ಬಿಷಪ್‍ಕಾಟನ್ ಶಾಲೆಯಲ್ಲಿ ಓದಿದವರಿಗೆ ಹಳ್ಳಿ ಸಮಸ್ಯೆ ಅರ್ಥವಾಗುತ್ತಾ

KannadaprabhaNewsNetwork | Published : Oct 11, 2024 11:48 PM

ಸಾರಾಂಶ

ಚಿತ್ರದುರ್ಗ: ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಷಪ್‍ಕಾಟನ್ ಶಾಲೆಯಲ್ಲಿ ಓದಿದವರು. ಅಂತಹವರಿಗೆ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸದಸ್ಯರು, ಅಧಿಕಾರಿ, ಸಿಬ್ಬಂದಿ ಸಮಸ್ಯೆ ಹೇಗೆ ಅರ್ಥವಾಗುತ್ತದೆ ಎಂದು ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪ್ರಶ್ನಿಸಿದರು.

ಚಿತ್ರದುರ್ಗ: ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಷಪ್‍ಕಾಟನ್ ಶಾಲೆಯಲ್ಲಿ ಓದಿದವರು. ಅಂತಹವರಿಗೆ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸದಸ್ಯರು, ಅಧಿಕಾರಿ, ಸಿಬ್ಬಂದಿ ಸಮಸ್ಯೆ ಹೇಗೆ ಅರ್ಥವಾಗುತ್ತದೆ ಎಂದು ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪ್ರಶ್ನಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಜಿಲ್ಲಾ ಸಮಿತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಏಳು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಅಪ್ಪಿತಪ್ಪಿಯೂ ಹಳ್ಳಿಗಳ ಕಡೆ ತಿರುಗಾಡಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿ ನೌಕರರು ಹಾಗೂ ಪಿಡಿಓಗಳು ಅನುಭವಿಸುತ್ತಿರುವ ತೊಂದರೆಗಳೇನೆಂಬುದು ಗೊತ್ತಿಲ್ಲ. ನಿಮ್ಮ ಹೋರಾಟದ ಜೊತೆ ಸದಾ ನಾವುಗಳಿರುತ್ತೇವೆಂದು ಭರವಸೆ ನೀಡಿದರು. ಒಂದೆರಡು ದಿನಗಳ ಕಾಲ ಸದನದಲ್ಲಿ ಚರ್ಚೆಯಾದಾಗ ಮಾತ್ರ ರಾಜ್ಯ ಸರ್ಕಾರಕ್ಕೆ ಸಮಸ್ಯೆಗಳು ಅರಿವಿಗೆ ಬರುತ್ತದೆ. ವಿಧಾನಪರಿಷತ್‍ನಲ್ಲಿ 25ಕ್ಕೂ ಹೆಚ್ಚು ಶಾಸಕರುಗಳು ಗ್ರಾಮ ಪಂಚಾಯಿತಿ ಸದಸ್ಯರುಗಳಿಂದ ಆಯ್ಕೆಯಾದವರು. ಅವರಿಗೆ ನಿಮ್ಮ ಸಮಸ್ಯೆಗಳು ಏನೆಂಬುದು ಚೆನ್ನಾಗಿಗೊತ್ತಿದೆ. ಅಧಿವೇಶನದಲ್ಲಿ ಪೂರ್ಣಪ್ರಮಾಣದಲ್ಲಿ ಚರ್ಚೆಯಾದಲ್ಲಿ ಮಾತ್ರ ಸಮಸ್ಯೆ ನಿವಾರಣೆಗೆ ಮಾರ್ಗಗಳು ಗೋಚರಿಸುತ್ತವೆ ಎಂದರು. ವಿಪ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮುಂಬರುವ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಒಂದು ದಿನ ಪೂರ್ತಿ ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳ ಬಗ್ಗೆಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಭರವಸೆ ನೀಡಿದರು. ಧರಣಿ ನಿರತರ ಎಲ್ಲಾ ಬೇಡಿಕೆಗಳು ನ್ಯಾಯಯುತವಾಗಿವೆ. ಗ್ರಾಮ ಪಂಚಾಯಿತಿಗಳನ್ನು ಪ್ರಜಾಪ್ರಭುತ್ವದ ಬೇರು ಎನ್ನಲಾಗುತ್ತದೆ. ಸಮಸ್ಯೆಗಳ ಕುರಿತಂತೆ ಈಗಾಗಲೆ ಪಂಚಾಯತ್‍ರಾಜ್ ಸಚಿವ ಮತ್ತು ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ಆರ್‌ಡಿಪಿಆರ್ ಕಮಿಟಿಯಲ್ಲಿ ಇಪ್ಪತ್ತು ಶಾಸಕರುಗಳಿದ್ದೇವೆ. ಪಂಚಾಯತ್‍ರಾಜ್ ಸಚಿವ ಪ್ರಿಯಾಂಕಖರ್ಗೆ ಒಮ್ಮೆಯೂ ಗ್ರಾಮೀಣ ಭಾಗಕ್ಕೆ ಹೋಗಿಲ್ಲ. ಅಂತಹವರಿಗೆ ನಿಮ್ಮ ಬೇಡಿಕೆಗಳ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿದರು. ಆದಾಯವಿಲ್ಲದೆ ಗ್ರಾಮ ಪಂಚಾಯಿತಿಗಳನ್ನು ನಡೆಸುವುದು ಕಷ್ಟ. ಒಂದು ಕೋಟಿ ರು. ಅನುದಾನವನ್ನು ಮೊದಲು ಗ್ರಾಮ ಪಂಚಾಯಿತಿಗಳಿಗೆ ಕೊಡಬೇಕು ಎಂದು ಐದನೇ ಹಣಕಾಸು ಆಯೋಗಕ್ಕೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ ಸೇರಿದಂತೆ ಪಿಡಿಓಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳ ಒಕ್ಕೂಟದ ಪದಾಧಿಕಾರಿಗಳು ಧರಣಿಯಲ್ಲಿ ಭಾಗವಹಿಸಿದ್ದರು.

Share this article