- ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಂತಹ ಪಕ್ಷಗಳಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ - ನವಕರ್ನಾಟಕ ನಿರ್ಮಾಣ ಆಂದೋಲನದಿಂದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ಈವರೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಂತಹ ಪಕ್ಷಗಳು ಯಾವುದೇ ಹಂತದಲ್ಲೂ ಜನಸಾಮಾನ್ಯರು, ರೈತರು, ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿಲ್ಲ. ಆದ್ದರಿಂದ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಅಸ್ತಿತ್ವದ ತುರ್ತು ಅಗತ್ಯವಿದೆ. ಈ ಹಿನ್ನೆಲೆ ಆಂದೋಲನ ಆರಂಭಿಸಲಾಗಿದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಬುಧವಾರ ನವಕರ್ನಾಟಕ ನಿರ್ಮಾಣ ಆಂದೋಲನ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಜನರು, ರೈತರು, ಕೂಲಿ ಕಾರ್ಮಿಕರಿಗೆ ಸ್ಪಂದಿಸುವ ಪಕ್ಷವಾಗಿ ಕರ್ನಾಟಕ ನಿರ್ಮಾಣ ಆಂದೋಲನಾ ಸ್ಥಾಪಿಸಲಾಗಿದೆ ಎಂದರು.ನಮ್ಮ ದಾರಿಯನ್ನು ನಾವೇ ಹುಡುಕಿಕೊಂಡು ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಶೀಘ್ರವೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ತರುವ ಜಾಗೃತಿ ನಡೆದಿದೆ. ಈಗಾಗಲೇ ನವ ಕರ್ನಾಟಕ ನಿರ್ಮಾಣ ಆಂದೋಲನ ಹೆಸರಿನಲ್ಲಿ ರೈತ ಚಳವಳಿ, ದಲಿತ ಚಳವಳಿ, ಕನ್ನಡ ಭಾಷಾ ಚಳವಳಿ, ಮಹಿಳಾ ಚಳವಳಿ, ವಿದ್ಯಾರ್ಥಿ, ಯುವಜನರ ಚಳವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟವನ್ನು ಜನರ ಮುಂದಿಡಲು, ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆಗೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.
ಅಖಿಲ ಭಾರತ ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ ಮಾತನಾಡಿ, ದಲಿತರು, ಹಿಂದುಳಿದವರು, ಅಸ್ಪೃಶ್ಯರು, ಹೋರಾಟಗಾರರ ಮೇಲೆ ನಿರಂತರ ದೌರ್ಜನ್ಯಗಳಾಗುತ್ತಿವೆ. ನಿರುದ್ಯೋಗ ಹೆಚ್ಚುತ್ತಿದೆ. ರೈತರ ಆತ್ಮಹತ್ಯೆಯೇ ನಿಂತಿಲ್ಲ. ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗಾಗಿ ಹೊಸ ಶಕ್ತಿ ಅಧಿಕಾರಕ್ಕೆ ಬರಬೇಕಾಗಿದೆ. ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳೇ ಇಂತಹ ಬದಲಾವಣೆಗೆ ನಿದರ್ಶನಗಳಾಗಿವೆ ಎಂದು ತಿಳಿಸಿದರು.
ರೈತ ಸಂಘದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೀರಣ್ಣ, ಅರುಣಕುಮಾರ, ಚಂದ್ರಣ್ಣ ಕಂದನಕೋವಿ, ವೀರಣ್ಣ ಗೌಡ ಪಾಟೀಲ್, ಚಿನ್ನಸಮುದ್ರ ಶೇಖರ ನಾಯ್ಕ ಇತರರು ಇದ್ದರು.
- - -
- ಕೋಡಿಹಳ್ಳಿ ಚಂದ್ರಶೇಖರ, ರೈತನಾಯಕ
-16ಕೆಡಿವಿಜಿ4: ದಾವಣಗೆರೆಯಲ್ಲಿಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು.