ಶಹಾಪುರ ನಗರಸಭೆ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ

KannadaprabhaNewsNetwork | Published : Sep 9, 2024 1:44 AM

ಸಾರಾಂಶ

Shahpur Municipal Council: Inauguration of new President, Vice President

-ಉತ್ತಮ ಆಡಳಿತಕ್ಕೆ ಎಲ್ಲರ ಸಹಕಾರ ಅಗತ್ಯ: ಬಡಿಗೇರ

------

ಕನ್ನಡಪ್ರಭ ವಾರ್ತೆ ಶಹಾಪುರ

ನಗರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಗರಸಭೆಯ ಸಭಾಂಗಣದಲ್ಲಿ ನಡೆಯಿತು.

ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ ಅವರು ನಗರಸಭೆಯ ನೂತನ ಅಧ್ಯಕ್ಷರಾದ ಮೆಹರುನ್ ಬೇಗಂ ಲಿಯಾಖತ್ ಪಾಷಾ ಹಾಗೂ ಉಪಾಧ್ಯಕ್ಷರಾದ ಭೀಮಾಬಾಯಿ ದೇವಿಂದ್ರಪ್ಪ ಗೋನಾಲ್ ಅವರಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

ಬಳಿಕ ಮಾತನಾಡಿದ ಪೌರಾಯುಕ್ತ ರಮೇಶ್ ಬಡಿಗೇರ ಅವರು, ನಗರದ ಸ್ವಚ್ಛತೆ ನಮ್ಮದೇ ಜವಾಬ್ದಾರಿ. ನಗರದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ಹಲವು ತಿಂಗಳು ಆಡಳಿತಾಧಿಕಾರಿ ಆಡಳಿತ ನಡೆಸಲಾಗಿತ್ತು. ಈಗ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ನಗರದ ಜನತೆಗೆ ಅಗತ್ಯವಾದ ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಿಬ್ಬಂದಿಯಿಂದ ಸಂಪೂರ್ಣ ಸಹಕಾರ ನೀಡಲಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸದಸ್ಯರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇವೆ. ಉತ್ತಮ ಆಡಳಿತ ನಡೆಸಲು ತಮ್ಮೆಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ ಎಂದರು.

ಕಾಂಗ್ರೆಸ್ ಹಿರಿಯ ಮುಖಂಡ ಅಮರೇಶ್ ಗೌಡ ದರ್ಶನಾಪುರ ಅವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶುಭ ಕೋರಿ ಮಾತನಾಡಿ, ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕುಡಿವ ನೀರು, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಿಕೊಡುವ ಕೆಲಸಗಳಿಗೆ ಮೊದಲ ಆದ್ಯತೆ ನೀಡಬೇಕು. ನಗರದಲ್ಲಿ ಸ್ವಂತ ಮನೆರಹಿತ ಕಟುಂಬಗಳಿದ್ದು, ಅಂತಹ ಕುಟುಂಬಗಳಿಗೆ ನೆರವಾಗಬೇಕು. ನಗರ ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಮಾಡದೆ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ನಗರಸಭೆಯ ನೂತನ ಅಧ್ಯಕ್ಷೆ ಮೆಹರುನ್ ಬೇಗಂ ಅಧಿಕಾರ ಸ್ವೀಕರಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮತ್ತು ನಗರಸಭೆಯ ಸದಸ್ಯರ ‌ಬೆಂಬಲದಿಂದ ಅಧಿಕಾರ ಪಡೆದಿದ್ದೇನೆ. ನಗರಸಭೆ ವ್ಯಾಪ್ತಿಯ ಮೂಲಭೂತ ಸಮಸ್ಯೆಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ನಗರಸಭೆ ಸದಸ್ಯರ ಮತ್ತು ಸಾರ್ವಜನಿಕರ ಸಹಕಾರ ನೀಡಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಸುರಪುರ, ನಗರಸಭೆಯ ಎಇಇ ನಾನಸಾಬ್, ಪರಿಸರ ಅಭಿಯಂತರ ಹರೀಶ್ ಸಜ್ಜನ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ, ಪೀಪಲ್ಸ್ ಆಫ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸೈಯದ್ ಇಸಾಕ್ ಹುಸೇನ್ ಖಾಲಿದ್, ಮಹಾದೇವಪ್ಪ ಸಾಲಿಮನಿ, ವಿಜಯಕುಮಾರ್ ಎದುರುಮನಿ ಇದ್ದರು.

......ಬಾಕ್ಸ್.....

ಶಿಷ್ಟಾಚಾರ ಮರೆತ ಪೌರಾಯಕ್ತರ ವಿರುದ್ಧ ಕ್ರಮಕ್ಕೆ ಆಗ್ರಹ

ನೂತನ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇಲ್ಲಿ ಸಚಿವ ದರ್ಶನಾಪುರ ಅವರ ಸಹೋದರ, ಕಾಂಗ್ರೆಸ್‌ ಮುಖಂಡ ಅಂಬರೀಶಗೌಡ ಅವರು ವೇದಿಕೆ ಹಂಚಿಕೊಂಡಿದ್ದು, ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪಗಳು ಕೇಳಿ ಬಂದವು.

ಸಚಿವರ ಅನುಪಸ್ಥಿತಿಯಲ್ಲಿ, ಸಚಿವರ ಸಹೋದರನನ್ನು ಕುಳ್ಳಿರಿಸುವ ಮೂಲಕ ಪೌರಾಯಕ್ತರು ರಾಜಕೀಯ ಮಾಡಿದಂತಾಗಿದೆ.

ಪ್ರಭಾವಿ ವ್ಯಕ್ತಿಗಳಿಗೆ ಮಣೆ ಹಾಕುವ ಕೆಲಸ ಪೌರಾಯುಕ್ತರು ಮಾಡಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ತಕ್ಷಣ ಪೌರಾಯುಕ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಯಾಳಗಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.-------

ನಗರಸಭೆಗೆ ಕಾಂಗ್ರೆಸ್ ಪಕ್ಷದ 16 ಸದಸ್ಯರು, ಬಿಜೆಪಿ ಪಕ್ಷದ 12 ಸದಸ್ಯರು, ಎಸ್ ಡಿಪಿಐ 2, ಹಾಗೂ ಪಕ್ಷೇತರ ಒಬ್ಬರು ಸದಸ್ಯರು ಸೇರಿ 31 ಜನ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ 9 ಜನ ಬಿಜೆಪಿ ಸದಸ್ಯರು ಭಾಗಿಯಾಗಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸುವ ಮೂಲಕ ಆಚ್ಚರಿ ಮೂಡಿಸಿದ್ದಾರೆ. ರಾಜ್ಯ ಸಮಿತಿ ನಿರ್ದೇಶನದ ಮೇಲೆ ಸಧ್ಯದಲ್ಲೇ ಈ ಒಂಬತ್ತು ಜನ ಸದಸ್ಯರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

------

ಫೋಟೊ: 8ವೈಡಿಆರ್1: ಶಹಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.

------

Share this article