ಹಾವೇರಿ: ಹಾವೇರಿ ವಿಶ್ವವಿದ್ಯಾಲಯದಲ್ಲಿ ಎಸ್‌ಎಫ್‌ಐ ಪ್ರಥಮ ಸಮ್ಮೇಳನ ನಡೆಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಂಘಟನೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಸಮ್ಮೇಳನಕ್ಕೆ ಅನುಮತಿ ನಿರಾಕರಿಸಿದ್ದ ಹಾವೇರಿ ವಿವಿ ಕುಲಸಚಿವರು, ವಿಶ್ವವಿದ್ಯಾಲಯವು ಆಯೋಜಿಸುವ, ಪ್ರಾಯೋಜಿಸುವ ಅಥವಾ ಶಾಸನಬದ್ಧ ಪ್ರಾಧಿಕಾರಗಳಿಂದ ಅನುಮೋದಿತವಾಗಿರುವ ಶೈಕ್ಷಣಿಕ, ಸಂಶೋಧನಾ, ಪರೀಕ್ಷಾ ಹಾಗೂ ಆಡಳಿತಾತ್ಮಕ ಚಟುವಟಿಕೆಗಾಗಿ ಮಾತ್ರ ವಿವಿ ಕ್ಯಾಂಪಸ್ ಮೀಸಲಾಗಿರುತ್ತವೆ. ವಿದ್ಯಾರ್ಥಿ ಸಂಘಗಳು ಅಂದರೆ ಸ್ನಾತಕೋತ್ತರ ಜಿಮಖಾನಾ ಹೊರತುಪಡಿಸಿ ಯಾವುದೇ ವಿದ್ಯಾರ್ಥಿ ಸಂಘಟನೆ ಹಾಗೂ ಬಾಹ್ಯ ಸಂಘ-ಸಂಸ್ಥೆಗಳು ಸ್ವತಂತ್ರವಾಗಿ ಆಯೋಜಿಸುವ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂಬ ಆದೇಶ ಪ್ರತಿಯನ್ನು ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥರಿಗೆ ರವಾನಿಸಿ ತಿಳಿಸಿದ್ದರು.
ಆದರೂ ಬುಧವಾರ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥರು ಪ್ರಥಮ ಸಮ್ಮೇಳನ ನಡೆಸಲು ಮುಂದಾದಾಗ ಹಾವೇರಿ ವಿವಿಯ ಉಪ ಕುಲಪತಿಗಳು ಹಾಗೂ ಸಮ್ಮೇಳನ ಆಯೋಜಕರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಸ್ಥಳಕ್ಕಾಗಮಿಸಿದ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು, ವಿವಿಯ ನಿಯಮ ಉಲ್ಲಂಘಿಸಿ ಸಮ್ಮೇಳನ ನಡೆಸಲಿಕ್ಕೆ ಮುಂದಾಗಿದ್ದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಹಾಗೂ ಇತರ ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.ಬಳಿಕ ಎಸ್‌ಎಫ್‌ಐ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿ ವಾಪಸ್ ವಿವಿ ಕ್ಯಾಂಪಸ್‌ಗೆ ಕರೆದುಕೊಂಡು ಬಂದು ಸಭೆ ನಡೆಸಿದರು. ಎಸ್‌ಎಫ್‌ಐ ಸಂಘಟನೆ ಬದಲಾಗಿ ಹಾವೇರಿ ವಿವಿಯ ಯಾವುದಾದರೂ ಒಂದು ವಿಭಾಗದಿಂದ ಕಾರ್ಯಾಗಾರದ ಮಾದರಿಯಲ್ಲಿ ಸಮ್ಮೇಳನ ನಡೆಸುವಂತೆ ಸೂಚಿಸಿದರು. ಇದಕ್ಕೆ ಒಪ್ಪಿಗೆ ನೀಡಿದ ಎಸ್‌ಎಫ್‌ಐ ಮುಖಂಡರು, ಹಾವೇರಿ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳೊಂದಿಗೆ ಸಮ್ಮೇಳನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಸಲು ಅಣಿಯಾದರು.ಗೊಂದಲ ಸೃಷ್ಟಿಸಿಲ್ಲ: ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘಟನೆಯೊಂದರ ಸಮಾವೇಶವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆಸಲಿಕ್ಕೆ ಅನುಮತಿ ಕೇಳಿದ್ದರು. ಆದರೆ ಆ ರೀತಿ ಅನುಮತಿ ಕೊಡಲಿಕ್ಕೆ ಅವಕಾಶ ಇಲ್ಲ. ಇದನ್ನು ವಿದ್ಯಾರ್ಥಿ ಸಂಘಟನೆ ಮುಖಂಡರಿಗೆ ಮನವರಿಕೆ ಮಾಡಲಾಗಿದ್ದು, ಯಾವುದೇ ಗೊಂದಲವನ್ನು ವಿದ್ಯಾರ್ಥಿಗಳು ಸೃಷ್ಟಿಸಿಲ್ಲ ಎಂದು ಹಾವೇರಿ ವಿವಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಹೇಳಿದರು. ಎಸ್‌ಎಫ್‌ಐ ವಿವಿ ಘಟಕವು ಸಮ್ಮೇಳನ ನಡೆಸುವುದರ ಬಗ್ಗೆ 15 ದಿನಗಳಿಂದ ಸಿದ್ಧತೆ ಮಾಡಿಕೊಂಡು ಬಂದಿತ್ತು. ವಿಶ್ವವಿದ್ಯಾಲಯದ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು ಒಗ್ಗಟ್ಟಾಗುತ್ತಾರೆಂದು ತಿಳಿದು ಕುಲಪತಿಗಳು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕಲು ಮುಂದಾಗಿರುವುದು ಸರಿಯಲ್ಲ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಹೇಳಿದರು.