ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ ಸಹಿ ನಕಲು ಮಾಡಿ ಶಾಮನೂರು, ರಘು ಪಿಎ ಹೆಸರಲ್ಲಿ ‘ನೌಕರಿ ವಂಚನೆ’

KannadaprabhaNewsNetwork | Updated : Aug 26 2024, 05:25 AM IST

ಸಾರಾಂಶ

ಶಾಸಕರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ ಸಹಿ ನಕಲು ಮಾಡಿ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದು ಆಪ್ತ ಸಹಾಯಕರ ಕೆಲಸ ಗಿಟ್ಟಿಸಿ ಸರ್ಕಾರದಿಂದ ಸಂಬಳ ಪಡೆದು ವಂಚಿಸುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಶಾಸಕರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಸೃಷ್ಟಿಸಿ ಸಹಿ ನಕಲು ಮಾಡಿ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದು ಆಪ್ತ ಸಹಾಯಕರ ಕೆಲಸ ಗಿಟ್ಟಿಸಿ ಸರ್ಕಾರದಿಂದ ಸಂಬಳ ಪಡೆದು ವಂಚಿಸುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಕುದೂರು ನಿವಾಸಿ ಸ್ವಾಮಿ(35) ಹಾಗೂ ಕೂಡ್ಲೂರು ನಿವಾಸಿ ಅಂಜನ್‌ಕುಮಾರ್(28) ಬಂಧಿತರು. ಆರೋಪಿ ಸ್ವಾಮಿಯ ಪತ್ನಿ ಕೆ.ಸಿ.ವಿನುತಾ ಈ ವಂಚನೆ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದು, ಸದ್ಯ ಆಕೆ ಗರ್ಭಿಣಿಯಾಗಿರುವ ಹಿನ್ನೆಲೆ ಬಂಧಿಸದೆ ನೋಟಿಸ್‌ ನೀಡಲಾಗಿದೆ. ಹೆರಿಗೆ ಬಳಿಕ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗುತ್ತಿಗೆ ಕೆಲಸ ತೊರೆದು ವಂಚನೆ: ಈ ಜಾಲದ ಪ್ರಮುಖ ಕಿಂಗ್‌ಪಿನ್‌ ಸ್ವಾಮಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು, ಈ ಹಿಂದೆ ಪರಿಚಿತ ಶಾಸಕರ ನೆರವಿನಿಂದ ವಿಧಾನಸೌಧದಲ್ಲಿ ಗುತ್ತಿಗೆ ಕೆಲಸಕ್ಕೆ ಸೇರಿ ಬಳಿಕ ಕೆಲಸ ತೊರೆದು ರಾಜಕಾರಣಿಗಳ ಜತೆಗೆ ಓಡಾಡಿಕೊಂಡಿದ್ದ. ಶಾಸಕರ ಆಪ್ತ ಸಹಾಯಕರ ಕೆಲಸದ ಬಗ್ಗೆ ತಿಳಿದುಕೊಂಡಿದ್ದ ಸ್ವಾಮಿ, ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೆಸರಿನ ನಕಲಿ ಲೆಟರ್‌ ಹೆಡ್‌ ಸೃಷ್ಟಿ, ಸಹಿ ನಕಲು ಮಾಡಿ ವಿನುತಾಳನ್ನು ಆಪ್ತ ಸಹಾಯಕಿಯಾಗಿ ನೇಮಿಸುವಂತೆ ಶಾಸಕರ ಹೆಸರಿನಲ್ಲಿ ವಿಧಾನಸಭೆ ಸಚಿವಾಲಯಕ್ಕೆ ಶಿಫಾರಸು ಪತ್ರ ಕಳುಹಿಸಿದ್ದ.

ಸಚಿವಾಲಯ ಸಿಬ್ಬಂದಿ ಈ ಶಿಫಾರಸು ಪತ್ರದ ನೈಜತೆ ಅರಿಯದೆ ವಿನುತಾಳನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕಿಯಾಗಿ ನೇಮಿಸಿ 2023ರ ಮೇ ನಲ್ಲಿ ಆದೇಶಿಸಿದ್ದರು. ಬಳಿಕ ವಿನುತಾ ಒಂದು ದಿನವೂ ಕೆಲಸಕ್ಕೆ ಬಾರದ ಮನೆಯಲ್ಲೇ ಇದ್ದುಕೊಂಡು ಕಳೆದೊಂದು ವರ್ಷದಿಂದ ಪ್ರತಿ ತಿಂಗಳು 30 ಸಾವಿರ ರು. ಸಂಬಳ ಪಡೆದಿದ್ದಾಳೆ.

ಇತ್ತೀಚೆಗೆ ಗರ್ಭಿಣಿಯಾದ ವಿನುತಾ, ಶಾಸಕರ ಆಪ್ತ ಸಹಾಯಕಿ ಕೆಲಸದಿಂದ ತನ್ನನ್ನು ಬಿಡುಗಡೆಗೊಳಿಸುವಂತೆ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಳು. ಈ ಪತ್ರ ಬಗ್ಗೆ ಅನುಮಾನಗೊಂಡ ಸಚಿವಾಲಯ ಸಿಬ್ಬಂದಿ ಪರಿಶೀಲನೆ ಮಾಡಿದಾಗ ವಿನುತಾ ವಂಚನೆ ಗೊತ್ತಾಗಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 

ಬಿಜೆಪಿ ಶಾಸಕ ರಘು ಹೆಸರಿನಲ್ಲಿ ವಂಚನೆ:

ಆರೋಪಿ ಸ್ವಾಮಿ ವಿಚಾರಣೆ ವೇಳೆ ಬಿಜೆಪಿ ಶಾಸಕ ಎಸ್‌.ರಘು ಹೆಸರಿನಲ್ಲಿಯೂ ನಕಲಿ ಲೆಟರ್ ಹೆಡ್‌ ಸೃಷ್ಟಿಸಿ, ಸಹಿ ನಕಲು ಮಾಡಿ ಅಂಜನ್‌ ಕುಮಾರ್‌ನನ್ನು ಶಾಸಕರ ಆಪ್ತ ಸಹಾಯಕನ ಕೆಲಸಕ್ಕೆ ಸೇರಿದ್ದ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಅಂಜನ್‌ ಕುಮಾರ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಕೆಲಸಕ್ಕೆ ಹಾಜರಾಗದೆ ಮನೆಯಲ್ಲೇ ಇದ್ದುಕೊಂಡು ಮಾಸಿಕ ವೇತನ ಪಡೆಯುತ್ತಿದ್ದ. ತಾನು 5 ಸಾವಿರ ರು. ಮಾತ್ರ ಇರಿಸಿಕೊಂಡು ಉಳಿದ ಹಣವನ್ನು ಆರೋಪಿ ಸ್ವಾಮಿಗೆ ನೀಡುತ್ತಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article