ನಾಳೆ ಶಾಮನೂರು ನುಡಿನಮನ: ಎಸ್‌ಎಸ್‌ ಪುತ್ಥಳಿ ಅನಾವರಣ

KannadaprabhaNewsNetwork |  
Published : Dec 25, 2025, 01:15 AM IST
(ಶಾಮನೂರು ಶಿವಶಂಕರಪ್ಪ) | Kannada Prabha

ಸಾರಾಂಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ, ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕರಾಗಿದ್ದ, ಹಿರಿಯ ಕೈಗಾರಿಕೋದ್ಯಮಿ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಡಿ.26ರಂದು ನಗರದ ಆನೆಕೊಂಡ ಶ್ರೀ ಕಲ್ಲೇಶ್ವರ ಮಿಲ್‌ ಹಿಂಭಾಗದ ವಿಶಾಲ ಜಾಗದಲ್ಲಿ ನಡೆಯಲಿದೆ.

- 150 ಎಕರೆ ಜಾಗದಲ್ಲಿ ಕಾರ್ಯಕ್ರಮ: ಜಿಲ್ಲಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಾಹಿತಿ

- - -

- ಸಿದ್ದು, ಡಿಕೆಶಿ, ಎಚ್‌ಡಿಡಿ, ಖರ್ಗೆ, ಬಿಎಸ್‌ವೈ, ಎಚ್‌ಡಿಕೆ, ಶೆಟ್ಟರ್, ಬೊಮ್ಮಾಯಿ ಭಾಗಿ

- ಕಲ್ಲೇಶ್ವರ ಮಿಲ್‌ ಹಿಂಭಾಗದ ವಿಶಾಲ ಜಾಗದಲ್ಲಿ ಬೃಹತ್ ವೇದಿಕೆಗಳ ನಿರ್ಮಾಣ

- ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ ನಿರ್ಮಿಸಿರುವ ಶಾಮನೂರು ಶಿವಶಂಕರಪ್ಪ ಪುತ್ಥಳಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ, ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕರಾಗಿದ್ದ, ಹಿರಿಯ ಕೈಗಾರಿಕೋದ್ಯಮಿ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಡಿ.26ರಂದು ನಗರದ ಆನೆಕೊಂಡ ಶ್ರೀ ಕಲ್ಲೇಶ್ವರ ಮಿಲ್‌ ಹಿಂಭಾಗದ ವಿಶಾಲ ಜಾಗದಲ್ಲಿ ನಡೆಯಲಿದೆ.

ನಗರದ ಆನೆಕೊಂಡದ ಶ್ರೀ ಕಲ್ಲೇಶ್ವರ ಮಿಲ್ ಹಿಂಭಾಗದ ವಿಶಾಲ ಪೆಂಡಾಲ್‌, ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲನೆ ನಂತರ ಶಾಮನೂರು ಕಿರಿಯ ಪುತ್ರ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕಿರಿಯ ಸೊಸೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾರ್ಯಕ್ರಮ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ವಿವಿಧ ಮಠಾಧೀಶರು, ಧರ್ಮ ಗುರುಗಳು:

ಅಂದು ಬೆಳಗ್ಗೆ 10.15ಕ್ಕೆ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಂಭಾಪುರಿ ಪೀಠದ ಡಾ.ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ, ಕೇದಾರ ಪೀಠದ ಶ್ರೀ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಶ್ರೀ ವೀರ ಸಿಂಹಾಸನಾದೀಶ್ವರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಡಾ.ನಿರ್ಮಲಾನಂದ ಸ್ವಾಮೀಜಿ, ಹರಿಹರ ಶ್ರೀ ವಚನಾನಂದ ಸ್ವಾಮೀಜಿ, ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕನಕ ಪೀಠದ ಶ್ರೀ ನಿರಂಜನಾನಂದ ಪುರಿಸ್ವಾಮೀಜಿ, ಶ್ರೀ ಪಕ್ಕೀರ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮೂರು ಸಾವಿರ ಮಠದ ಶ್ರೀ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ಸರ್ವಜಾತಿ, ಧರ್ಮಗಳ ಗುರುಗಳ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್‌ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾರಂಭ ಉದ್ಘಾಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ ನಿರ್ಮಿಸಿರುವ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪನವರ ಪುತ್ಥಳಿ ಅನಾವರಣಗೊಳಿಸುವರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಿರುಹೊತ್ತಿಗೆ ಬಿಡುಗಡೆ ಮಾಡುವರು. ಸಾಕ್ಷ್ಯಚಿತ್ರವನ್ನು ಡಿಸಿಎಂ ಡಿ.ಕೆ. ಶಿವಕುಮಾರ ಬಿಡುಗಡೆ ಮಾಡುವರು. ಎಸ್‌.ಎಸ್‌. ಮಲ್ಲಿಕಾರ್ಜುನ ಸ್ವಾಗತ ಮಾಡಲಿದ್ದಾರೆ. ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡುವರು. ಎಸ್‌.ಎಸ್‌. ಗಣೇಶ ವಂದನಾರ್ಪಣೆ ಮಾಡುವರು ಎಂದು ತಿಳಿಸಲಾಯಿತು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲಕುಮಾರ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ನುಡಿನಮನ ಸಲ್ಲಿಸುವರು ಎಂದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಾ. ಜಿ.ಪರಮೇಶ್ವರ, ಎಚ್.ಕೆ.ಪಾಟೀಲ, ಕೆ.ಜೆ.ಜಾರ್ಜ್‌, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಡಾ. ಎಚ್.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಕೃಷ್ಣ ಬೈರೇಗೌಡ, ಶರಣಬಸಪ್ಪ ದರ್ಶನಾಪುರ, ಶಿವಾನಂದ ಎಸ್.ಪಾಟೀಲ, ಡಾ.ಶರಣ ಪ್ರಕಾಶ ಪಾಟೀಲ, ದಿನೇಶ ಗುಂಡೂರಾವ್‌, ಲಕ್ಷ್ಮೀ ಹೆಬ್ಬಾಳ್ಕರ್, ಬಿ.ಝೆಡ್. ಜಮೀರ್ ಅಹಮ್ಮದ್ ಖಾನ್‌, ರಹೀಂ ಖಾನ್, ಎನ್.ಚಲುವರಾಯ ಸ್ವಾಮಿ, ಎನ್.ಎಸ್. ಬೋಸರಾಜು, ತಿಮ್ಮಾಪುರ ರಾಮಪ್ಪ ಬಾಳಪ್ಪ, ಮಧು ಬಂಗಾರಪ್ಪ, ಬಿ.ಎಸ್.ಸುರೇಶ, ಡಿ.ಸುಧಾಕರ್‌, ಡಾ. ಎಂ.ಸಿ. ಸುಧಾಕರ್, ಬಿ.ಆರ್.ಪಾಟೀಲ, ಶಿವರಾಜ ತಂಗಡಗಿ, ಕೆ.ವಂಕಟೇಶ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ವಿಪ ಸದಸ್ಯ ಎನ್.ರವಿಕುಮಾರ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಶಾಸಕರಾದ ಡಿ.ಜಿ. ಶಾಂತನಗೌಡ, ಡಿ.ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಬಸವರಾಜ ವಿ.ಶಿವಗಂಗಾ, ಬಿ.ಪಿ.ಹರೀಶ, ಲತಾ ಮಲ್ಲಿಕಾರ್ಜುನ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.

ಶಾಮನೂರು ಆಪ್ತರಾದ ಹಿರಿಯ ಹೋಟೆಲ್ ಉದ್ಯಮಿ, ಅಪೂರ್ವ ಹೋಟೆಲ್ ಸಮೂಹಗಳ ಮುಖ್ಯಸ್ಥ ಅಣಬೇರು ರಾಜಣ್ಣ, ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಬಿ.ಎಚ್. ವೀರಭದ್ರಪ್ಪ, ಅಯೂಬ್ ಪೈಲ್ವಾನ್, ತ್ಯಾವಣಿಗೆ ಗೋವಿಂದ ಸ್ವಾಮಿ, ಬಿ.ಕೆ.ಪರಶುರಾಮ ಮಾಗಾನಹಳ್ಳಿ ಇತರರು ಇದ್ದರು.

- - -

(ಬಾಕ್ಸ್‌)

* ಶಾಮನೂರು ನುಡಿನಮನಕ್ಕೆ ಅಂತಿಮ ಸಿದ್ಧತೆ - ಸುಮಾರು 200ಕ್ಕೂ ಹೆಚ್ಚು ಮಠಾಧೀಶರು, ವಿವಿಐಪಿಗೆ ವಿಶಾಲ ವೇದಿಕೆಗಳು

- 3 ವೇದಿಕೆಗಳು ನಿರ್ಮಿಸಲಾಗಿದ್ದು, ಮುಖ್ಯ ವೇದಿಕೆಯಲ್ಲಿ ಪೂಜ್ಯರು, ಗಣ್ಯರು

- ಬಲ ಭಾಗದ ವೇದಿಕೆಯಲ್ಲಿ ಹರ-ಗುರು-ಚರಮೂರ್ತಿಗಳಿಗೆ ವ್ಯವಸ್ಥೆ - ವೇದಿಕೆ ಎಡ ಭಾಗದಲ್ಲಿ ಕುಟುಂಬ ಸದಸ್ಯರಿಗೆ ಆಸೀನರಾಗಲು ವ್ಯವಸ್ಥೆ ಇದೆ

- ಕಲ್ಲೇಶ್ವರ ಮಿಲ್‌ನ ಹಿಂಭಾಗದ ಸುಮಾರು ಸುಮಾರು 150 ಎಕರೆ ಜಾಗದಲ್ಲಿ ಸಿದ್ಧತೆ

- 50 ಸಾವಿರಕ್ಕೂ ಅಧಿಕ ಜನ ಸೇರುವ ಸಾಧ್ಯತೆ, 25 ಸಾವಿರ ಆಸನಗಳ ವ್ಯವಸ್ಥೆ

- 90 ಊಟದ ಕೌಂಟರ್ ಸ್ಥಾಪನೆ, ಗಣ್ಯಾತಿಗಣ್ಯರು, ಗಣ್ಯರಿಗೆ ಪ್ರತ್ಯೇಕ ಕಡೆ ಕೌಂಟರ್‌

- ಸಮಾರಂಭದ ಸಮಸ್ತರಿಗೂ ಒಂದೇ ರೀತಿಯ ಊಟದ ವ್ಯವಸ್ಥೆ ಮಾಡಲಾಗಿದೆ - ಪೂಜ್ಯರಿಗೆ ಬಾಪೂಜಿ ಬ್ಯಾಂಕ್ ಸಮುದಾಯ ಭವನ, ಶ್ರೀ ಗುರು ಬಕ್ಕೇಶ್ವರ ಕಲ್ಯಾಣ ಮಂಟಪ, ಶ್ರೀ ರೇಣುಕಾ ಮಂದಿರದಲ್ಲಿ ಪ್ರಸಾದ ವ್ಯವಸ್ಥೆ

- ಸಮಾರಂಭ ಸ್ಥಳದಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ, ಆ್ಯಂಬುಲೆನ್ಸ್, ಅಗ್ನಿಶಾಮಕ ಸಿಬ್ಬಂದಿ ನಿಯೋಜನೆ

- ಬೇತೂರು ರಸ್ತೆ, ರಿಂಗ್ ರಸ್ತೆ, ಬಸಾಪುರ ರಿಂಗ್ ರಸ್ತೆ ಮೂಲಕ ಸಮಾರಂಭ ಸ್ಥಳಕ್ಕೆ ಮಾರ್ಗ

- - -

-22ಕೆಡಿವಿಜಿ5: ದಾವಣಗೆರೆ ಶ್ರೀ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮದ ಕುರಿತು ಪುತ್ರ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೊಸೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಇದ್ದರು. -22ಕೆಡಿವಿಜಿ11.ಜೆಪಿಜ: ಶ್ರೀ ಕಲ್ಲೇಶ್ವರ ಮಿಲ್‌ನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮಕ್ಕೆ 200 ಜನರು ಆಸೀನರಾಗುವಂಥ ವಿಶಾಲ ವೇದಿಕೆ ಹಾಗೂ ದೊಡ್ಡ ಪೆಂಡಾಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಎಸ್‌ಎಸ್‌ಎಂ, ಡಾ.ಪ್ರಭಾ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ