ಒಳಚರಂಡಿ ಕಾಮಗಾರಿ ಅಪೂರ್ಣ: ಅಸಮಾಧಾನ

KannadaprabhaNewsNetwork |  
Published : Apr 17, 2025, 12:15 AM IST
ಕುಶಾಲನಗರ  ಪುರಸಭೆ ವಿಶೇಷ ಸಾಮಾನ್ಯ ಸಭೆಯ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಯೋಜನೆಯ ನಿರ್ವಹಣೆಯ ಬಗ್ಗೆ ಒಳಚರಂಡಿ ಅಧಿಕಾರಿಗಳು ಮತ್ತು ಪುರಸಭೆ ನಡುವೆ ಸಮಸ್ಯೆ ಇತ್ಯರ್ಥಗೊಳ್ಳದೆ ಇರುವ ಬಗ್ಗೆ ಬುಧವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದವು.

ಕುಶಾಲನಗರ ಪುರಸಭಾ ವಿಶೇಷ ಸಭೆ । ಅಧಿಕಾರಿಗಳನ್ನು ತರಾಟೆಗೆ ತೆಗೆದ ಸದಸ್ಯೆರು

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಯೋಜನೆಯ ನಿರ್ವಹಣೆಯ ಬಗ್ಗೆ ಒಳಚರಂಡಿ ಅಧಿಕಾರಿಗಳು ಮತ್ತು ಪುರಸಭೆ ನಡುವೆ ಸಮಸ್ಯೆ ಇತ್ಯರ್ಥಗೊಳ್ಳದೆ ಇರುವ ಬಗ್ಗೆ ಬುಧವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದವು.

ಕುಶಾಲನಗರ ಪುರಸಭಾ ಅಧ್ಯಕ್ಷೆ ಜಯಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಮತ್ತು ಒಳಚರಂಡಿ ಮಂಡಳಿ ಅಧಿಕಾರಿ ಪ್ರಸನ್ನ ಕುಮಾರ್ ನಡುವೆ ಚರ್ಚೆಗಳು ನಡೆದವು.ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭ ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿ ಪ್ರಸನ್ನ ಕುಮಾರ್, ಕಳೆದ ಮೂರು ತಿಂಗಳಿನಿಂದ ಪ್ರಥಮ ಹಂತದ ಕಾಮಗಾರಿ ಚಾಲನೆಯಲ್ಲಿದೆ. ಮಂಡಳಿಯ ಮೂಲಕ ನಿರ್ವಹಣೆ ನಡೆಯುತ್ತಿದೆ. ಮನೆಮನೆಯ ಸಂಪರ್ಕ ನೀಡುವ ಕಾಮಗಾರಿ ಉಳಿದಿದ್ದು, ಈ ಸಂಬಂಧ ಪುರಸಭೆ ಮೂಲಕ ನಿರ್ವಹಣೆಗಾಗಿ ಅಂದಾಜು 12 ಲಕ್ಷ ರು.ಗಳು ಪಾವತಿ ಆಗಬೇಕಾಗಿದೆ ಎಂದು ತಿಳಿಸಿದರು.ಈ ಸಂದರ್ಭ ಪ್ರತಿಕ್ರಿಯೆ ವ್ಯಕ್ತಪಡಿಸಿದ ಪುರಸಭಾ ಸದಸ್ಯರು, ಮಹಾತ್ವಕಾಂಕ್ಷೆ ಯೋಜನೆ ಅಧಿಕಾರಿ ನಿರ್ಲಕ್ಷ್ಯದಿಂದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಹಿಂದೆ ಮುಂದಿನ ಹದಿನೈದು ದಿನಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಭೆಯಲ್ಲಿ ಹೇಳಿದ್ದರು. ಆದರೆ ಕಾಮಗಾರಿ ಮುಗಿದಿಲ್ಲ, ಯೋಜನೆ ಕೂಡ ಅಪೂರ್ಣಗೊಂಡಿದೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯ ಜಯವರ್ಧನ್, ಆನಂದ್ ಕುಮಾರ್, ಅಮೃತ್, ರೇಣುಕಾ, ಪ್ರಕಾಶ್, ಜಗದೀಶ್ ಮಾತನಾಡಿ, ಈ ಯೋಜನೆ ಆರಂಭಗೊಂಡು ಹತ್ತು ವರ್ಷ ಕಳೆದಿದೆ. ಈ ಯೋಜನೆಗೆ ಅಂದಾಜು 60 ಕೋಟಿ ರು.ಗೂ ಮಿಕ್ಕಿ ಅನುದಾನ ಬಿಡುಗಡೆಯಾಗಿ ಬಳಕೆ ಮಾಡಲಾಗಿದೆ. ಆದರೆ ಯೋಜನೆ ಮುಗಿಯದೆ ಪಟ್ಟಣದ ಜನರಿಗೆ ಒಳಚರಂಡಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಬಹುತೇಕ ಕಡೆಗಳಲ್ಲಿ ಕಾಮಗಾರಿಗೆ ಹಾನಿಯಾಗಿದ್ದು, ದುರ್ವಾಸನೆ ಕೂಡ ಬರುತ್ತಿದೆ. ಈ ಮೂಲಕ ಯೋಜನೆಯ ಸ್ವಚ್ಛ ಪಟ್ಟಣ ಸ್ವಚ್ಛ ಕಾವೇರಿ ಗುರಿ ಕೂಡ ಈಡೇರದೇ ನದಿ ನೇರವಾಗಿ ಕಲುಷಿತಗೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ಈ ಕಾಮಗಾರಿ ವಿಳಂಬದ ಲೋಪದೋಷ ಹಾಗೂ ಅನುದಾನ ಬಳಕೆ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಇತರೆ ಸದಸ್ಯರು ಕೂಡ ದ್ವನಿಗೂಡಿಸಿದರು. ಸದಸ್ಯರ ಒಮ್ಮತದ ಮೇರೆಗೆ ಒಳಚರಂಡಿ ಯೋಜನೆಯ ಕಾಮಗಾರಿ ಹಾಗೂ ಅನುದಾನ ಬಳಕೆ ಕುರಿತು ಉನ್ನತ ಅಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸದ್ಯದಲ್ಲಿಯೇ ಒಳಚರಂಡಿ ಕಾಮಗಾರಿ ವಿಷಯ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯಬೇಕು ಈ ಸಂದರ್ಭ ಒಳಚರಂಡಿ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿರಬೇಕು ಎಂದು ಸಭೆ ನಿರ್ಣಯ ಕೈಗೊಂಡಿತು. ಸದಸ್ಯ ಅಮೃತ್‌ರಾಜ್ ಮಾತನಾಡಿ, ಪುರಸಭೆ ವತಿಯಿಂದ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು. ತೆರಿಗೆ ವ್ಯವಸ್ಥೆಯನ್ನು ಸರಿಪಡಿಸದೆ ಹೋದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಜಯಲಕ್ಷ್ಮಿ ಭರವಸೆ ನೀಡಿದರು.

ಸದಸ್ಯ ಪ್ರಕಾಶ್ ಮಾತನಾಡಿ, ಗಂಧದಕೋಟೆ, ಕಾರು ಚಾಲಕರ ಬಡಾವಣೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಆದ್ದರಿಂದ ಈ ಭಾಗದಲ್ಲಿ ಕೊಳವೆ ಬಾವಿ ತೆಗೆದು ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸದಸ್ಯ ಜಗದೀಶ್ ಮಾತನಾಡಿ, ಗೊಂದಿಬಸವನಹಳ್ಳಿ, ಗಂಧದಕೋಟೆ ಭಾಗದಲ್ಲಿ ರಸ್ತೆ, ಚರಂಡಿಗೆ ಸೂಕ್ತ ಅನುದಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಸದಸ್ಯೆ ಜಯಲಕ್ಷ್ಮೀ ನಂಜುಂಡಸ್ವಾಮಿ ಮಾತನಾಡಿ, ಮಾಂಸ ಮಾರುಕಟ್ಟೆ ಆವರಣದಲ್ಲಿ ಕಸ ವಿಂಗಡಣೆ ಮಾಡುತ್ತಿರುವ ಕ್ರಮ ಸರಿಯಿಲ್ಲ. ಇದರಿಂದ ಸುತ್ತ ಮುತ್ತ ನೊಣಗಳ ಹಾವಳಿ ಜಾಸ್ತಿಯಾಗಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಮಾಂಸ ಖರೀದಿಗೂ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಕಸ ವಿಂಗಡಣೆಯನ್ನು ಕೂಡಲೇ ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದರು.

ಪುರಸಭೆಗೆ 2025-26ನೇ ಸಾಲಿನ 15ನೇ ಹಣಕಾಸು ಅನುದಾನ ಮತ್ತು ಎಸ್‌ಎಫ್‌ಸಿ ಅನುದಾನದ ಎಸ್.ಟಿ.ಪಿ. ಮತ್ತು ಟಿ.ಎಸ್.ಪಿ ಅನುದಾನದ ಕ್ರಿಯಾಯೋಜನೆಗೆ ಹಾಗೂ ಹೊರಗುತ್ತಿಗೆ ಆಧಾರದ ಮೇರೆಗೆ ವಾಹನ ಚಾಲಕರು ಹಾಗೂ ಲೋಡರ್‌ಗಳನ್ನು ನೇಮಿಸಿಕೊಳ್ಳಲು ಟೆಂಡರ್ ಕರೆಯಲಾಗಿದ್ದು, ಆರ್ಥಿಕ ಬಿಡ್‌ಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.* ಪುರಸಭೆಗೆ 109 ಲಕ್ಷ ರು. ಅನುದಾನ

ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಮಾತನಾಡಿ, ಪುರಸಭೆಗೆ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 109 ಲಕ್ಷ ರು. ಅನುದಾನ ಹಾಗೂ ಎಸ್.ಎಫ್.ಸಿ., ಎಸ್.ಟಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ 19 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ನಿರ್ಬಂಧಿತ ಯೋಜನೆಗಳು 65.40 ಲಕ್ಷ ರು. ಹಾಗೂ ಅನಿರ್ಬಂಧಿತ ಯೋಜನೆಗಳಿಗೆ 43 ಲಕ್ಷ ರು. ಅನುದಾನ ಮೀಸಲಿಡಲಾಗಿದೆ. ಕುಡಿಯುವ ನೀರಿನ ಯೋಜನೆಗೆ 32.70 ಲಕ್ಷ ಹಾಗೂ ಘನ ತ್ಯಾಜ್ಯವಸ್ತು ನಿರ್ವಹಣೆಗೆ, ವಾಹನ ಖರೀದಿಗೆ 32.70 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ಉದ್ಯಾನವನ, ಬೀದಿದೀಪ, ಮಳೆನೀರು ಯೋಜನೆಯಡಿ ಕಾಮಗಾರಿ, ಪಾದಚಾರಿ ಮಾರ್ಗ ನಿರ್ಮಾಣ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ನೈರ್ಮಲ್ಯ ವ್ಯವಸ್ಥೆ, ಪೌರ ಕಾರ್ಮಿಕರಿಗೆ ಮನೆ ದುರಸ್ತಿ, ಪರಿಶಿಷ್ಟ ಜಾತಿ, ಪಂಗಡದವರಿಗೆ ಮನೆ ದುರಸ್ತಿ ಹಾಗೂ ವಿದ್ಯಾರ್ಥಿವೇತನ, ಪೌರ ಕಾರ್ಮಿಕರಿಗೆ ಆರೋಗ್ಯ ಚಿಕಿತ್ಸೆ ಉಳಿದ ಅನುದಾನವನ್ನು ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭ ಪುರಸಭೆಯ ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು.ಚಿತ್ರ ಕುಶಾಲನಗರ ಪುರಸಭೆ ವಿಶೇಷ ಸಾಮಾನ್ಯ ಸಭೆಯ ಸಂದರ್ಭ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''