ಕನ್ನಡಪ್ರಭ ವಾರ್ತೆ ಶೃಂಗೇರಿ
ಶ್ರೀ ಮಠದ ನರಸಿಂಹವನದಲ್ಲಿ ಶನಿವಾರ ಶ್ರೀ ಶಾರದಾ ಪೀಠದ ಹಿರಿಯ ಜಗದ್ಗುರು ಶ್ರೀ ಭಾರತಿ ತೀರ್ಥರು ಸನ್ಯಾಸ ಸ್ವೀಕಾರದ 50ನೇ ವರ್ಷದ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ ಹಾಗೂ ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಶ್ರೀ ಶಂಕರರು ಧರ್ಮಸ್ಥಾಪನೆ ಮಾಡಿದ ಕಾರಣ ಸನಾತನ ಧರ್ಮ 1200 ವರ್ಷಗಳ ಕಾಲ ದೃಢವಾಗಿ ನಿಲ್ಲಲು ಕಾರಣವಾಯಿತು. ಶ್ರೀ ಶಂಕರರ ಏಕಮಾತ್ರ ಮಾರ್ಗದಿಂದ ಐಕ್ಯಮತ ಸಾಧಿಸಲು ಸಾಧ್ಯ. ಶ್ರೀ ಶಂಕರರ ಸ್ಮರಣೆ ಮಾಡಿ, ಅವರ ಜಯಂತಿಯನ್ನು ಮನೆ ಮನೆಗಳಲ್ಲಿ ಆಚರಿಸಬೇಕು ಎಂದರು.
ಜಗದ್ಗುರುಗಳು ಸನ್ಯಾಸ ಸ್ವೀಕರಿಸಿ 50 ವರ್ಷಗಳು ಕಳೆದಿವೆ. 36 ನೇ ಪೀಠಾಧಿಪತಿಗಳಾಗಿ ಅನೇಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳ ಅಭಿವೃದ್ಧಿ ಮಾಡಿದ್ದಾರೆ. ಸನಾತನ ಧರ್ಮದ ಪ್ರಚಾರಕ್ಕಾಗಿ ದೇಶ ಸಂಚಾರ ಮಾಡಿದ್ದಾರೆ. ಇಂದು ನಮ್ಮೆಲ್ಲರ ಎದುರು ಸುವರ್ಣ ಸಿಂಹಾಸನದಲ್ಲಿ ಕುಳಿತಿರುವುದು ನಮ್ಮೆಲ್ಲರ ಪುಣ್ಯ ಎಂದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಧರ್ಮದಲ್ಲಿ ನಂಬಿಕೆ, ದೇವರಲ್ಲಿ ಭಕ್ತಿ ಹೊಂದಿರಬೇಕು. ಧರ್ಮದಿಂದ ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಯಶಸ್ಸು ಸಿಗುತ್ತದೆ. ನಾವು ನಮ್ಮ ಮನೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಹಾಗೆಯೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಇದು ಕರ್ತವ್ಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ ಎಂದರು.
ಬೆಳಿಗ್ಗೆಯಿಂದಲೇ ಶೃಂಗೇರಿ ಪಟ್ಟಣದತ್ತ ಜನಸಾಗರವೇ ಹರಿದು ಬಂದಿತು. ಶೃಂಗೇರಿ ಪಟ್ಟಣ, ಶ್ರೀಮಠದ ಆವರಣ, ನರಸಿಂಹವನ ಎಲ್ಲೆಲ್ಲೂ ಜನಜಂಗುಳಿಯೇ ಕಂಡುಬಂದಿತು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜನಸಾಗರ ನೆರೆದಿತ್ತು.ಕಾರ್ತಿವೀರಾರ್ಜುನ ವಿಗ್ರಹಕ್ಕೆ ಡಿಕೆಶಿ ಶತ್ರು ಸಂಹಾರ ಪೂಜೆ:
ಶತ್ರು ಸಂಹಾರಕ್ಕಾಗಿ ಪೂಜಿಸುವ ಮತ್ತು ಈ ವಿಗ್ರಹಕ್ಕೆ ಪೂಜಿಸಿ ಆರಾಧಿಸಿದರೆ ಕಳೆದುಕೊಂಡ ವಸ್ತು ಪುನಃ ಸಿಗುತ್ತದೆ ಎಂದು ಪ್ರತೀತಿ ಇರುವ ಶೃಂಗೇರಿ ದೇವಾಲಯದ ಹೊರಗೋಡೆಯಲ್ಲಿರುವ ಕಾರ್ತಿವೀರಾರ್ಜುನ ವಿಗ್ರಹಕ್ಕೆ ಶನಿವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಮೆಣಸೆ ಕೊರಡ್ಕಲ್ಲಿ ಹೆಲಿಪ್ಯಾಡ್‌ಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು, ಕಾರಿನಲ್ಲಿ ಶ್ರೀ ಮಠದ ನರಸಿಂಹವನಕ್ಕೆ ತೆರಳಿ ಶ್ರೀ ಗುರು ನಿವಾಸದಲ್ಲಿ ಜಗದ್ಗುರು ಭಾರತೀ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ನಂತರ ನರಸಿಂಹವನದಲ್ಲಿ ನಡೆಯುತ್ತಿದ್ದ ಭಾರತೀ ತೀರ್ಥರ ಸನ್ಯಾಸ ಸ್ವೀಕಾರ 50ನೇ ವರ್ಷದ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರ ಆಶೀರ್ವಾದ ಪಡೆದರು. ನಂತರ ಶಾರದಾಂಬೆ ದೇವಾಲಯಕ್ಕೆ ತೆರಳಿ ಶಾರದಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ತೋರಣಗಣಪತಿ ದರ್ಶನ ಪಡೆದು ಈಡುಗಾಯಿ ಒಡೆದರು. ಶಂಕರಾಚಾರ್ಯ ದೇವಾಲಕ್ಕೆ ತೆರಳಿ ದರ್ಶನ ಪಡೆದರು. ವಿದ್ಯಾಶಂಕರ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.