ಡೊನೇಶನ್ ಹಾವಳಿ ವಿರೋಧಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ ಪ್ರತಿಭಟನೆ

KannadaprabhaNewsNetwork |  
Published : May 08, 2026, 02:00 AM IST
ಡೊನೇಶನ್ ಹಾವಳಿ ವಿರೋಧಿಸಿ ಹಾವೇರಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗುರುವಾರ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಶನ್ ಹಾವಳಿ ವಿರೋಧಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಗುರುವಾರ ಹಾವೇರಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಶನ್ ಹಾವಳಿ ವಿರೋಧಿಸಿ, ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರವನ್ನು ರಚಿಸುವಂತೆ, ಶಾಲಾ-ಕಾಲೇಜುಗಳಲ್ಲಿ ಡೊನೇಶನ್ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಗುರುವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಮಾತನಾಡಿ, ಸರ್ಕಾರ ನಿಗದಿಪಡಿಸಿದಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಶುಲ್ಕ (ಡೆವಲಪ್‌ಮೆಂಟ್ ಫೀ) ನ್ನು ಸಂಗ್ರಹಿಸಲು ಅವಕಾಶವಿದೆ. ಈ ಹಣವನ್ನು ಒತ್ತಾಯದ ಮೂಲಕ ಸಂಗ್ರಹಿಸುವಂತಿಲ್ಲ. ಇದಕ್ಕೂ ಹೆಚ್ಚು ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಶಿಕ್ಷಣ ಹಕ್ಕು ಕಾಯ್ದೆ-1983 ಮತ್ತು 2009ರ ಆರ್‌ಟಿಇ ಕಾಯ್ದೆ ಜಾರಿಯಾದರೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಬಹುತೇಕ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರುಪಾಯಿ ವರೆಗೂ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ದೂರಿದರು.

ಡೊನೇಷನ್ ನಿಯಂತ್ರಣಕ್ಕೆ ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ ಪ್ರಾಧಿಕಾರ (ಡೊನೇಷನ್ ವಿರೋಧಿ ಸಮಿತಿ)ವನ್ನು ತಕ್ಷಣ ರಚಿಸಬೇಕು. ವಂತಿಗೆ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರು, ಪಾಲಕರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿ ಸಭೆ ಕರೆಯಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವ ಕೇಂದ್ರೀಯ ಶಾಸನ ಜಾರಿಗೆ ತರಬೇಕು. ಸರ್ಕಾರ ನಿಗದಿಗೊಳಿಸಿರುವ ಪ್ರವೇಶ ಶುಲ್ಕದ ವಿವರವನ್ನು ಮಾಧ್ಯಮಗಳ ಮೂಲಕ ಮತ್ತು ಭಿತ್ತಿಪತ್ರ, ಕರಪತ್ರಗಳ ಮೂಲಕ ಪ್ರಚಾರ ಪಡಿಸಬೇಕು.

ಶಿಕ್ಷಣ ಸಂಸ್ಥೆಗಳು ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವಂತೆ ನಿರ್ದೇಶಿಸಬೇಕು. ಜಿಲ್ಲಾಧಿಕಾರಿ ಡೊನೇಷನ್ ನಿಯಂತ್ರಣಕ್ಕೆ ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್ ಪ್ರಾಧಿಕಾರ ರಚನೆ ಕುರಿತು 15 ದಿನಗಳ ಒಳಗಾಗಿ ಪಾಲಕರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಣ ಇಲಾಖೆಯ ಮುಖ್ಯಸ್ಥರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿಸಭೆ ಕರೆಯಬೇಕು. ನಿಯಮ ಮೀರಿ ಡೊನೇಷನ್ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ದಂಡ ಮತ್ತು ಶಿಕ್ಷೆಗೊಳಪಡಿಸಬೇಕು. ಡೋನೆಷನ್ ಹಾವಳಿ ತಡೆಗಟ್ಟಿ ಡೇರಾ ಕಮಿಟಿ ರಚಿಸಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಗವತ್ ಮಾತನಾಡಿ, ಅಣಬೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿದ್ದು, ಮತ್ತೊಂದೆಡೆ ರಾಜ್ಯದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಈಗಾಗಲೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಸರಲ್ಲಿ ಡೊನೇಷನ್ ಹಣವನ್ನು ಮನಬಂದಂತೆ ವಸೂಲಿ ಮಾಡಲು ಮುಂದಾಗಿದ್ದಾರೆ. ಬಡ ಹಿಂದುಳಿದ, ದಲಿತ ಅಲ್ಪಸಂಖ್ಯಾತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಿಡುಗಿನಿಂದ ಶಾಲೆಗಳಲ್ಲಿ ಓದುವುದು ಅಸಾಧ್ಯವಾಗುತ್ತಿದೆ ಎಂದು ದೂರಿದರು.

ಕಾಲೇಜ್ ಘಟಕದ ಅಧ್ಯಕ್ಷೆ ಚೈತ್ರಾ ಕೊರವರ ಮಾತನಾಡಿ, ಬಹುತೇಕ ಶಾಲೆಗಳು ಇಲಾಖೆಯ ಆದೇಶವನ್ನು ಉಲ್ಲಂಘಿಸಿದ್ದು, ಅಂತಹ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅನಧಿಕೃತ ಟ್ಯೂಷನ್ ಸೆಂಟರ್‌ಗಳನ್ನು ಮುಚ್ಚಬೇಕು. ಈ ಕೂಡಲೇ ಜಿಲ್ಲಾ ಶಿಕ್ಷಣ ಶುಲ್ಕ ನಿಯಂತ್ರಣ ಪ್ರಾಧಿಕಾರ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮುಖಂಡರಾದ ಕೃಷ್ಣ ನಾಯ್ಕ, ಮಾಲತೇಶ ಇಚ್ಚಂಗಿ, ಪುನೀತ್ ಕುಮಾರ್, ಮನು ಎನ್., ನಾಗರಾಜ್ ಎಂ.ವೈ., ನವೀನ್ ಬಿ.ಕೆ., ಕುಮಾರ ಸಿ., ಮಾಲತೇಶ ಸಿ., ಆಕಾಶ್ ಕೆ., ಪರಶುರಾಮ ಮಾದರ, ಪ್ರದೀಪ ಲಮಾಣಿ, ಮಲ್ಲಿಕಾರ್ಜುನ ಹಡಪದ, ಉಮೇಶ ಡಿ.ಎಸ್., ಮಾಲತೇಶ ಕೆ.ಟಿ., ಮಜಮಿಲ್ ಅಕ್ಕುವಳ್ಳಿ, ನಂದೀಶ ಎಲ್. ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲೆಯ ವಿವಿಧೆಡೆ ಸುರಿದ ಮಳೆ
ಹಾವೇರಿ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಗೆ ವೇಗ