ಬದುಕನ್ನು ಅರ್ಥೈಸುವುದೇ ನಿಜವಾದ ಶಿಕ್ಷಣ: ಶಂಕರ್ ದೇವನೂರು

KannadaprabhaNewsNetwork | Published : May 21, 2024 12:35 AM

ಸಾರಾಂಶ

ಮಾತು, ಮನಸ್ಸು, ಮಣ್ಣನ್ನು ಶುದ್ಧವಾಗಿ ಇಟ್ಟುಕೊಂಡಾಗ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಮಣ್ಣು ಎನ್ನುವುದು ರಾಷ್ಟ್ರಾಭಿಮಾನದ ಪ್ರತೀಕ. ಪ್ರಸ್ತುತ ಶಿಕ್ಷಣ ಮತ್ತು ಬದುಕಿನ ನಡುವೆ ಅಂತರವಿದೆ. ಹಾಗಾಗಿ ನಮ್ಮ ಮಕ್ಕಳು ಬದುಕನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದಾರೆ. ಬದುಕನ್ನು ಅರ್ಥೈಸಿಕೊಳ್ಳುವುದೇ ನಿಜವಾದ ಶಿಕ್ಷಣ. ಮಕ್ಕಳಿಗೆ ನಾವು ಶಾಲಾ ಕಾಲೇಜುಗಳಲ್ಲಿ ನೀಡುತ್ತಿರುವ ಶಿಕ್ಷಣ ನೈತಿಕ ಬದುಕನ್ನು ಕಲಿಸಿಕೊಡುತ್ತಿಲ್ಲ.

- ಅಧ್ಯಾತ್ಮ ಚಿಂತಕ ಶಂಕರ್ ದೇವನೂರು ಅಭಿಮತ

ಕನ್ನಡಪ್ರಭ ವಾರ್ತೆ ನಂಜನಗೂಡು

ಮಕ್ಕಳಿಗೆ ಪಠ್ಯ, ಪಠ್ಯೇತರ ವಿಷಯಗಳನ್ನು ಕಲಿಸುವುದಷ್ಟೇ ಶಿಕ್ಷಣವಲ್ಲ. ಬದುಕುವುದನ್ನು ಕಲಿಸುವುದು ನಿಜವಾದ ಮೌಲ್ಯಯುತ ಶಿಕ್ಷಣ ಎಂದು ಅಧ್ಯಾತ್ಮ ಚಿಂತ ಕ ಶಂಕರ್ ದೇವನೂರು ಹೇಳಿದರು.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಹಾಮನೆಯಲ್ಲಿ ಸೋಮವಾರ ನಡೆದ ಮಕ್ಕಳ ಉಚಿತ ಯೋಗ ಮತ್ತು ಬೌದ್ಧಿಕ್ ವಸಂತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾತು, ಮನಸ್ಸು, ಮಣ್ಣನ್ನು ಶುದ್ಧವಾಗಿ ಇಟ್ಟುಕೊಂಡಾಗ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಮಣ್ಣು ಎನ್ನುವುದು ರಾಷ್ಟ್ರಾಭಿಮಾನದ ಪ್ರತೀಕ. ಪ್ರಸ್ತುತ ಶಿಕ್ಷಣ ಮತ್ತು ಬದುಕಿನ ನಡುವೆ ಅಂತರವಿದೆ. ಹಾಗಾಗಿ ನಮ್ಮ ಮಕ್ಕಳು ಬದುಕನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದಾರೆ. ಬದುಕನ್ನು ಅರ್ಥೈಸಿಕೊಳ್ಳುವುದೇ ನಿಜವಾದ ಶಿಕ್ಷಣ. ಮಕ್ಕಳಿಗೆ ನಾವು ಶಾಲಾ ಕಾಲೇಜುಗಳಲ್ಲಿ ನೀಡುತ್ತಿರುವ ಶಿಕ್ಷಣ ನೈತಿಕ ಬದುಕನ್ನು ಕಲಿಸಿಕೊಡುತ್ತಿಲ್ಲ. ಬುದ್ಧಿವಂತೆರೆಲ್ಲರೂ ಒಳ್ಳೆಯವರಾಗಿರುವುದಿಲ್ಲ. ಒಳ್ಳೆಯವರೆಲ್ಲರೂ ಬುದ್ಧಿವಂತರಾಗಿರುವುದಿಲ್ಲ. ಬುದ್ಧಿವಂತರಾಗಿ ಒಳ್ಳೆಯವರಾಗಬೇಕಿದೆ. ಬಾಗುವಿಕೆಯಲ್ಲಿ ಬದುಕಿದೆ, ಬೀಗುವಿಕೆಯಲ್ಲಿ ಬದುಕಿಲ್ಲ ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕಿದೆ. ನಮ್ಮ ಬದುಕು ನದಿಯಂತೆ ಮೂಲಸ್ವರೂಪ ಕಳೆದುಕೊಳ್ಳಬಾರದು. ನಮ್ಮ ಪರಂಪರೆ, ಸಂಸ್ಕೃತಿ, ಆಚರಣೆಗಳು ನಮ್ಮನ್ನು ಕಾಯಬೇಕು ಹಾಗೂ ಒಟ್ಟುಗೂಡಿಸಬೇಕೇ ಹೊರತು ಬೇರ್ಪಡಿಸಬಾರದು ಎಂದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಎನ್.ಆರ್. ಗಣೇಶಮೂರ್ತಿ ಮಾತನಾಡಿ, ವಯಸ್ಕರಿಗೆ ಯೋಗ, ಧ್ಯಾನ, ಆಧ್ಯಾತ್ಮ ಶಿಕ್ಷಣ ಸಿಕ್ಕರೆ ಸಾಲದು. ಭವಿಷ್ಯದ ಮಕ್ಕಳಿಗೆ ಸಂಸ್ಕಾರ, ಪರಂಪರೆಯ ಅರಿವು, ನೈತಿಕ ಮೌಲ್ಯವನ್ನು ಬಿತ್ತಿದರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂಬ ಸದಾಶಯದೊಂದಿಗೆ ಕಳೆದ 15 ವರ್ಷಗಳಿಂದ ಬೇಸಿಗೆಯಲ್ಲಿ ಉಚಿತ ಯೋಗ ಮತ್ತು ಬೌದ್ಧಿಕ್ ವಸಂತ ಶಿಬಿರವನ್ನು ಆಯೋಜಿಸುತ್ತಾ ಬರಲಾಗಿದೆ. ಇದಕ್ಕೆ ಅನೇಕ ಸಹೃದಯರು ಸೇವೆ ಸಲ್ಲಿಸುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ. ರೇವಣ್ಣ ಮಾತನಾಡಿ, ಕಳೆದ 20 ದಿನಗಳಿಂದ ನಡೆದ ವಸಂತ ಶಿಬಿರದಲ್ಲಿ ಪ್ರತಿದಿನ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಅಗತ್ಯವಿರುವ ಮೌಲಿಕ ಮಾತುಗಳನ್ನು ಹೇಳಿಕೊಟ್ಟಿದ್ದಾರೆ. ಅದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಸತ್ಪ್ರಜೆಗಳಾಗುವ ನಿಟ್ಟಿನಲ್ಲಿ ಮಕ್ಕಳು ಮುಂದಾಗಬೇಕು. ಹಾಗಾದರೆ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಯೋಗ ಬಂಧುಗಳ ಮಕ್ಕಳಿಗೆ ಪ್ರೋತ್ಸಾಹ ಪೂರ್ವಕ ಗೌರವಿಸಲಾಯಿತು. ಬಳಿಕ ಶಿಬಿರದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ. ಉಡಿಗಾಲ, ನಂಜನಗೂಡು ಯೋಗ ಫೌಂಡೇಶನ್ ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್, ಎಸ್.ಪಿವೈಎಸ್.ಎಸ್. ನರಸಿಂಹರಾಜ ಉಪನಗರ ಸಂಚಾಲಕ ಶ್ರೀಶೈಲ, ಹೈಕೋರ್ಟ್ ವಕೀಲ ಪಿ. ಮಹೇಶ ಇದ್ದರು.

Share this article