ಅಂಕಪಟ್ಟಿಗಾಗಿ ಶಂಕರ್‌ ಆನಂದ ಸಿಂಗ್ ಪದವಿ ಕಾಲೇಜ್‌ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork | Published : Nov 30, 2024 12:47 AM

ಸಾರಾಂಶ

ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪದವಿ ಅಂತಿಮ ವರ್ಷದ ಫಲಿತಾಂಶ ತಡವಾಗಿದೆ.

ಹೊಸಪೇಟೆ; ಪ್ರಾಜೆಕ್ಟ್‌ ವರ್ಕ್‌ ಮಾಡಿದರೂ ನಮ್ಮ ಫಲಿತಾಂಶ ಬಂದಿಲ್ಲ. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪದವಿ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಬೇಕು ಎಂದು ನಗರದ ಶಂಕರ್ ಆನಂದ್ ಸಿಂಗ್ ಪದವಿ ಕಾಲೇಜಿನ ಎದುರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಪದವಿ ಅಂತಿಮ ವರ್ಷದ ಫಲಿತಾಂಶ ತಡವಾಗಿದೆ. ಮತ್ತೊಂದೆ 130 ವಿದ್ಯಾರ್ಥಿಗಳು ಪ್ರಾಜೆಕ್ಟ್‌ ವರ್ಕ್ ಮಾಡಿಕೊಟ್ಟರೂ ಫಲಿತಾಂಶ ಬಂದಿಲ್ಲ. ಇದರಿಂದ ಪರೀಕ್ಷೆ ಬರೆದ ನೂರಾರು ವಿದ್ಯಾರ್ಥಿಗಳು ಪಿಜಿ ಹಾಗೂ ಬಿ.ಎಡ್‌ ಕೋರ್ಸ್‌ಗಳಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ. ಪ್ರಾಜೆಕ್ಟ್ ವರ್ಕ್ ಮಾಡಿದರೂ ಫಲಿತಾಂಶ ಬಂದಿಲ್ಲ. ಇದು ಕಾಲೇಜಿನ ಸಮಸ್ಯೆಯೋ ಅಥವಾ ವಿವಿಯ ಸಮಸ್ಯೆಯೋ ತಿಳಿಯುತ್ತಿಲ್ಲ. ಉನ್ನತ ಶಿಕ್ಷಣಕ್ಕಾಗಿ ಇನ್ನೂ ಒಂದು ವರ್ಷ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಫಲಿತಾಂಶ ಪ್ರಕಟದಲ್ಲಿ ಒಂದಿಲ್ಲೊಂದು ಯಡವಟ್ಟು ಮಾಡುತ್ತದೆ. ವಿವಿಯಿಂದ ಇದುವರೆಗೆ ಅಂಕಪಟ್ಟಿ ಬಂದಿಲ್ಲ. ಈಗ ಫಲಿತಾಂಶ ಪ್ರಕಟ ವಿಳಂಬದಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕನಸಿಗೆ ಇನ್ನೂ ಒಂದು ವರ್ಷ ಕಾಯುವಂತೆ ಮಾಡಿದೆ. ಶುಲ್ಕ ಕಟ್ಟುವಲಿ ಒಂದು ದಿನ ತಡವಾದರೂ ಸಾವಿರಾರು ರು. ದಂಡ ವಿಧಿಸುತ್ತಾರೆ. ಆದರೆ ವಿವಿ ಯಡವಟ್ಟಿಗೆ ನಮ್ಮ ಭವಿಷ್ಯ ಹಾಳಾಗುತ್ತಿದೆ ಎಂದು ದೂರಿದರು.

ವಿಎಸ್‌ಕೆ ವಿವಿಯಿಂದ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಕೂಡಲೇ ಅಂಕಪಟ್ಟಿ ವಿತರಿಸಬೇಕು. ಕಳೆದ ಸೆಮ್ ಫಲಿತಾಂಶದಲ್ಲಿ ನಡೆದ ಹಲವು ಸಮಸ್ಯೆಗಳನ್ನು ಪರಿಹರಿಸಬೇಕು. ಅಂಕಪಟ್ಟಿಯನ್ನು ಕೂಡಲೇ ವಿತರಿಸಬೇಕು. ಪಿಜಿ ಹಾಗೂ ಬಿ.ಎಡ್‌ ಕೋರ್ಸ್‌ಗಳು ಸೇರಿದಂತೆ ಇತರೆ ಉನ್ನತ ಶಿಕ್ಷಣ ಪ್ರವೇಶಕ್ಕಾಗಿ ಪ್ರವೇಶದ ದಿನಾಂಕ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಾದ ಎಂ. ಭೀಮ, ಅನಿಲ್‌, ಎಂ. ಮಲ್ಲಿಕಾರ್ಜುನ, ಎನ್‌. ನಾಗರಾಜ, ತನುಜಾ, ಮಂಜುಳಾ, ನಿರ್ಮಲಾ, ಪವಿತ್ರಾ, ಪುಷ್ಪಾ, ಅನುಷಾ ಮತ್ತಿತರರಿದ್ದರು.

ಹೊಸಪೇಟೆಯ ಶಂಕರ್‌ ಆನಂದ ಸಿಂಗ್‌ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಪ್ರತಿಭಟನೆ ನಡೆಸಿದರು. ಬಳಿಕ ಕಾಲೇಜಿನ ಪ್ರಾಚಾರ್ಯ ಹೆಬಸೂರ ಅವರೊಂದಿಗೆ ಚರ್ಚಿಸಿದರು.

Share this article