ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮತ್ತೆ ಶಹಾಪುರದ ಅನಧಿಕೃತ ರಸ್ತೆ ಕಾಮಗಾರಿ ವಿಚಾರ ಪ್ರತಿಧ್ವನಿಸಿತು.ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಹಾಪುರ ರಸ್ತೆ ವಿಚಾರ ಪ್ರಸ್ತಾಪಗೊಂಡಿತು. ಈ ವಿಷಯ ಸಭೆಯಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಮತ್ತು ದಕ್ಷಿಣ ಶಾಸಕ ಅಭಯ ಪಾಟೀಲ ಅವರ ಮಧ್ಯೆ ಮಾತಿನ ಚಕಮಕಿಗೂ ಕಾರಣವಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ನಗರ ಸೇವಕ ರವಿ ಧೋತ್ರೆ ಏಕವಚನದಲ್ಲಿ ಮಾತನಾಡಿದ್ದು, ಶಾಸಕ ಸೇಠ್ ಅವರನ್ನು ಕೆರಳುವಂತೆ ಮಾಡಿತು.
ಶಾಸಕ ಅಭಯ ಪಾಟೀಲ ಅವರು ಬೆಳಗಾವಿ ದಕ್ಷಿಣ ಕ್ಷೇತ್ರದ ಜನತೆಗೆ ಅನುಕೂಲವಾಗುವಂತೆ ಶಹಾಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆ ವೇಳೆ ಯಾರಿಗೂ ನಾವು ನೋಟಿಸ್ ಕೊಟ್ಟಿರಲಿಲ್ಲ. ಒಂದಿಬ್ಬರು ಕೋರ್ಟ್‌ಗೆ ಹೋದರು. ಈಗ ಆ ಜಾಗವನ್ನು ಮರಳಿ ಭೂ ಮಾಲೀಕರಿಗೆ ಕೊಟ್ಟಿರುವುದರಿಂದ ಶಾಲಾ ಮಕ್ಕಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ರಸ್ತೆ ಅವಘಡಗಳು ಹೆಚ್ಚಿವೆ. ಆಗ ಮಧ್ಯ ಪ್ರವೇಶಿಸಿದ ಶಾಸಕ ಆಸೀಫ್ ಸೇಠ್ ಅವರು, ಅನಧಿಕೃತವಾಗಿ ರಸ್ತೆ ಕಾಮಗಾರಿ ಕೈಗೊಳ್ಳುವ ಮೊದಲು ಭೂ ಮಾಲೀಕರಿಗೆ ನೋಟಿಸ್ ಕೊಟ್ಟು, ಭೂಸ್ವಾಧೀನ ಪ್ರಕ್ರಿಯೆ ಮಾಡಿ ರಸ್ತೆ ಕಾಮಗಾರಿ ಕೈಗೊಳ್ಳಬೇಕಿತ್ತು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಭಯ, ಜನತೆಗೆ ಅನುಕೂಲವಾಗಲು ಒಳ್ಳೆಯ ಕೆಲಸ ಆಗಿದೆ. ಈಗ ರಸ್ತೆ ಬಂದ್ ಆಗಿದ್ದರಿಂದ ಜನತೆಗೆ ತೊಂದರೆ ಆಗಿದೆ. ಕೋರ್ಟ್‌ಗೆ ಹೋಗುವವರ ಬಳಿಯೂ ನಾನು ಚರ್ಚೆ ಮಾಡಿದ್ದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಹಾಗಿದ್ದರೆ, ಅನಧಿಕೃತ ಬಡಾವಣೆಗಳಲ್ಲಿ ಕೈಗೊಂಡಿರುವ ರಸ್ತೆ, ಚರಂಡಿಗಳನ್ನೂ ತೆರವುಗೊಳಿಸಬೇಕೇ ಎಂದು ಪ್ರಶ್ನಿಸಿದರು.ಶಹಾಪುರ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಭೂಮಾಲೀಕರಿಗೆ ₹20 ಕೋಟಿ ಪರಿಹಾರ ನೀಡುವ ಬದಲು ಆ ಜಮೀನು ಮರಳಿ ಭೂ ಮಾಲೀಕರಿಗೆ ಮರಳಿಸಲಾಗಿದೆ. ಈ ಕುರಿತು ಪಾಲಿಕೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ, ಪಾಲಿಕೆ ಆಯುಕ್ತರು ಏಕಪಕ್ಷೀಯವಾಗಿ ಏಕೆ ನಿರ್ಣಯ ಕೈಗೊಂಡಿದ್ದಾರೆ ಎಂದು ಅಭಯ ಪಾಟೀಲ ಆಯುಕ್ತರ ವಿರುದ್ಧ ಕಿಡಿಕಾರಿದರು.
ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಸರ್ಕಾರ ಪರಿಹಾರ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅವರ ಮನ ಒಲಿಸುವ ಪ್ರಯತ್ನ ನಡೆಯಬೇಕಿದೆ ಎಂದು ಅಭಯ ಪಾಟೀಲ ಸಭೆಗೆ ಸಲಹೆ ನೀಡಿದರು. ಇದಕ್ಕೆ ಇತರೆ ಸದಸ್ಯರೂ ದನಿಗೂಡಿಸಿದರು. ಬಳಿಕ ಮೇಯರ್ ಸವಿತಾ ಕಾಂಬಳೆ ಅವರು, ಶಹಾಪುರ ರಸ್ತೆ ವಿಚಾರ ಸಂಬಂಧ ಭೂ ಮಾಲೀಕರ ಮನವೊಲಿಸುವ ಪ್ರಯತ್ನ ಮಾಡೋಣ ಎಂದರು.ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಆಕ್ರೋಶ:
ಎಲ್ ಆ್ಯಂಡ್ ಟಿ ಕಂಪನಿ ಕಾರ್ಯವೈಖರಿಗೆ ಪಾಲಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರ ಸೇವಕ ಹಣಮಂತ ಕೊಂಗಾಲಿ ಅವರು ₹314 ಕೋಟಿ 31ನೇ ವೇತನದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಳೆದ ಬಾರಿ ಶೇ.10 ರಷ್ಟು ಕಡಿತ ಮಾಡಲಾಗಿತ್ತು. ಈ ಬಾರಿ ಶೇ.15ರಷ್ಟು ಅಂದರೆ ಒಟ್ಟು ₹4 ಕೋಟಿ 67 ಲಕ್ಷ ಪಿಪಿ ಅವರ ವೇತನ ಕಡಿತಗೊಂಡಿದೆ. ಇದರ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಸರ್ಕಾರಿ ಕಟ್ಟಡಗಳಿಂದ ಬಾರದ ₹2 ಕೋಟಿ ತೆರಿಗೆ ಮತ್ತು ಹೆಸ್ಕಾಂನಿಂದ ಬರಬೇಕಾದ ₹17 ಕೋಟಿ ಬಾಕಿಯ ಕುರಿತು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪಾಲಿಕೆ ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ, ಈ ಕೆಲಸ ಪ್ರಗತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಬೆಳಗಾವಿ ಉತ್ತರ ಮತ್ತು ದಕ್ಷಿಣ ಎರಡೂ ಕ್ಷೇತ್ರದಲ್ಲಿ ಎಲ್ ಆ್ಯಂಡ್ ಟಿ ಕಂಪನಿ ಕಾಮಗಾರಿಯ ಕಾರ್ಯವೈಖರಿ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿಗಾಗಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಆ ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ನಿಯಮಕ್ಕೆ ತಕ್ಕಂತೆ ಕಾಮಗಾರಿ ಮಾಡುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಅಲ್ ಆ್ಯಂಡ್ ಟಿ ಕಂಪನಿ ಕಾಮಗಾರಿ ಬಳಿಕ ಹೊಸ ರಸ್ತೆಗಳು ಹದಗೆಟ್ಟು ಹೋಗುತ್ತಿವೆ. ಕಾಮಗಾರಿ ಪೂರ್ಣವಾದ ಬಳಿಕ ನಿಯಮದಂತೆ ರಸ್ತೆಗಳನ್ನು ಶೀಘ್ರದಲ್ಲೇ ಗುಣಮಟ್ಟದ ರಿಸ್ಟೋರೇಶನ್ ಮಾಡಬೇಕು ಎಂದು ಆಗ್ರಹಿಸಿದರು. ಶಾಸಕ ಆಸೀಫ್ ಸೇಠ್ ಮಾತನಾಡಿ, ಈಗಾಗಲೇ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳ ಸಭೆಗೆ ಕರೆದು ರಿಸ್ಟೋರೇಶನ್ ಮಾಡಿದ ಬಳಿಕ ಇನ್ನುಳಿದ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಈವರೆಗೆ ಒಟ್ಟು 163 ಠರಾವು ಪಾಸ್ ಮಾಡಲಾಗಿದೆ. ಇವುಗಳಲ್ಲಿ ಎಷ್ಟು ಠರಾವು ಅನುಷ್ಠಾನುಗೊಂಡಿವೆ ಎಂಬುದರ ಕುರಿತು ಅಧಿಕಾರಿ ನೇಮಕ ಮಾಡಿ, ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.