ಶನಿವಾರಸಂತೆ: 4 ವರ್ಷಗಳ ಬಳಿಕ ಮೊದಲ ಗ್ರಾಮಸಭೆ

KannadaprabhaNewsNetwork | Published : Dec 30, 2023 1:30 AM

ಸಾರಾಂಶ

ಶನಿವಾರಸಂತೆ ಗ್ರಾ.ಪಂ. ಗ್ರಾಮಸಭೆ ನಾಲ್ಕು ವರ್ಷಗಳ ನಂತರ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆ, ಬೇಡಿಕೆಗಳನ್ನು ತಿಳಿಸಿದರು. ಹಿಂದಿನ ಪಿಡಿಒ ಹಗರಣದ ಬಗ್ಗೆ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಶನಿವಾರಸಂತೆ ಗ್ರಾ.ಪಂ. 2023-24ನೇ ಸಾಲಿನ ಗ್ರಾಮಸಭೆ ಗುರುವಾರ ಗ್ರಾ.ಪಂ. ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ನಾಡ ಕಚೇರಿ ಆವರಣದ ಮುಂಭಾಗದಲ್ಲಿ ನಡೆಯಿತು.

ಸಭೆ ನಡೆಯುವ ಆರಂಭಕ್ಕೆ ಮುನ್ನ ತಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ.ಚಂದ್ರು ಸದರಿ ಗ್ರಾ.ಪಂ.ನ ಗ್ರಾಮಸಭೆಯನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸದಿರುವುದಕ್ಕೆ ನಮಗೆ ಕಾರಣ ಕೊಡಿ, ಆಮೇಲೆ ಸಭೆಯನ್ನು ಪ್ರಾರಂಭ ಮಾಡಿ ಎಂದರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಹರೀಶ್, 2019-20ರ ಸಾಲಿನಲ್ಲಿ ಗ್ರಾಮಸಭೆ ನಡೆಸಲಾಗಿದೆ ಆಗಿನ ಅವಧಿಯಲ್ಲಿ ನಾನು ಸದರಿ ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸಿರಲಿಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಈ ಬಗ್ಗೆ ನಡೆಯುತ್ತಿದ್ದ ಚರ್ಚೆಯ ಮಧ್ಯಪ್ರವೇಶಿಸಿದ 2020-21ನೇ ಸಾಲಿನಲ್ಲಿ ಗ್ರಾ.ಪಂ. ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಸರೋಜ ಶೇಖರ್, ನಾನು ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ನಡೆಸಲಾಗುತ್ತಿರಲಿಲ್ಲ ಎಂದರು.

ಗ್ರಾ.ಪಂ. 2ನೇ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದ ಫರ್ಜಾನ ಶಾಹಿದ್ ಖಾನ್ ಪ್ರತಿಕ್ರಿಯಿಸಿ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಗ್ರಾಮಸಭೆ ನಡೆಸಲಾಗಿರಲಿಲ್ಲ ಎಂದರು. ಈ ಬಗ್ಗೆ ಸುದೀರ್ಘವಾಗಿ ನಡೆಯಿತು.ಇಲಾಖೆ ಅಧಿಕಾರಿಗಳ ಮಾಹಿತಿಗೆ ಕುರಿತಾಗಿ ನಡೆದ ಚರ್ಚೆಯಲ್ಲಿ ಜಲಜೀವನ್ ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜಿಗೆ ಮೀಟರ್ ಅಳವಡಿಸುವ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಕಾಮಗಾರಿ ಸಂದರ್ಭ ಗ್ರಾ.ಪಂ.ನಿಂದ ಸರಬರಾಜುವಾಗುತ್ತಿದ್ದ ಪೈಪ್‍ಲೈನ್ ಹಾನಿಯಾಗಿದ್ದರಿಂದ ಕುಡಿಯುವ ನೀರಿಗೆ ಈಗಲೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಗ್ರಾ.ಪಂ. ಸದಸ್ಯ ಎಸ್.ಸಿ.ಶರತ್‍ ಶೇಖರ್, ಜಲಜೀವನ್ ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ನಮ್ಮ ಗ್ರಾ.ಪಂ.ನಿಂದ ಕುಡಿಯುವ ನೀರು ಸರಬರಾಜು ಮಾಡಲು ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಮಾರ್ಚ್ ಅಂತ್ಯದಲ್ಲಿ ಜಲ ಜೀವನ ಯೋಜನೆಯ ಬಾಕಿ ಆಗಿರುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಶನಿವಾರಸಂತೆ ಉಪ ತಹಸೀಲ್ದಾರ ನಾಗರಾಜ್ ಅವರು ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಮಾಹಿತಿ ನೀಡಿದರು. ಈ ಚರ್ಚೆಯಲ್ಲಿ ಆರ್.ಪಿ.ಮೋಹನ್, ಭುವನೇಶ್ವರಿ ಹರೀಶ್ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಅರ್ಜಿದಾರರಿಗೆ ಆಗುತ್ತಿರುವ ನಿರ್ಲಕ್ಷ್ಯ, ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.

ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಅರಣ್ಯ ಇಲಾಖೆಗೆ ಸೇರಿದ ನೆಡುತೋಪು ಜಾಗದಲ್ಲಿ ಹಾವುಗೊಲ್ಲರ ಕೇರಿ ಇದ್ದು, ಅಲ್ಲಿನ ನಿವಾಸಿಗಳು ನಮ್ಮ ಗ್ರಾ.ಪಂ.ಗೆ ಮತದಾನದ ಹಕ್ಕುದಾರರಾಗಿದ್ದಾರೆ. ಮತಚೀಟಿ, ಪಡಿತರ ಚೀಟಿಯನ್ನು ಹೊಂದಿದ್ದಾರೆ. ಆದರೆ ನಮ್ಮ ಗ್ರಾ.ಪಂ.ನಿಂದ ಅಲ್ಲಿನ ನಿವಾಸಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಅವರು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ವಾಸವಾಗಿರುವುದ್ದರಿಂದ ವಸತಿ ಸೇರಿದಂತೆ ಸವಲತ್ತುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಜಾಗ ಮಂಜೂರಾತಿ ನೀಡುವಂತೆ ಸದಸ್ಯ ಶರತ್‍ ಶೇಖರ್ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ಡಿಟಿ ನಾಗರಾಜ್, ಅರಣ್ಯ ಇಲಾಖೆಗೆ ಒಳಪಡುವ ಜಾಗವನ್ನು ಕಂದಾಯ ಇಲಾಖೆಯಿಂದ ಮಂಜೂರಾತಿ ಮಾಡಿಕೊಡಲು ಸಾಧ್ಯವಾಗುವುದಿಲ್ಲ ಎಂದರು.

ಪಟ್ಟಣದಲ್ಲಿ ವಾಹನ ದಟ್ಟತ್ತೆ ಹೆಚ್ಚುತ್ತಿದ್ದು, ಟ್ರಾಫಿಕ್ ಸಮಸ್ಯೆ ಸೇರಿದಂತೆ ಪಟ್ಟಣದಲ್ಲಿ ದ್ವಿಚಕ್ರ ವಾಹನ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಹರೀಶ್‍ಕುಮಾರ್ ಪ್ರಸ್ತಾಪಿಸಿದರು. ಇದಕ್ಕೆ ಗ್ರಾ.ಪಂ. ಸದಸ್ಯೆ ಸರೋಜ ಶೇಖರ್ ಧ್ವನಿಗೂಡಿಸಿದರು. ಪೊಲೀಸ್ ಠಾಣಾಧಿಕಾರಿ ಗೋವಿಂದ್‍ರಾಜ್ ಪ್ರತಿಕ್ರಿಯಿಸಿ, ಟ್ರಾಫಿಕ್ ಸಮಸ್ಯೆ, ಪಟ್ಟಣದಲ್ಲಿ ಸುಗಮ ವಾಹನ ಸಂಚಾರ ವ್ಯವಸ್ಥೆಗೆ ಗ್ರಾ.ಪಂ.ನವರು ಮತ್ತು ನಾಗರಿಕರು ಸಹಕರಿಸಬೇಕಾಗುತ್ತದೆ. ವಾಹನ ಕಳ್ಳತನ ಪ್ರಕರಣಗಳ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ ಎಂದರು.

ಗ್ರಾ.ಪಂ. ಹಿಂದಿನ ಪಿಡಿಒ ಸದರಿ ಗ್ರಾ.ಪಂ.ನಲ್ಲಿ ಹಲವಾರು ಹಗರಣಗಳನ್ನು ಮಾಡಿದ್ದಾರೆ. ಈ ಬಗ್ಗೆ ಅವರ ವಿರುದ್ಧ ತನಿಖೆ ನಡೆಸಿ ಎಂದು ಗ್ರಾಮಸ್ಥ ಸಂತೋಷ್ ಆಗ್ರಹಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಗ್ರಾಮಸಭೆ ನೋಡಲ್ ಅಧಿಕಾರಿ ಮಿಲನ ಭರತ್, ಗ್ರಾಮಸ್ಥರು ಸಭೆಯಲ್ಲಿ ಮಾಡಿರುವ ಆರೋಪದ ಬಗ್ಗೆ ಸಭೆಯ ನಡುವಳಿಕೆಯಲ್ಲಿ ಅಂಗಿಕರಿಸುವಂತೆ ಪಿಡಿಒಗೆ ಸೂಚಿಸಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಗೀತ ಹರೀಶ್ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷ ಸರ್ದಾರ್ ಆಹಮ್ಮದ್, ಸದಸ್ಯರಾದ ಶರತ್‍ಶೇಖರ್, ಎಸ್.ಎನ್.ರಘು, ಆದಿತ್ಯ ಗೌಡ, ಎಸ್.ಆರ್.ಮಧು, ಸರೋಜ ಶೇಖರ್, ಪರ್ಜಾನ ಶಾಹಿದ್ ಖಾನ್, ಕಾವೇರಿ, ಸರಸ್ವತಿ ಕಾರ್ಯದರ್ಶಿ ದೇವರಾಜ್ ಮುಂತಾದವರು ಹಾಜರಿದ್ದರು.

Share this article