ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಯೊಬ್ಬನ ಜೀವನದಲ್ಲಿ ಜ್ಞಾನವು ಯಾವಾಗಲೂ ದೊಡ್ಡ ಆಸ್ತಿಯಾಗಿದೆ ಎಂದು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮುಖ್ಯ ಜನರಲ್ ಮ್ಯಾನೇಜರ್ ಬಿ. ಕಿರಣ್ ತಿಳಿಸಿದರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪ್ರಥಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಸ್ವಾಗತ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವು ಚಿನ್ನದ ಜೀವನ, ಜೀವನದ ಪ್ರತಿ ಕ್ಷಣವನ್ನು ಹಾಸ್ಯ ಮತ್ತು ಸಂತೋಷದಿಂದ ಆನಂದಿಸಿ ಎಂದು ಹೇಳಿದರು.
ನೀವು ಇಷ್ಟಪಡುವದನ್ನು ಮಾಡಿ, ನಂಬಿಕೆ ಹೊಂದಿರಿ ಮತ್ತು ಅದ್ವಿತೀಯವಾದದ್ದನ್ನು ಮಾಡಿ. ಜ್ಞಾನವು ಎಲ್ಲರಿಗೂ ಸಮಾನವಾಗಿರುವುದಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಪ್ರತಿಭೆಯಿರುತ್ತದೆ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗಬಾರದು. ಸಹಪಠ್ಯ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಭರವಸೆ ಇದೆ. ಹೊಸಬರಿಗೆ ತಮ್ಮ ಜೀವನದಲ್ಲಿ ಗುರಿಗಳನ್ನು ಹೊಂದಿಸಿ, ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳಿ. ಇದು ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಸ್ನಾತಕೋತ್ತರ ಕೇಂದ್ರದ ವಾರ್ಷಿಕ ವಾರ್ತಾ ಪತ್ರಿಕೆಯ 12ನೇ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.2023- 24ನೇ ಶೈಕ್ಷಣಿಕ ಸಾಲಿನ ಕಾಲೇಜಿನ ಟಾಪರ್ ಆದ ಕೆ. ಶಿಲ್ಪಶ್ರೀ ಅವರನ್ನು ಸನ್ಮಾನಿಸಲಾಯಿತು. 5 ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ಸಹಾಯಧನವನ್ನು ವಿವಿಎಸ್ ವಿದ್ಯಾರ್ಥಿವೇತನದ ರೂಪದಲ್ಲಿ ವಿತರಿಸಲಾಯಿತು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್ ಇದ್ದರು. ಕೆ.ಎನ್. ರೂಪಾ ಮತ್ತು ಎಚ್. ಚೈತ್ರಾ ಪ್ರಾರ್ಥಿಸಿದರು. ವಿಭಾಗ ಮುಖ್ಯಸ್ಥೆ ಡಾ.ಎಸ್. ಪೂರ್ಣಿಮಾ ಸ್ವಾಗತಿಸಿದರು. ಜಿ. ಪ್ರಶಾಂತ್ ಕುಮಾರ್ ವಂದಿಸಿದರು. ಎಂ.ಜಿ. ಸುನಿಲ್ ನಿರೂಪಿಸಿದರು.