ಹಲಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಬೆಂಬಲದಿಂದ ಷಡಕ್ಷರ ಸ್ವಾಮಿಗಳು ಕಳೆದ ಮೇ ಒಂದರಂದು ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿದ್ದಾರೆ. ಇಂದಿಗೆ 48 ದಿನಗಳು ಪೂರೈಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಠಕ್ಕೆ ಹೊಸ ರೂಪ ತಂದುಕೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಹಲಗೂರು
ಭಕ್ತರ ಸಹಕಾರದೊಂದಿಗೆ ಡಿ.ಹಲಸಹಳ್ಳಿ ಗವಿಮಠಕ್ಕೆ ಮಠಾಧ್ಯಕ್ಷ ಷಡಕ್ಷರ ಸ್ವಾಮೀಜಿ ಹೊಸ ರೂಪ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತುಮಕೂರು ಸಿದ್ಧಗಂಗಾ ಮಠದ ಮಠಾಧೀಶ ಸಿದ್ದಲಿಂಗ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.ಗವಿಮಠದಲ್ಲಿ ಮೇ ಒಂದರಂದು ಕಳಶಾರೋಹಣ ರಾಜಗೋಪುರ, ಬಸವ ವಿಗ್ರಹ, ಶ್ರೀಷಡಕ್ಷರ ಮಂಗಳ ಮಂಟಪ ಮತ್ತು ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮತ್ತು ಧಾರ್ಮಿಕ ಸಭೆ ನಡೆದು 48 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಬಸವೇಶ್ವರ ಸ್ವಾಮಿಗೆ ವಿಶೇಷವಾಗಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.
ಹಲಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಬೆಂಬಲದಿಂದ ಷಡಕ್ಷರ ಸ್ವಾಮಿಗಳು ಕಳೆದ ಮೇ ಒಂದರಂದು ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿದ್ದಾರೆ. ಇಂದಿಗೆ 48 ದಿನಗಳು ಪೂರೈಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಠಕ್ಕೆ ಹೊಸ ರೂಪ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಈ ಹಿಂದೆ ಬಂಡೆಗಳಿಂದ ತುಂಬಿದ ಜಾಗ ಇದು. ಸಾರ್ವಜನಿಕವಾಗಿ ಸಂಪರ್ಕ ಸೌಲಭ್ಯಗಳಿರಲಿಲ್ಲ. ಗವಿಮಠವನ್ನು ಇಂದು ಭಕ್ತರಿಗೆ ಶುಭ ಕಾರ್ಯಗಳನ್ನು ಮಾಡಲು ಅನುಕೂಲ ವಾಗುವಂತೆ ಕಲ್ಯಾಣ ಮಂಟಪ, ಅನ್ನದಾಸೋಹ ಮಾಡಿ ಹಲವಾರು ಧಾರ್ಮಿಕ ಕಾರ್ಯಕ್ರಮ ನಡೆಸುತ್ತಾ ಮಠದ ಶೋಭೆಯನ್ನು ಹೆಚ್ಚಿಸಿದ್ದಾರೆ ಎಂದರು.
ಮಠದಲ್ಲಿ ರಾಜಗೋಪುರ ನಿರ್ಮಾಣ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಅಲ್ಲದೇ, ಗಿಡಮರಗಳನ್ನು ಬೆಳೆಸಿ ಸುಂದರ ವಾತಾವರಣ ನಿರ್ಮಿಸಿದ್ದಾರೆ. ನಾನು ಚಿಕ್ಕವನಿದ್ದಾಗ ಈ ಮಠಕ್ಕೆ ಬಂದಾಗ ಜಡೆ ಸ್ವಾಮಿಗಳು ಈ ಮಠದಲ್ಲಿದ್ದರು. ಆಗಿನಿಂದಲೂ ಕನಕಪುರದ ದೇಗುಲ ಮಠಕ್ಕೂ ಈ ಮಠಕ್ಕೂ ಅವಿನಭಾವ ಸಂಬಂಧವಿದೆ ಎಂದರು.
ಈ ಸ್ಥಳವು ಷಡಕ್ಷರ ದೇವನ ತಪೋನಿಷ್ಠ ಸ್ಥಳ. ರಾಜಶೇಖರ ವಿಲಾಸ ಎಂಬ ಗ್ರಂಥವನ್ನು ಬರೆದ ಸ್ಥಳವೆಂದು ತಿಳಿದು ಬಂದಿದೆ. ಹಾಗೆಯೇ ಹಲವು ಪುಣ್ಯ ಪುರುಷರ ತಪೋ ಭೂಮಿಯಾಗಿದ್ದ ಮಠವನ್ನು ಇನ್ನಷ್ಟು ಅಭಿವೃದ್ಧಿಪಡಿಸುವಲ್ಲಿ ಷಡಕ್ಷರ ಸ್ವಾಮೀಜಿಗೆ ನಿಮ್ಮ ಬೆಂಬಲ ಸಹಕಾರ ಹೀಗೆ ಇರಲಿ ಭಕ್ತಾದಿಗಳಿಗೆ ಕರೆ ನೀಡಿದರು.
ಸಿದ್ಧಗಂಗಾ ಶ್ರೀಗಳಿಗೆ ಗವಿ ಮಠದ ಷಡಕ್ಷರ ಸ್ವಾಮೀಜಿ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಭಕ್ತರು ಶ್ರೀಗಳ ಆಶೀರ್ವಾದ ಪಡೆದರು. ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಡಾ.ಚನ್ನಬಸವ ಸ್ವಾಮಿಗಳು, ಆಂಗ್ರಾಪುರದ ಬಸವಲಿಂಗ ದೇಶಿ ಕೇಂದ್ರ ಸ್ವಾಮೀಜಿಗಳು, ಹೊಸಹಳ್ಳಿ ಮಠದ ಓಂಕಾರ ಸ್ವಾಮಿಗಳು, ಮೇದಿನಿ ಗ್ರಾಮ ಮಠದ ಶಿವಲಿಂಗ ಸ್ವಾಮಿಗಳು, ಪುರಿಗಾಲಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹರಚರ ಮೂರ್ತಿಗಳು ಹಾಗೂ ಡಿ ಹಲಸಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.