ಶನಿವಾರಸಂತೆ: ರೈತರ ಕೃಷಿ ವಿದ್ಯುತ್‌ ಸಂಪರ್ಕ ಕಡಿತ ವಿರೋಧಿಸಿ ಪ್ರತಿಭಟನೆ

KannadaprabhaNewsNetwork | Published : Feb 22, 2024 1:48 AM

ಸಾರಾಂಶ

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಲ್ಲಿ ರೈತರ 1 ಎಚ್‍ಪಿ ಯಿಂದ 10 ಎಚ್‍ಪಿ ಪಂಪ್‍ಸೆಟಿಗೆ ಉಚಿತ ವಿದ್ಯುತ್ ಸರಬರಾಜು ನೀಡಿದೆ. ಆದರೆ ವಿದ್ಯುತ್ ಇಲಾಖೆ ಕೊಡಗು ಜಿಲ್ಲೆಯಲ್ಲಿ ರೈತರು ಈ ಹಿಂದೆ ಬಾಕಿ ಮಾಡಿರುವ 10 ಎಚ್‍ಪಿ ವರೆಗಿನ ಪಂಪ್‍ಸೆಟ್ಟಿನ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಇದೀಗ ಚೆಸ್ಕಾಂ ರೈತರ 10 ಎಚ್‍ಪಿ ಪಂಪ್‍ಸೆಟಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ಆಕ್ಷೇಪಿಸಿ ರೈತರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆಹಂಡ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ರೈತರು ಪಂಪ್‍ಸೆಟ್‍ಗೆ ಅಳವಡಿಸಿರುವ 10 ಅಶ್ವಶಕ್ತಿ ಸಾಮರ್ಥ್ಯದ ವಿದ್ಯುತ್ ಮೋಟರಿನ ಬಾಕಿ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಶನಿವಾರಸಂತೆ ಚೆಸ್ಕಾಂ ಬಿಲ್ ಪಾವತಿಸದ ರೈತರ ಪಂಪ್‍ಸೆಟಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಹಂಡ್ಲಿ ಭಾಗದ ರೈತರು ಶನಿವಾರಸಂತೆ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಲ್ಲಿ ರೈತರ 1 ಎಚ್‍ಪಿ ಯಿಂದ 10 ಎಚ್‍ಪಿ ಪಂಪ್‍ಸೆಟಿಗೆ ಉಚಿತ ವಿದ್ಯುತ್ ಸರಬರಾಜು ನೀಡಿದೆ. ಆದರೆ ವಿದ್ಯುತ್ ಇಲಾಖೆ ಕೊಡಗು ಜಿಲ್ಲೆಯಲ್ಲಿ ರೈತರು ಈ ಹಿಂದೆ ಬಾಕಿ ಮಾಡಿರುವ 10 ಎಚ್‍ಪಿ ವರೆಗಿನ ಪಂಪ್‍ಸೆಟ್ಟಿನ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಇದೀಗ ಚೆಸ್ಕಾಂ ರೈತರ 10 ಎಚ್‍ಪಿ ಪಂಪ್‍ಸೆಟಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ.

ಬೇಸಿಗೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಫಿ, ಕಾಳು ಮೆಣಸು, ಅಡಕೆ, ಮತ್ತು ಇತರೆ ತೋಟದ ಬೆಳೆಗಳಿಗೆ ಪಂಪ್‍ಸೆಟಿನ ಮೂಲಕ ನೀರು ಹಾಯಿಸುವ ಅಗತ್ಯ ಇರುತ್ತದೆ ಇಂಥಹ ಸಂದರ್ಭದಲ್ಲಿ ಚೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ ಬಗ್ಗೆ ರೈತರು ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಅವರಿಗೆ ಮನವಿ ನೀಡಿದರು. ರೈತರ ಪಂಪ್‍ಸೆಟ್‍ಗಳಿಗೆ ಮರು ವಿದ್ಯುತ್ ಸಂಪರ್ಕ ನೀಡುವಂತೆ ಕೋರಿದ್ದರು.

ಮನವಿ ಸ್ವೀಕರಿಸಿದ್ದ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಸಭೆಯಲ್ಲಿ ತೀರ್ಮಾನಕ್ಕೆ ಬರುವ ತನಕ ರೈತರ ಯಾವುದೇ ಪಂಪ್‍ಸೆಟಿನ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡದಂತೆ ಚೆಸ್ಕಾಂಗೆ ಮೌಖಿಕ ಆದೇಶ ನೀಡಿದ್ದರು.

ಹಂಡ್ಲಿ ವ್ಯಾಪ್ತಿಯಲ್ಲಿ ಈ ಹಿಂದೆ ವಿದ್ಯುತ್ ಬಿಲ್ ಬಾಕಿ ಮಾಡಿರುವ ರೈತರ 10 ಎಚ್‍ಪಿ ವರೆಗಿನ ಪಂಪ್‍ಸೆಟಿನ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂನವರು ಕಡಿತಗೊಳಿಸಿದ್ದಾರೆ. ಇದೀಗ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು ಈ ಭಾಗದ ರೈತರ ಕಾಫಿ ಹೂವು ಬಿಡಲು ಮತ್ತು ಕಾಳು ಮೆಣಸಿನ ಬಳಿಗೆ ನೀರು ಹಾಯಿಸುವ ಅಗತ್ಯ ಇದೆ. ಮಳೆಯಾದರೆ ನೀರು ಹಾಯಿಸುವ ಅಗತ್ಯ ಇರುವುದಿಲ್ಲ. ಆದರೆ ಚೆಸ್ಕಾಂನವರು ಈ ಭಾಗದಲ್ಲಿ ರೈತರ ಪಂಪ್‍ಸೆಟಿನ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದ್ದರಿಂದ ನೀರು ಹಾಯಿಸಲು ಸಾಧ್ಯವಾಗದೆ ಕಾಫಿ ಗಿಡ, ಕಾಳು ಮೆಣಸು ಬಳ್ಳಿ ಒಣಗಿ ಹೋಗುತ್ತಿದೆ.

ಪ್ರತಿಭಟನೆ ಸಂದರ್ಭ ಬೆಳೆಗಾರರು, ನಾವು ನಮ್ಮ ಕಾಫಿ ತೋಟಗಳಿಗೆ ತುಂಬಾ ಬಿಸಿಲು ಇದ್ದ ಸಂದರ್ಭದಲ್ಲಿ ಮಾತ್ರ ಪಂಪ್‍ಸೆಟಿನ ಮೂಲಕ ನೀರು ಹಾಯಿಸುತ್ತೇವೆ. ಮಳೆಯಾದರೆ ನಮಗೆ ಇದರ ಅಗತ್ಯ ಇರುವುದಿಲ್ಲ. ಕಾಫಿ ಹೂವು ಬಿಡಲು ಮತ್ತು ಕಾಳು ಮೆಣಸಿಗೆ ಈಗ ನೀರು ಹಾಯಿಸುವ ಅಗತ್ಯ ಇರುತ್ತದೆ. ಹೀಗಿದ್ದರೂ, ಶಾಸಕರು ವಿದ್ಯುತ್ ಕಡಿತಗೊಳಿಸಬಾರದೆಂದು ನಿಮ್ಮ ಇಲಾಖೆಗೆ ಸೂಚಿಸಿದರೂ ಸಹ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೀರಿ ಎಂದು ಆಕ್ಷೇಪಿಸಿದರು. ಮರು ಸಂಪರ್ಕ ನೀಡುವಂತೆ ಚೆಸ್ಕಾಂ ಶಾಖಾಧಿಕಾರಿ ಸುದೀಪ್ ಅವರಲ್ಲಿ ಆಗ್ರಹಿಸಿದರು.

ರೈತರು ಈ ಹಿಂದೆ ಬಾಕಿ ಮಾಡಿರುವ ವಿದ್ಯುತ್ ಬಿಲ್ ಪಾವತಿಸಿದ ಮೇಲೆ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು ಇಲಾಖೆಯ ಸೂಚನೆಯಂತೆ ರೈತರು ಬಾಕಿ ಮಾಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಗಾರರು ರೈತರ ಕಷ್ಟ ಅರ್ಥ ಮಾಡಿಕೊಂಡು ಮತ್ತೆ ವಿದ್ಯುತ್ ಮರು ಸಂಪರ್ಕ ನೀಡುವಂತೆ ಒತ್ತಾಯಿದರು. ಕೊನೆಗೆ ಚೆಸ್ಕಾಂ ಶಾಖಾಧಿಕಾರಿ ಸುದೀಪ್ ಈಗ ನಮ್ಮ ವ್ಯಾಪ್ತಿಯಲ್ಲಿ ರೈತರ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುವ ಪಂಪ್‍ಸೆಟ್‍ಗಳಿಗೆ ತಾತ್ಕಾಲಿಕ ಸಮಯದವರಗೆ ಮರು ಸಂಪರ್ಕ ಕಲ್ಪಿಸಿ ಕೊಡುವ ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.ಹಂಡ್ಲಿ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಮಧು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮನು ಹೆಬ್ಲುಸೆ, ಮಹಾದೇವಪ್ಪ, ಸಂದೀಪ್, ಎಸ್.ಕೆ.ವೀರಪ್ಪ, ಎಸ್.ಕೆ.ಶಿವಪ್ಪ, ವೇಣುಕುಮಾರ್, ಶಿವಕುಮಾರ್ ಮತ್ತಿತರರಿದ್ದರು.

Share this article