ಹಾವೇರಿ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಗೆ ವೇಗ

KannadaprabhaNewsNetwork |  
Published : May 08, 2026, 02:00 AM IST
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಕೈಗೊಂಡ ವಿವಿಧ ಕಾಮಗಾರಿಗಳು (ಸಾಂದರ್ಭಿಕ ಚಿತ್ರ). | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ಪುನೀತ್ ತಿಳಿಸಿದ್ದಾರೆ.

ಹಾವೇರಿ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ಪುನೀತ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ 8,600ಕ್ಕೂ ಅಧಿಕ ಕೂಲಿಕಾರರು ವಿವಿಧ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮಸ್ಥರಿಗೆ ಊರಿನಲ್ಲೇ ಕೆಲಸ ಲಭ್ಯವಾಗುತ್ತಿರುವುದರಿಂದ ವಲಸೆ ಕಡಿಮೆಯಾಗುವ ಜತೆಗೆ ಕುಟುಂಬಗಳ ಆರ್ಥಿಕ ಸ್ಥಿತಿಗೂ ನೆರವಾಗುತ್ತಿದೆ ಎಂದು ಹೇಳಿದ್ದಾರೆ.

100 ದಿನಗಳ ಉದ್ಯೋಗ: ನರೇಗಾ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೂಲಿ ಆಧಾರಿತ ಉದ್ಯೋಗ ಒದಗಿಸುವುದಾಗಿದೆ. ಹಾವೇರಿ ಜಿಲ್ಲೆಯಲ್ಲಿ ಈ ಯೋಜನೆಯಡಿ ಕೆರೆ ಅಭಿವೃದ್ಧಿ, ಮಳೆ ನೀರು ಸಂಗ್ರಹಣೆ, ತೋಟಗಾರಿಕೆ, ಹಳ್ಳಿಗಳ ರಸ್ತೆ ಅಭಿವೃದ್ಧಿ, ಶಾಲಾ ಆವರಣ ಸುಧಾರಣೆ, ಅಂಗನವಾಡಿ ಕಟ್ಟಡ ಸುತ್ತಮುತ್ತಲಿನ ಕಾಮಗಾರಿಗಳು, ನೀರು ಹರಿವಿನ ಕಾಲುವೆಗಳ ನಿರ್ಮಾಣ, ಗದ್ದೆ ಬದು ನಿರ್ಮಾಣ ಸೇರಿದಂತೆ ಹಲವು ಶಾಶ್ವತ ಆಸ್ತಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

26 ಸಾವಿರಕ್ಕೂ ಅಧಿಕ ಕಾಮಗಾರಿ: ಜಿಲ್ಲೆಯಲ್ಲಿ ಈಗಾಗಲೇ 26,000ಕ್ಕೂ ಅಧಿಕ ಕಾಮಗಾರಿಗಳಿಗೆ ಅನುಮೋದನೆಗೊಂಡಿದ್ದು, ಹಂತ ಹಂತವಾಗಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಉದ್ಯೋಗಕ್ಕಾಗಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸಲು ಅವಕಾಶವಿದ್ದು, ವಿಶೇಷವಾಗಿ ಮಹಿಳಾ ಕೂಲಿಕಾರರು, ಹಿರಿಯ ನಾಗರಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಯೋಜನೆ ಜೀವನೋಪಾಯದ ಪ್ರಮುಖ ಆಧಾರವಾಗುತ್ತಿದೆ.

ಪ್ರಸ್ತುತ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಪ್ರತಿದಿನ ₹370 ಕೂಲಿ ನೀಡಲಾಗುತ್ತಿದೆ. ಸರ್ಕಾರದಿಂದ ನಿಗದಿಪಡಿಸಿದ ಈ ಕೂಲಿ ಮೊತ್ತ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಊರಿನಲ್ಲಿಯೇ ಕೆಲಸ ಮಾಡಿ ಆದಾಯ ಗಳಿಸುವ ಮೂಲಕ ಕುಟುಂಬದ ಖರ್ಚುಗಳನ್ನು ನಿರ್ವಹಿಸಲು ಹಾಗೂ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಅಗತ್ಯಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತಿದೆ.

ಕೂಲಿಕಾರರು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ನಮೂನೆ-6 ಸಲ್ಲಿಸುವ ಮೂಲಕ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಬಹುದಾಗಿದೆ. ಅದೇ ರೀತಿ ಕಾರ್ಮಿಕ ಸಂಘಟನೆಗಳು ಸಹ ಕೂಲಿಕಾರರ ಪರವಾಗಿ ನಮೂನೆ-6 ಮೂಲಕ ಕೆಲಸದ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೇಡಿಕೆ ಬಂದ ತಕ್ಷಣ ತ್ವರಿತವಾಗಿ ಕೆಲಸ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನರೇಗಾ ಕುರಿತು ಅರಿವು: ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಮೇಳ, ಜಾಗೃತಿ ಸಭೆಗಳು ಹಾಗೂ ಮನೆಮನೆಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಮೂಲಕ ಗ್ರಾಮೀಣ ಜನರಿಗೆ ನರೇಗಾ ಯೋಜನೆಯ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಗ್ರಾಮಸ್ಥರು ತಮ್ಮ ಹಕ್ಕಿನ ಉದ್ಯೋಗವನ್ನು ಪಡೆದು ಸರ್ಕಾರದ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸಂಬಂಧಿಸಿದ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಬಹುದಾಗಿದೆ. ಜತೆಗೆ ಸರ್ಕಾರದ ಉಚಿತ ಸಹಾಯವಾಣಿ ಸಂಖ್ಯೆ 8277506000ಗೆ ಕರೆಮಾಡಿ ಮಾಹಿತಿ ಪಡೆಯಬಹುದು. ಗ್ರಾಮೀಣ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆದು, ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಹೊಂದುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಅಭಿವೃದ್ಧಿಗೆ ದಾರಿ: ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕೇವಲ ಉದ್ಯೋಗ ನೀಡುವ ಯೋಜನೆಯಷ್ಟೇ ಅಲ್ಲದೇ, ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಆಸ್ತಿ ನಿರ್ಮಾಣದ ಮೂಲಕ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಮಹತ್ವದ ಕಾರ್ಯಕ್ರಮವಾಗಿದೆ. ನೀರಿನ ಸಂರಕ್ಷಣೆ, ಕೃಷಿ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೂ ಈ ಯೋಜನೆ ಪೂರಕವಾಗಿದೆ. ಹೀಗಾಗಿ ರೈತರು ಮತ್ತು ಗ್ರಾಮೀಣ ಕಾರ್ಮಿಕರಿಗೆ ದೀರ್ಘಕಾಲಿನ ಲಾಭ ದೊರೆಯುತ್ತಿದೆ. ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿದ್ದು, ಅರ್ಹ ಕುಟುಂಬಗಳೆಲ್ಲರೂ ಯೋಜನೆಯ ಪ್ರಯೋಜನ ಪಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಾವೇರಿ ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲೆಯ ವಿವಿಧೆಡೆ ಸುರಿದ ಮಳೆ
ಡೊನೇಶನ್ ಹಾವಳಿ ವಿರೋಧಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ ಪ್ರತಿಭಟನೆ