ಕನ್ನಡಪ್ರಭ ವಾರ್ತೆ ಯಾದಗಿರಿ
ಆದಿ ಶಂಕರಾಚಾರ್ಯರು ಭಾರತೀಯ ಸನಾತನ ತತ್ವಜ್ಞಾನ ಪರಂಪರೆ ಉಳಿಸಿದ ಮಹಾನ್ ಸಂತ ಶಿರೋಮಣಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ಹೇಳುವಂತೆ ಶಂಕರರು ಇಲ್ಲದಿದ್ದಲ್ಲಿ ಭಾರತೀಯ ತತ್ವಜ್ಞಾನ ಪರಂಪರೆ ಇರುತ್ತಿರಲಿಲ್ಲ ಎಂದು ಚಿಂತಕ ಮಹೇಶ ದೀಕ್ಷಿತ್ ಹೇಳಿದರು.ನಗರದ ಯಾಜ್ಞಾವಲ್ಕ್ಯ ಕಾಲೊನಿಯಲ್ಲಿನ ರಾಘವೇಂದ್ರಸ್ವಾಮಿ ಮಂದಿರದಲ್ಲಿ ಶಂಕರ ಸೇವಾ ಸಮಿತಿ ಮತ್ತು ಶಾರದಾ ಶಂಕರ ಮಹಿಳಾ ಭಜನಾ ಮಂಡಳಿ ಜಿಲ್ಲಾ ಘಟಕದಿಂದ ನಡೆದ ಆದಿ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶಂಕರರು ಸನಾತನ ಹಿಂದೂ ಧರ್ಮಕ್ಕೆ ಹೊಸ ದಿಸೆಯ ಒದಗಿಸಿದವರು. ಶಂಕರರು ಚಿಕ್ಕವರಿದ್ದಾಗ ಸನ್ಯಾಸ ಸ್ವೀಕರಿಸಿದರೂ, ಕೊನೆ ಕಾಲದಲ್ಲಿ ತಾಯಿ ಅಂತ್ಯೇಷ್ಟಿ ನೆರವೇರಿಸಿ, ತಾಯಿಗಿಂತ ಯಾವ ವ್ಯಕ್ತಿತ್ವ ದೊಡ್ಡದ್ದಲ್ಲ ಎಂದು ಜಗತ್ತಿಗೆ ತಿಳಿಸಿದರು.ಅಖಂಡ ರಾಷ್ಟ್ರೀಯ ಭಾರತದ ಕಲ್ಪನೆಯ ದೃಷ್ಟಿಯಿಂದ ನಾಲ್ಕು ಪೀಠ ಸ್ಥಾಪಿಸಿದರು. ಕೇವಲ 16ನೇ ವಯಸ್ಸಿನಲ್ಲಿ ಭಾರತೀಯ ತತ್ವಶಾಸ್ತ್ರದ ಸಾರ ತಿಳಿದು, ಶಾಸ್ತ್ರಕ್ಕೊಂದು ಹೊಸ ಯೋಚನೆ ಕೊಟ್ಟವರು. ವಿವೇಕಾನಂದರು ಅದ್ವೈತ ತತ್ವ ಪ್ರಸಾರ ಮಾಡುತ್ತಾ, ಶಂಕರರ ವ್ಯಕ್ತಿತ್ವ ಜಗತ್ತಿಗೆ ಪಸರಿಸಿದರು. ಷಣ್ಮತಗಳ ಆರಾಧನೆ ಪಸರಿಸಿ, ಏಕತ್ವವನ್ನು ತೋರಿಸಿದರು. ಹೀಗೆ ಶಂಕರರ ಸ್ಮರಣೆ, ಭಾರತೀಯ ತತ್ವಜ್ಞಾನ ತಿಳಿಯುವ ಯತ್ನವಾಗಿದೆ ಎಂದರು.
ಪಂಡಿತ ನರಸಿಂಹಾಚಾರ್ಯ ಪುರಾಣಿಕ, ಪಂಡಿತ ರಾಘವೇಂದ್ರಾಚಾರ್ಯ ಮತ್ತು ಭೀಮಾಶಂಕರ ಕೂಡ್ಲಿಗಿ ಉಪನ್ಯಾಸ ನೀಡಿ, ಭಾರತೀಯ ಧಾರ್ಮಿಕ, ಜ್ಞಾನ ಪರಂಪರೆಗೆ ಆದಿ ಶಂಕರಾಚಾರ್ಯರ ಕೊಡುಗೆ ಅನನ್ಯವಾಗಿದೆ. ಹಿಂದೂ ಸನಾತನ ಧರ್ಮಕ್ಕೆ ಘಟ್ಟಿತನದ ಅಡಿಪಾಯ ಹಾಕಿದವರು ಶಂಕರಾಚಾರ್ಯರು. ಅವರು ಹಾಕಿ ಕೊಟ್ಟ ಧಾರ್ಮಿಕ, ವಿಧಿ-ವಿಧಾನ, ಪೂಜೆ ಮತ್ತು ಜೀವನ ಮೌಲ್ಯಗಳನ್ನು ನಾವೆಲ್ಲರೂ ಒಂದು ದೀಕ್ಷೆಯ ರೂಪದಲ್ಲಿ ಪಾಲಿಸಿ ಆಚಾರ್ಯರಿಗೆ ಗೌರವ ಸಲ್ಲಿಸೋಣ ಎಂದರು.ಕಾರ್ಯಕ್ರಮದಲ್ಲಿ ಶಂಕರ ಸೇವಾ ಸಮಿತಿ ತಾಲೂಕಾಧ್ಯಕ್ಷ ಗೋರಖನಾಥ ಜೋಷಿ, ಕಿಶನರಾವ್ ಕುಲಕರ್ಣಿ, ನರಸಿಂಗರಾವ್ ಯಾಳಗಿ, ಶಂಕರರಾವ್ ಕುಲಕರ್ಣಿ, ಗುರುನಾಥಭಟ್ ಜೋಷಿ, ರವೀಂದ್ರ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಡಾ. ಪ್ರಮೋದ್, ಅಶೋಕ ಮುಕಿಹಾಳ್, ಸುರೇಶ ದೇಶಪಾಂಡೆ, ಅನುಸೂಯಾ ಜೋಷಿ, ಶ್ರೀದೇವಿ ಜೋಷಿ, ಲಥಾ ಕುಲಕರ್ಣಿ, ಪ್ರಫುಲ್ಲತಾ ಕುಲಕರ್ಣಿ ಇತರರಿದ್ದರು.