- ಹೊನ್ನಾಳಿಯಲ್ಲಿ ದಸರಾ ಸಂಪನ್ನ । ಪರಸ್ಪರ ಬನ್ನಿ ನೀಡಿ ಶುಭ ಕೋರಿದ ಭಕ್ತರು
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದುಷ್ಟಶಕ್ತಿ ವಿರುದ್ಧ ವಿಜಯದ ಸಂಕೇತವಾಗಿ ಇಡೀ ನಾಡಿನಾದ್ಯಂತ ಆಚರಿಸುವ ದಸರಾ ಹಬ್ಬದ ಹತ್ತನೇ ದಿನವಾದ ಬುಧವಾರ ಹೊನ್ನಾಳಿ ಹಿರೇಕಲ್ಮಠದ ಸ್ವಾಮೀಜಿ ಸೇರಿದಂತೆ ಪಟ್ಟಣದ ಅನೇಕ ದೇವರುಗಳು ವಿವಿಧ ಪುಷ್ಪಗಳಿಂದ ಶೃಂಗರಿಸಲ್ಪಟ್ಟ ಪಲ್ಲಕ್ಕಿಗಳಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಹೊರವಲಯದಲ್ಲಿನ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ, ಸ್ವಾಮೀಜಿ ಸೀಮೋಲ್ಲಂಘನೆ ಗೈಯುವ ಮೂಲಕ ದಸರಾ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಲಾಯಿತು.ಪಟ್ಟಣದ ಹೊರವಲಯದ ಬನ್ನಿ ಮಂಟಪಕ್ಕೆ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಾಗೂ ಪಟ್ಟಣದ ನೀಲಕಂಠೇಶ್ವರ ದೇವರು ಸೇರಿದಂತೆ ಅನೇಕ ದೇವರುಗಳನ್ನು ವಿವಿಧ ಮಂಗಳವಾದ್ಯಗಳು, ಪುರೋಹೀತರ ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದವು. ಸ್ವಾಮೀಜಿಯವರು ಸಹಸ್ರಾರು ಭಕ್ತರ ಸಮ್ಮುಖ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ, ನಂತರ ಸೀಮೋಲ್ಲಂಘನಗೈದು ಆಶೀರ್ವಾದ ರೂಪದಲ್ಲಿ ಸ್ಥಳದಲ್ಲಿ ಸೇರಿದ್ದ ಸಹಸ್ರಾರು ಭಕ್ತರಿಗೆ ಪವಿತ್ರ ಬನ್ನಿಯನ್ನು ನೀಡಿ ಆಶೀರ್ವದಿಸಿದರು.
ಸೀಮೊಲ್ಲಂಘನ ನಂತರ ಬನ್ನಿ ಮಂಟಪದಿಂದ ಮೆರವಣಿಗೆ ಮೂಲಕ ಸ್ವಾಮೀಜಿ ಅವರನ್ನು ಹೊತ್ತ ಪಲ್ಲಕ್ಕಿ ಹಾಗೂ ಪಟ್ಟಣದ ಅನೇಕ ದೇವರುಗಳ ಪಲ್ಲಕ್ಕಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದವು. ಈ ವೇಳೆ ಭಕ್ತರು ಹೂವಿನ ಹಾರ, ಫಲ-ಪುಷ್ಪಗಳನ್ನು ಸ್ವಾಮೀಜಿಯವರಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು.
-21ಎಚ್.ಎಲ್.ಐ1: