ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರಶಾಲೆ ತೊರೆದು ಅಪ್ರಾಪ್ತ ವಯಸ್ಸಿನಲ್ಲೇ ಸಂಸಾರದ ನೊಗ ಹೊತ್ತು ಅಂಧ ಅಜ್ಜಿಯನ್ನು ಸಲಹುತ್ತಿರುವ ಕುಟುಂಬವೊಂದರ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿದೆ.
14 ವರ್ಷದ ಬಾಲಕ ರಾಮಯ್ಯ ಅಂಧ ಅಜ್ಜಿ ಬಸಮ್ಮಳ (85) ಶ್ರವಣಕುಮಾರನಂತೆ ಸಲಹುತ್ತಿದ್ದಾನೆ. ಈ ಬಡ ಕುಟುಂಬವೊಂದು ಹಲವು ವರ್ಷಗಳಿಂದ ಮುರಿದು ಬೀಳುವ ಸ್ಥಿತಿಯಲ್ಲಿರುವ ಗುಡಿಸಲಿನಲ್ಲೇ ಜೀವನ ದೂಡುತ್ತಿದೆ.ಖಾಲಿ ಜಾಗವಿದ್ದರೂ ಮನೆ ನಿರ್ಮಿಸಿಕೊಳ್ಳಲಾಗಿಲ್ಲ. ಕುಟುಂಬಕ್ಕೆ ತುರ್ತು ಸೂರು ನೆರವಿನ ಅವಶ್ಯಕತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುಟುಂಬಕ್ಕೆ ಸರ್ಕಾರಿ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರ ಮನವಿಯಾಗಿದೆ.
ಬಡವರಿಗಾಗಿ ಸರಕಾರದಲ್ಲಿ ನೂರಾರು ಯೋಜನೆಗಳಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತಲೇ ಇದೆ. ಆದರೆ, ಇಂತಹುಗಳ ನೋಡಿದಾಗ, ನೈಜ ಫಲಾನುಭವಿಗಳಿಗೆ ತಲುಪುತ್ತಿದೆಯೇ ಅನ್ನೋ ಪ್ರಶ್ನೆಗಳು ಉದ್ಭವಿಸುತ್ತವೆ.ಸ್ವತಃ ಅಡುಗೆ ತಯಾರಿ: ಮನೆಯಲ್ಲಿ ಅಡುಗೆ ಮಾಡಿ ಅಜ್ಜಿಗೆ ಸ್ನಾನ ಮಾಡಿಸಿ, ಅಜ್ಜಿಯ ಸೀರೆ ಮತ್ತು ತನ್ನ ಬಟ್ಟೆ ತೊಳೆದು, ಅಜ್ಜಿಗೆ ಬಟ್ಟೆ ತೊಡಿಸಿ ಊಟ ಮಾಡಿಸಿ ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಮಾಡಿ ನಂತರ ಕೂಲಿ ಕೆಲಸಕ್ಕೆ ತೆರಳುವ ಬಾಲಕ. ನಂತರ ಕೂಲಿ ಕೆಲಸದಿಂದ ಬಂದು ಪುನಃ ಅಡುಗೆ ತಯಾರಿಸಿ ಅಜ್ಜಿಗೆ ಊಟ ಮಾಡಿಸಿದ ನಂತರ ತಾನು ಊಟ ಮಾಡಿ ದಾರಿ ಬದಿಯಲ್ಲಿ ಮಲಗುತ್ತಾನೆ.
ಬಾಲಕ ರಾಮಯ್ಯ, ತನ್ನ ಕುಟುಂಬದ ಕಡು ಬಡತನದ ಬೇಗೆಯಲ್ಲಿ ಶಾಲೆ ತೊರೆದು ಅಂಧ ಅಜ್ಜಿಯ ಸಲಹುವ ಜವಾಬ್ದಾರಿಯೊಂದಿಗೆ ಬದುಕಿನ ಬಂಡಿ ಸಾಗಿಸಲು ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾನೆ.ಸೂರಿನ ಚಿಂತೆ:
ಮಳೆ ಬಂದರೆ ಗುಡಿಸಿಲಲ್ಲಿ ನೀರು ಸೋರುತ್ತದೆ. ಕ್ಷಣ ಕ್ಷಣಕ್ಕೂ ತೊಂದರೆ ಅನುಭವಿಸುತ್ತಾ ಕಷ್ಟದ ಬದುಕು ಸಾಗಿಸುತ್ತಿರುವ ಈ ಕುಟುಂಬಕ್ಕೆ ಸೂರಿನ ಜೊತೆ ಸರ್ಕಾರಿ ಸೌಲಭ್ಯ ಒದಗಿಸಿ ಕೊಡಬೇಕಾಗಿರುವುದು ಸರಕಾರದ ಜವಾಬ್ದಾರಿ ಅಂತಾರೆ ಎಂದು ವಕೀಲರಾದ ಜಯಲಕ್ಷ್ಮಿ. ಸಂಘ-ಸಂಸ್ಥೆಗಳು ಮತ್ತು ಅಧಿಕಾರಿಗಳು ಸಂಕಷ್ಟದಲ್ಲಿರುವ ಈ ಕುಟುಂಬದ ನೆರವಿಗೆ ಧಾವಿಸಿ ಮಾನವೀಯತೆ ಮೆರೆಯಬೇಕಿದೆ.ಈ ಗ್ರಾಮಕ್ಕೆ ಸುಮಾರು ಹತ್ತು ವರ್ಷಗಳಿಂದ ನೂರಾರು ಮನೆ ಮನೆಗಳು ಬಂದಿವೆ. ಇಂತಹವರಿಗೆ ಮನೆಗಳು ಸಿಕ್ಕಿಲ್ಲವೆಂದ ಮೇಲೆ ಆ ಮನೆಗಳು ಯಾರಿಗೆ ಕೊಟ್ಟಿದ್ದಾರೆ ಎನ್ನುವುದು ತನಿಖೆಯಾಗಬೇಕು. ಹಣಮಂತರಾಯ ದೊರೆ, ತಾಲೂಕು ಕಾರ್ಯದರ್ಶಿ, ವಾಲ್ಮೀಕಿ ನಾಯಕರ ಸಂಘ ಶಹಾಪುರ.