ಶಹಾಪುರ: ಮುಂಗಾರು ಬಿತ್ತನೆಗೆ ಮುಂದಾದ ರೈತರು

KannadaprabhaNewsNetwork | Published : Jun 9, 2024 1:31 AM

ಸಾರಾಂಶ

ಕಳೆದೆರಡು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ್ದ ರೈತರಲ್ಲಿ ಈ ಬಾರಿ ಮುಂಗಾರು ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತಾಲೂಕಿನಲ್ಲೆಡೆ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗದರಿವೆ. ರೈತರು ರೈತರು ಬಿತ್ತನೆಗೆ ಮುಂದಾಗಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಕಳೆದೆರಡು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ್ದ ರೈತರಲ್ಲಿ ಈ ಬಾರಿ ಮುಂಗಾರು ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತಾಲೂಕಿನಲ್ಲೆಡೆ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗದರಿವೆ. ರೈತರು ರೈತರು ಬಿತ್ತನೆಗೆ ಮುಂದಾಗಿದ್ದಾರೆ.

ಈಗಾಗಲೇ ಭೂಮಿ ಹದಗೊಳಿಸಿ, ಇನ್ನು ಬಿತ್ತನೆ ಮಾಡದೇ ಕಾದಿದ್ದ ರೈತರು ತಮ್ಮ ಕೃಷಿ ಭೂಮಿಯಲ್ಲಿ ತೊಗರಿ ಹತ್ತಿ ಸಜ್ಜೆ ಹಾಗೂ ಹೆಸರು ಇತರೆ ಬೀಜ ಬಿತ್ತನೆಯಲ್ಲಿ ನಿರತರಾಗಿದ್ದಾರೆ.

ಶಹಾಪುರ ತಾಲೂಕಿನ ಕೃಷಿ ಭೂಮಿ: ತಾಲೂಕಿನಲ್ಲಿ 8177 0 ಹೆಕ್ಟೇರ್‌ ಕೃಷಿ ಭೂಮ ಇದ್ದು. ಇದರಲ್ಲಿ ನೀರಾವರಿ 56100 ಹೆಕ್ಟೇರ್‌, 25670 ಒಣ ಬೇಸಾಯ ಭೂಮಿ ಇದೆ. ಶಹಾಪುರ ತಾಲೂಕಿನ 370 ಕ್ವಿಂಟಲ್ ತೊಗರಿ, 40 ಕ್ವಿಂಟಲ್ ಹೆಸರು ಬಂದಿದ್ದು, ಶಹಾಪುರ, ದೋರನಹಳ್ಳಿ, ಗೋಗಿ, ವಡಗೇರ ಹಾಗೂ ಹಯ್ಯಾಳ ರೈತ ಸಂಪರ್ಕ ಹಂಚಿಕೆ ಮಾಡಲಾಗಿದೆ. 2.50 ಲಕ್ಷ ಪಾಕೆಟ್ ಹತ್ತಿ ಬೀಜ ಬೀಜ ಹಾಗೂ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಬಂದಿವೆ.

ಪ್ರತಿ ಪ್ಯಾಕೆಟ್ ಗೆ ಧಾರಣಿ: 5 ಕೆಜಿ ಪಾಕೆಟ್ ಹೆಸರು ಬೀಜದ ಸಾಮಾನ್ಯ ರೈತರಿಗೆ 805 ರು.ಗಳು, ಎಸ್ ಸಿಪಿ, ಟಿ ಎಸ್ ಪಿ ರೈತರಿಗೆ 743 ರು.ಗಳು, 5 ಕೆಜಿ ತೊಗರಿ ಪಾಕೆಟ್ ಸಾಮಾನ್ಯ ರೈತರಿಗೆ 770 ರು.ಗಳು ಹಾಗೂ ಎಸ್ ಸಿಪಿ, ಟಿ ಎಸ್ ಪಿ ರೈತರಿಗೆ 708 ರು.ಗಳು ಬೆಲೆಯಲ್ಲಿ ಲಭ್ಯವಿವೆ.

ಗೊಬ್ಬರ ದಾಸ್ತಾನು: ತಾಲೂಕಿನಲ್ಲಿ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್ ಹಾಗೂ ಪೋಟ್ಯಾಶ್ ಸೇರಿ 9100 ಟನ್ ಗೊಬ್ಬರ ದಾಸ್ತಾನು ಇದೆ. ಕಾಲಕಾಲಕ್ಕೂ ರೈತರ ಬೇಡಿಕೆ ತಕ್ಕಂತೆ ಗೊಬ್ಬರ ಪೂರೈಸಲಾಗುವುದು. ಸದ್ಯ ಗೊಬ್ಬರದ ಕೊರತೆ ಇರುವುದಿಲ್ಲ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.

ಬಿತ್ತನೆ ಬೀಜ ಬೇಡಿಕೆ: ಹೆಸರು 300 ಕ್ವಿಂಟಲ್, ತೊಗರಿ 1050, ಸಜ್ಜೆ 10, ಮೆಕ್ಕೆಜೋಳ 10, ಸೂರ್ಯಕಾಂತಿ 9, ಭತ್ತ 15038, ಹತ್ತಿ 3 ಲಕ್ಷ ಪಾಕೆಟ್ ಬೇಡಿಕೆ ಸಲ್ಲಿಸಲಾಗಿದೆ. ಮೇ 4 ನೇ ವಾರದಲ್ಲಿ ಬೀಜ ಗೊಬ್ಬರಗಳು ಬರುತ್ತಿವೆ. ಎಲ್ಲಾ ಕಡೆ ಬೀಜ ಗೊಬ್ಬರದ ಅಗತ್ಯತೆಯ ಬೇಡಿಕೆಯ ಪಟ್ಟಿ ಈಗಾಗಲೇ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಎತ್ತುಳ್ಳ ರೈತರಿಗೆ ಹೆಚ್ಚಿದ ಬೇಡಿಕೆ: ಗೊಬ್ಬರ ಸಾಗಿಸುವುದು, ಉಳುಮೆ ಮಾಡುವುದು ಹಾಗೂ ಬಿತ್ತನೆ ಮಾಡುವುದು ಒಂದೇ ಸಲ ಬಂದಿರುವು ದರಿಂದ ಬಾಡಿಗೆ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಎತ್ತುಳ್ಳ ರೈತರು ತಮ್ಮ ಕೆಲಸ ಮುಗಿಸುವಲ್ಲಿ ಮಗ್ನರಾಗಿದ್ದಾರೆ. ಜೊತೆಗೆ ಬಾಡಿಗೆಗೆ ಹೋಗುತ್ತಿದ್ದಾರೆ. ಇಷ್ಟು ದಿನ ಕೆಲಸವಿಲ್ಲದೆ ಕುಳಿತ ಕೂಲಿಕಾರ್ಮಿಕರಿಗೆ ಮುಂಗಾರು ಮಳೆಯಿಂದಾಗಿ ಬೇಡಿಕೆ ಹೆಚ್ಚಿದೆ.

ಬಿತ್ತನೆ ಬೀಜ ಖರೀದಿಗಾಗಿ ಮುಗಿಬಿದ್ದ ರೈತರು: ಶಹಪುರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಬೀಜ ಮತ್ತು ಗೊಬ್ಬರ ಮಾರಾಟ ಅಂಗಡಿಗಳ ಮುಂದೆ ಬೀಜ ಖರದಿಗಾಗಿ ಅಂಗಡಿಗಳ ಮುಂದೆ ರೈತರು ತಾ ಮುಂದು ನಾ ಮುಂದು ಎನ್ನುವಂತೆ ಬೀಜ ಖರೀದಿಸುವ ದೃಶ್ಯ ಕಂಡು ಬಂತು.

ದುಬಾರಿ ಬೆಲೆಗೆ ಬೀಜ ಮಾರಾಟ ಆರೋಪ: ಕಳೆದೆರಡು ವರ್ಷಗಳಿಂದ ಬರದಿಂದ ತತ್ತರಿಸಿದ ರೈತರಿಗೆ ಈ ಸಲದ ಮುಂಗಾರು ರೈತನ ಕೈ ಹಿಡಿದಿದ್ದು, ಮಳೆ ಚೆನ್ನಾಗಿ ಬರುತ್ತಿರುವುದಿಂದ ರೈತರಲ್ಲಿ ಖುಷಿ ತಂದಿದೆ. ಆದರೆ, ಅಂಗಡಿಗಳ ಮಾಲೀಕರು ಬೀಜಗಳ ಕೃತಕ ಅಭಾವ ಸೃಷ್ಟಿಸಿ ಬೀಜಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ರೈತರ ವಂಚನೆಗೆ ಮುಂದಾಗಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ರೈತರಿಗೆ ನಿಗದಿಪಡಿಸಿದ ಬೆಲೆಗೆ ಬೀಜ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಭೀಮರಾಯ ಟಪ್ಪೇದಾರ್ ಮನವಿ ಮಾಡಿದ್ದಾರೆ.

ಅನಧಿಕೃತ ಬೀಜಗಳ ಬಗ್ಗೆ ಎಚ್ಚರವಿರಲಿ: ಈಗಾಗಲೇ ರೈತರು ಬಿತ್ತನೆಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ರೈತರು ಕೃಷಿ ಇಲಾಖೆಯಲ್ಲಿ ಹಾಗೂ ಅಧಿಕೃತ ಅಂಗಡಿಗಳಿಂದಲೇ ಬೀಜ ಖರೀದಿಸಬೇಕು. ಅಲ್ಲದೆ ಅನೇಕ ರೈತರು ಪಕ್ಕದ ರಾಜ್ಯಗಳಿಂದ ಅನಧಿಕೃತ ಬೀಜ ಖರೀದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಬೀಜ ಖರೀದಿಸಿ ಅಧಿಕೃತ ರಸೀದಿ ಪಡೆಯಬೇಕು. ಅನಧಿಕೃತವಾಗಿ ಬೀಜ ಖರೀದಿಸುವುದರಿಂದ ರೈತರು ಮೋಸ ಹೋಗುವ ಸಂದರ್ಭದಲ್ಲಿ ಜಾಸ್ತಿ ಇರುತ್ತದೆ. ರೈತರು ಮೋಸ ಹೋಗದೆ ಅಧಿಕೃತ ಲೈಸನ್ಸ್ ಪಡೆದಿರುವ ಅಂಗಡಿಗಳಿಂದ ಮಾತ್ರ ಬೀಜ ಖರೀದಿಸಬೇಕು ಎಂದು ಕೃಷಿ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.

ಪಹಣಿಗೆ ಆಧಾರ್ ಜೋಡಣೆ: ಶಹಾಪುರ ತಾಲೂಕಿನಲ್ಲಿ 108603 ಫ್ಲಾಟ್ ಗಳಿದ್ದು, 39741 ಲಿಂಕ್ ಆಗಿವೆ. ಎನ್ಎ ಆಗಿರುವುದು 4114, ಮರಣ ಹೊಂದಿರುವವರ ಸಂಖ್ಯೆ 5029, ಮರಣ ಹಾಗೂ ಎನ್ ಎ ಇರುವದು 52. ಇವೆ. ಪಹಣಿಗೆ ಆಧಾರ ಜೋಡಣೆಯಿಂದ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪಲು ಸಹಾಯವಾಗುತ್ತದೆ. ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ಎಫ್ ಐ ಡಿ ನೋಂದಣಿ ವಿವರ: ತಾಲೂಕಿನಲ್ಲಿ 43856 ರೈತರ ಪೈಕಿ 42146 ಜನ ರೈತರು ಎಫ್ ಐ ಡಿ ನೋಂದಣಿ ಮಾಡಿಕೊಂಡಿದ್ದಾರೆ. 2790 ಜನ ರೈತರ ಎಫ್ ಐ ಡಿ ನೋಂದಣಿ ಆಗಿರುವುದಿಲ್ಲ. ಇದರಿಂದ ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಆದಷ್ಟು ಬೇಗ ಉಳಿದ ರೈತರು ಎಫ್ ಐ ಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ತಿಳಿಸಿದ್ದಾರೆ.ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಗೊಬ್ಬರ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಸದ್ಯದ ಮಟ್ಟಿಗೆ ಬೀಜ, ಗೊಬ್ಬರದ ಕೊರತೆ ಇಲ್ಲ. ರೈತರು ಭೂಮಿ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ಅಲ್ಲದೆ ಅಧಿಕೃತ ಅಂಗಡಿಗಳಲ್ಲಿ ಬೀಜ ಖರೀದಿಸಿ ರಸೀದಿ ಪಡೆಯಬೇಕು.

- ಸುನಿಲ್ ಕುಮಾರ್ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಶಹಾಪುರ.ಈ ಬಾರಿ ಮಳೆರಾಯ ರೈತರ ಕೈ ಹಿಡಿದಿದ್ದಾನೆ. 2 ವರ್ಷಗಳಿಂದ ಬರಗಾಲದಿಂದ ಬೆಳೆ ಇಲ್ಲದೆ ತ್ರಾಸ್ ಅನುಭವಿಸಿದ್ದೇವೆ. ಈ ಸಲ ಒಳ್ಳೆ ಬೆಳೆ ಬರುವ ಮುನ್ಸೂಚನೆ ಮಳೆರಾಯ ನೀಡಿದ್ದಾನೆ. ರೈತರಿಗೆ ಒಳ್ಳೆ ಬೀಜ ಗೊಬ್ಬರ ಸರ್ಕಾರ ವಿತರಿಸಬೇಕು.

- ಇಮಾಮ್ ಸಾಬ್, ಪಿಂಜಾರದೋಡ್ಡಿ ಗ್ರಾಮದ ರೈತ.

Share this article