ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಕರಣದ ಬೆನ್ನಲ್ಲೇ ಮೈಲಾರಿ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಬಂಧಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗೆ ಸೂಚನೆ ಕೂಡ ನೀಡಿತ್ತು. ಆರೋಪಿ ಮೈಲಾರಿ ಪತ್ತೆಗಾಗಿ ಜಾಲ ಬೀಸಿದ್ದ ಪೊಲೀಸರಿಗೆ ಆತ ಇರುವ ಜಾಗ ತಿಳಿದು ಬುಧವಾರ ನಸುಕಿನ ಜಾವ ಕಾರ್ಯಾಚರಣೆ ನಡೆಸಿ ಬಂಧಿಸಿ ಆರೋಗ್ಯ ತಪಾಸಣೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ತಪಾಸಣೆ ಬಳಿಕ ಆರೋಪಿಯನ್ನು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಲಯ ಆರೋಪಿ ಮೈಲಾರಿಯನ್ನು ಡಿ.30ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮೈಲಾರಿ ಪರವಾಗಿ ಮುಂದಿನ ಕಾನೂನು ಪ್ರಕ್ರಿಯೆ ಮುಂದುವರೆಸಿದ್ದು, ಗುರುವಾರ ಬೇಲ್‌ಗೆ ಮನವಿ ಮಾಡಲಾಗುವುದು ಮೈಲಾರಿ ಪರ ವಕೀಲರು ತಿಳಿಸಿದ್ದಾರೆ.ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಮೈಲಾರಿ, ನಾನು ಮ್ಯೂಸಿಕ್ ಮೈಲಾರಿ ಎಂದು ಹೆಸರು ಮಾಡಲು ಬಹಳ ಹೋರಾಟ ಮಾಡಿದ್ದೇನೆ. ನನ್ನ ಏಳಿಗೆ ಸಹಿಸಲಾರದೇ ಹಲವು ಸಲ ಈ ರೀತಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ನನ್ನದು ಯಾವುದೇ ತಪ್ಪಿಲ್ಲ. ಕಾನೂನು ಇದೆ. ಅಲ್ಲಿ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.
ಏನಿದು ಪ್ರಕರಣ?:ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಈ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತೆ ಡ್ಯಾನ್ಸ್ ಮಾಡಲು ಬಂದಿದ್ದಳು. ಕಾರ್ಯಕ್ರಮದ ನಂತರ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸ್ವತಃ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಸದ್ಯ ಮ್ಯೂಸಿಕ್ ಮೈಲಾರಿ ಸೇರಿದಂತೆ ಏಳು ಜನರು ಅಪರಾಧ ಎಸಗಿದ್ದಾರೆ ಎಂದು ಆರೋಪದಲ್ಲಿ ಹೇಳಿದ್ದಾಳೆ. ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣವನ್ನು ಡಿಸೆಂಬರ್ 15ರಂದು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಪೋಕ್ಸೋ ಕೇಸ್ ಹಿನ್ನೆಲೆಯಲ್ಲಿ ಬುಧವಾರ ಮ್ಯೂಸಿಕ್ ಮೈಲಾರಿಯನ್ನು ಬಂಧಿಸಿ ಪೋಕ್ಸೋ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಮೈಲಾರಿ ಮುಖ್ಯ ಆರೋಪಿ ಆಗಿದ್ದು, ಇದೀಗ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.- ಸಿದ್ಧಾರ್ಥ ಗೋಯಲ್ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಾಗಲಕೋಟೆ