ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಶನಿವಾರಸಂತೆ ಭಾಗದ ನೂರಾರು ಪಾದಯಾತ್ರಿಗಳ ತಂಡ ಮಾ.7 ರ ವರೆಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಪಾದಯಾತ್ರಿಗಳು ಪಟ್ಟಣದ ಶ್ರೀ ಪಾರ್ವತಿ ಚಂದ್ರಮೌಳೇಶ್ವರ ಗಣಪತಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಾದಯಾತ್ರಿಗಳು ತಲ ಕಾವೇರಿಯಿಂದ ತಂದು ದೇವಸ್ಥಾನದಲ್ಲಿ ಸಂಗ್ರಹಿಸಿ ಇಟ್ಟಿದ್ದ ತೀರ್ಥವನ್ನು ಧರ್ಮಸ್ಥಳಕ್ಕೆ ತೆರಳುವ ಬೆಳ್ಳಿ ರಥಯಾತ್ರೆ ವಾಹನದಲ್ಲಿಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದಲ್ಲಿ ಪೂಜಿಸಲು ತೆಗೆದುಕೊಂಡು ಹೋದರು. ನಂತರ ಪಾದಯಾತ್ರಿಗಳು ಪಟ್ಟಣದ ಮುಖ್ಯರಸ್ತೆ ಮೂಲಕ ಹೊರಟರು.
ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಪಾದಯಾತ್ರಿ ತಂಡ ಮತ್ತು ಶನಿವಾರಸಂತೆ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಶನಿವಾರಸಂತೆ ಮುಖ್ಯರಸ್ತೆಯಿಂದ ಸಮಿಪದ ದುಂಡಳ್ಳಿ ಗ್ರಾಮದ ವರೆಗೆ ರಸ್ತೆಬದಿಯಲ್ಲಿ ಬಿದ್ದಿದ್ದ ತ್ಯಾಜ್ಯವಸ್ತುಗಳನ್ನು ಹೆಕ್ಕಿ ಸ್ವಚ್ಛತಾ ಶ್ರಮದಾನ ಮಾಡುವ ಮೂಲಕ ತೆರಳಿದರು. ಪಾದಯಾತ್ರಿಗಳು ಚಂಗಡಹಳ್ಳಿ, ಕೂಡುರಸ್ತೆ, ವನಗೂರು, ಬಿಸ್ಲೆ, ಸುಬ್ರಮಣ್ಯ ರಸ್ತೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದ ಬೆಳೆಸಿದರು. ತಂಡದಲ್ಲಿ ಯುವಕ, ಯುವತಿಯರು, ಹಿರಿಯ ಪುರುಷರು, ಮಹಿಳೆಯರು ಉತ್ಸಾಹದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳಿದ್ದಾರೆ.