ಶಾಮನೂರು ತಾವಷ್ಟೇ ಅಲ್ಲ, ಇತರರನ್ನೂ ಬೆಳೆಸಿದ ಸಾಧಕ

KannadaprabhaNewsNetwork |  
Published : Jan 05, 2026, 01:30 AM IST
4ಕೆಡಿವಿಜಿ3, 4, 5-ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ, ನೇಕಾರ ವೇದಿಕೆಯಿಂದ ದಿ.ಶಾಮನೂರು ಶಿವಶಂಕರಪ್ಪನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ  ಪದ್ಮಸಾಲಿ ಮಹಾ ಸಂಸ್ಥಾನದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಕೆ.ಸಿ.ಕೊಂಡಯ್ಯ, ಎಸ್.ಎಂ.ಸಮರ್ಥ, ಆರ್.ಎಚ್.ನಾಗಭೂಷಣ, ಹುಲ್ಮನಿ ತಿಮ್ಮಣ್ಣ ಡಿ.ಬಸವರಾಜ ಪುಷ್ಪ ನಮನ ಸಲ್ಲಿಸಿದರು. | Kannada Prabha

ಸಾರಾಂಶ

ತಮ್ಮ ಸಾಧನೆ, ಜನಾನುರಾಗಿ ವ್ಯಕ್ತಿತ್ವದಿಂದ ಅಜಾತಶತ್ರು ಎನಿಸಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ತಾವಷ್ಟೇ ಬೆಳೆಯದೇ, ಎಲ್ಲ ಸಮುದಾಯಗಳನ್ನೂ ಬೆಳೆಸಿದರು. ಸಾವಿರಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟು, ಲಕ್ಷಾಂತರ ಕುಟುಂಬಗಳು ನೆಮ್ಮದಿ ಬಾಳು ಬಾಳಲು ಕಾರಣರಾಗಿದ್ದಾರೆ ಎಂದು ಪದ್ಮಸಾಲಿ ಮಹಾಸಂಸ್ಥಾನ ಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ದಾವಣಗೆರೆಯಲ್ಲಿ ಸ್ಮರಿಸಿದ್ದಾರೆ.

- ಪದ್ಮಸಾಲಿ ಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಶ್ಲಾಘನೆ । ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ ನುಡಿನಮನ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಮ್ಮ ಸಾಧನೆ, ಜನಾನುರಾಗಿ ವ್ಯಕ್ತಿತ್ವದಿಂದ ಅಜಾತಶತ್ರು ಎನಿಸಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ತಾವಷ್ಟೇ ಬೆಳೆಯದೇ, ಎಲ್ಲ ಸಮುದಾಯಗಳನ್ನೂ ಬೆಳೆಸಿದರು. ಸಾವಿರಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟು, ಲಕ್ಷಾಂತರ ಕುಟುಂಬಗಳು ನೆಮ್ಮದಿ ಬಾಳು ಬಾಳಲು ಕಾರಣರಾಗಿದ್ದಾರೆ ಎಂದು ಪದ್ಮಸಾಲಿ ಮಹಾಸಂಸ್ಥಾನ ಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಸ್ಮರಿಸಿದರು.

ನಗರದ ತೊಗಟವೀರ ಕಲ್ಯಾಣ ಮಂದಿರದಲ್ಲಿ ಭಾನುವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ, ಜಿಲ್ಲಾ ನೇಕಾರ ವೇದಿಕೆ ಹಾಗೂ ನೇಕಾರ ಒಕ್ಕೂಟದ ಮಹಿಳಾ ವಿಭಾಗದಿಂದ ಹಮ್ಮಿಕೊಂಡಿದ್ದ ದಿವಂಗತ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಾಲ್ಕೂವರೆ ದಶಕಕ್ಕಿಂತ ಹೆಚ್ಚು ಕಾಲದಿಂದಲೂ ಶಾಮನೂರು ಶಿವಶಂಕರಪ್ಪನವರ ಜೊತೆಗೆ ತಮ್ಮ ಒಡನಾಟವಿತ್ತು. ಶಾಮನೂರು ಅವರ ಅನನ್ಯ ಸಮಾಜ ಸೇವೆ, ಸರ್ವಜನಾಂಗವನ್ನು ಪ್ರೀತಿಸುವ, ಗೌರವಿಸುವ ಗುಣ ಎಲ್ಲರಿಗೂ ಪ್ರೇರಣೆಯಾಗಬೇಕಿದೆ. ನೇಕಾರರು ಇಂದು ಸಾಕಷ್ಟು ಜಾಗೃತಗೊಂಡಿದ್ದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.

ಯಾವುದೇ ಮನೆಯ ಹಿರಿಯರು ಸಂಸ್ಕಾರವಂತರಾಗಿದ್ದರೆ ಮಕ್ಕಳೂ ಅದೇ ದಾರಿಯಲ್ಲಿ ಸಾಗುತ್ತಾರೆಂಬುದಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬ ಸಾಕ್ಷಿಯಾಗಿದೆ. ಇಡೀ ಶಾಮನೂ ರು ಕುಟುಂಬ ಗುರು-ಹಿರಿಯರನ್ನು ನಡೆಸಿಕೊಳ್ಳುವ ರೀತಿ ಇತರರಿಗೆ ಪ್ರೇರಣಾದಾಯಕವಾಗಿದೆ. ಶಿವಶಂಕರಪ್ಪ ತಮ್ಮ ಕುಟುಂಬವನ್ನು ಸಮಾಜಕ್ಕೆ ದೊಡ್ಡ ಆಸ್ತಿಯಾಗಿ ನೀಡಿ ಹೋಗಿದ್ದಾರೆ. ಶಾಮನೂರು ಹಾಕಿಕೊಟ್ಟ ಹಾದಿಯಲ್ಲೇ ಇಡೀ ಕುಟುಂಬ ಸಾಗುವ ಮೂಲಕ ಇತರರಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಶಾಮನೂರು ಶಿವಶಂಕರಪ್ಪ ಅವರ ಆಪ್ತ, ಬಳ್ಳಾರಿ ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಮಾತನಾಡಿ, ಶಾಮನೂರು ಶಿವಶಂಕರಪ್ಪ ಕಷ್ಟಜೀವಿ. ನೂರಾರು ಕೋಟಿ ರು. ದಾನ-ಧರ್ಮ ಮಾಡಿದ್ದಾರೆ. ತಾವು ದುಡಿದ ಹಣದಲ್ಲಿ ದಾನವನ್ನು ಮಾಡಿದ್ದಾರೆ. ಅಂತಹ ಮಹಾನ್ ದಾನಿಯ ಆದರ್ಶಗಳನ್ನು ನಾವು, ನೀವೆಲ್ಲರೂ ನಮ್ಮ ಬದುಕಿನಲ್ಲೂ ಅ‍ಳವಡಿಸಿಕೊಳ್ಳಬೇಕಿದೆ. ಅಪರೂಪದ ವ್ಯಕ್ತಿತ್ವದ ಶಾಮನೂರು ಶಿವಶಂಕರಪ್ಪ ಅವರಿಗೆ ಶಿವಶಂಕರಪ್ಪನವರೇ ಸಾಟಿ ಎಂದು ಹೇಳಿದರು.

ಕುರುಹಿನ ಶೆಟ್ಟಿ ಸಮಾಜದ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರ ದೈವಭಕ್ತಿ ಎಲ್ಲರಿಗೂ ಪ್ರೇರಣೆಯಾಗಿದೆ. ಶ್ರೀ ಬಕ್ಕೇಶ್ವರ, ದುಗ್ಗಮ್ಮ, ಎಮ್ಮಿಗನೂರು ಕಲ್ಲೇಶ್ವರ ಸ್ವಾಮಿಯನ್ನು ಅಪಾರವಾಗಿ ನಂಬಿದ ದೈವೀ ಪುರುಷರಾಗಿದ್ದರು. ಅನ್ನದ ಬೆಲೆಯನ್ನು ಚನ್ನಾಗಿ ಅರಿತಿದ್ದರು. ಅಂತಹ ಸರಳ, ಸಂತೃಪ್ತಿಯ 95 ವರ್ಷದ ಜೀವನವನ್ನು ಸಾರ್ಥಕವಾಗಿ ಕಳೆದಿದ್ದಾರೆ. ಶಾಮನೂರು ಇಂತಹ ಮಾದರಿ, ಆದರ್ಶದ ಬದುಕನ್ನು ಎಲ್ಲರೂ ರೂಢಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತೊಗಟವೀರ ಸಮಾಜದ ಮುಖಂಡ ಡಿ.ಬಸವರಾಜ ಮಾತನಾಡಿ, ನುಡಿದಂತೆ ನಡೆದ ಶಾಮನೂರು ಅವರ ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಬೇಕು. ದೈವಭಕ್ತಿಯಿಂದ ಪ್ರೇರಣೆಗೊಂಡ ನಮ್ಮಂತಹ ಅನೇಕರು ಜೀವನದಲ್ಲಿ ದೈವಭಕ್ತಿ ರೂಢಿಸಿಕೊಂಡಿದ್ದೇವೆ. ಮಂತ್ರಾಲಯ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ರಾಜ್ಯ, ಹೊರ ರಾಜ್ಯದ ದೇವಾಲಯಗಳಿಗೆ ನೀಡಿದ ದಾನ, ದಾಸೋಹ ಅಗಣಿತ ಸೇವೆ ಸಲ್ಲಿಸಿದ್ದಂತಹ ಶಾಮನೂರು ಮೇರುಪರ್ವತವಾಗಿದ್ದಾರೆ ಎಂದು ಸ್ಮರಿಸಿದರು.

ದೂಡಾ ಆಯುಕ್ತ ತಿಮ್ಮಣ್ಣ ಹುಲ್ಮನಿ, ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಶ್ರೀಕಾಂತ್ ಎಂ. ಕಾಕಿ, ವೃತ್ತ ನಿರೀಕ್ಷಕಿ ಗಾಯತ್ರಿ, ಜಿಲ್ಲಾ ನೇಕಾರ ವೇದಿಕೆ ಅಧ್ಯಕ್ಷ ಸತ್ಯನಾರಾಯಣ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಾಕಮ್ಮ, ನೇಕಾರ ಸಮಾಜದ ಡಿ.ಬಸವರಾಜ ಗುಬ್ಬಿ, ಸ್ವಕುಳಸಾಲಿ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಧರ್ಮರಾಜ ಏಕಬೋಟೆ, ಪದ್ಮಸಾಲಿ ಸಮಾಜದ ಬೊಮ್ಮ ತಿಪ್ಪೇಸ್ವಾಮಿ, ಬಿ.ಎನ್. ರವಿಕುಮಾರ, ಹನುಮಂತಪ್ಪ ಕ್ಷೀರಸಾಗರ, ರಂಗನಾಥ್, ಸುರೇಂದ್ರಕುಮಾರ್, ರಮೇಶ್ ಜಂಬಣ್ಣ, ನೇಕಾರ ಸಮುದಾಯಗಳ ಒಕ್ಕೂಟದ ಮುಖಂಡರು, ಸಮಾಜ ಬಾಂಧ‍ವರು ಇದ್ದರು.

- - -

(ಬಾಕ್ಸ್‌) * ತಾತನ ಅಗಲಿಕೆ ದೊಡ್ಡ ಆಘಾತ: ಸಮರ್ಥಸಮಾರಂಭ ಉದ್ಘಾಟಿಸಿದ ಯುವ ಕೈಗಾರಿಕೋದ್ಯಮಿ ಸಮರ್ಥ ಎಂ. ಶಾಮನೂರು ಮಾತನಾಡಿ, ತಾತನ ಅಗಲಿಕೆ ನಮ್ಮ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ತಾತ ಇಲ್ಲದ ದಿನಗಳು ಶೂನ್ಯವನ್ನೇ ಸೃಷ್ಟಿಸುತ್ತಿವೆ. ಎಲ್ಲಾ ಸಮುದಾಯದವರು ತಾತನಿಗೆ ನುಡಿನಮನ ಸಲ್ಲಿಸುತ್ತಿರುವುದನ್ನು ನೋಡಿದರೆ ಎಲ್ಲ ಜಾತಿ, ಧರ್ಮ, ಸರ್ವ ಸಮುದಾಯದವರನ್ನೂ ಅದ್ಯಾವ ಪರಿ ಪ್ರೀತಿಸುತ್ತಿದ್ದರೆಂಬುದು ಗೊತ್ತಾಗುತ್ತಿದೆ. ನಮ್ಮ ತಾತನವರನ್ನು ಕಳೆದುಕೊಂಡಿರುವುದಕ್ಕೆ ನಾವಷ್ಟೇ ಅಲ್ಲ, ಎಲ್ಲರೂ ದುಃಖ ಅನುಭವಿಸುತ್ತಿದ್ದು, ತಾತನ ಮೇಲಿನ ಗೌರವ, ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.

- - -

-4ಕೆಡಿವಿಜಿ3, 4, 5.ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ, ನೇಕಾರ ವೇದಿಕೆಯಿಂದ ದಿ.ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪದ್ಮಸಾಲಿ ಮಹಾ ಸಂಸ್ಥಾನದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಕೆ.ಸಿ.ಕೊಂಡಯ್ಯ, ಎಸ್.ಎಂ.ಸಮರ್ಥ, ಆರ್.ಎಚ್.ನಾಗಭೂಷಣ, ಹುಲ್ಮನಿ ತಿಮ್ಮಣ್ಣ ಡಿ.ಬಸವರಾಜ ಪುಷ್ಪ ನಮನ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ