎಲ್ಲರಂತೆ ಅರಿತು ಬಾಳಬೇಕು ಎಂದು ತಿಳಿಸಿದರು.
ಸಮಾಜದ ಮುಖಂಡರು ಮಾತನಾಡಿ, ಬಂಜಾರ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಇನ್ನು ಸುಧಾರಣೆ ಆಗಬೇಕಿದೆ. ಸೇವಾಲಾಲರ ಚರಿತ್ರೆ ಸಮಾಜ ಬಾಂಧವರು ತಿಳಿದುಕೊಳ್ಳಬೇಕು. ಸೂಫಿ ಸಂತರು, ಶರಣರು, ದಾರ್ಶನಿಕರು ಜಾತಿ ಭೇದ ಮರೆತು ಮಾನವರಾಗಿ ಬದುಕಬೇಕು ಎಂಬ ಸಂದೇಶ ಸಮಾಜಕ್ಕೆ ನೀಡಿದ್ದಾರೆ. ಅದನ್ನು ಅನುಸರಿಸಿ ನಡೆಯಬೇಕು ಎಂದು ಹೇಳಿದರು.ಕಲಿಯಬೇಕು ಕಲಿತದ್ದನ್ನು ಇತರರಿಗೂ ಕಲಿಸಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಿ ಉದ್ದರಿಸಬೇಕು ಎಂಬ ಶ್ರೀಸಂತ ಸೇವಾಲಾಲ್ ಅವರ ತತ್ವ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಲಂಬಾಣಿಗರಲ್ಲಿ ಸೇವಾಲಾಲರು ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು,ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮ ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು ತಮ್ಮ ಜನಾಂಗದ ಸೇವೆ ಮಾಡಿದ ಮಹಾನ್ ಹಿತಚಿಂತರು, ದಾರ್ಶನಿಕರು ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ದೇವಪ್ಪ ಲಮಾಣಿ, ಎಂ.ಕೆ. ಲಮಾಣಿ, ಹನಮಂತ ಲಮಾಣಿ, ಚೋಕಲಪ್ಪ ಲಮಾಣಿ, ಮಾರೂತಿ ರಾಠೋಡ, ಗೋಪಾಲ ಲಮಾಣಿ, ತಿಪ್ಪಣ್ಣ ಲಮಾಣಿ, ಈರಣ್ಣ ಚವ್ಹಾಣ, ನಿಂಗಪ್ಪ ಲಮಾಣಿ, ಮಲ್ಲಿಕಾರ್ಜುನ ಪಾಟೀಲ, ಆನಂದ ನಾಯಕ ಸೇರಿದಂತೆ ಇತರರು ಇದ್ದರು.