ಅಜ್ಜಂಪುರ ತಾಲೂಕು ತೃತಿಯ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಶಂಕರಪ್ಪ ಆಯ್ಕೆ

KannadaprabhaNewsNetwork |  
Published : Dec 02, 2024, 01:16 AM IST
1ಎಜೆಪಿ1. | Kannada Prabha

ಸಾರಾಂಶ

ಅಜ್ಜಂಪುರ, ಡಿಸೆಂಬರ್ 15 ರಂದು ಹಣ್ಣೆಯಲ್ಲಿ ನಡೆಯಲಿರುವ ಅಜ್ಜಂಪುರ ತಾಲೂಕು ತೃತಿಯ ಜಾನಪದ ಸಮ್ಮೇಳನದ ಅಧ್ಯಕ್ಷರನ್ನಾಗಿ ಜಾನಪದ ಹಿರಿಯ ಕಲಾವಿದ ಚಿಕ್ಕಾನವಂಗಲದ ಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ತಿಳಿಸಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ ಅಜ್ಜಂಪುರ ತಾಲೂಕು, ಚಿಕ್ಕಮಗಳೂರು ಜಿಲ್ಲಾ ಘಟಕ, ಶ್ರೀಶೈಲ ಶಾಖಾ ಮಠ ಹಣ್ಣೆ ಸಂಯುಕ್ತ ಆಶ್ರಯ

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಡಿಸೆಂಬರ್ 15 ರಂದು ಹಣ್ಣೆಯಲ್ಲಿ ನಡೆಯಲಿರುವ ಅಜ್ಜಂಪುರ ತಾಲೂಕು ತೃತಿಯ ಜಾನಪದ ಸಮ್ಮೇಳನದ ಅಧ್ಯಕ್ಷರನ್ನಾಗಿ ಜಾನಪದ ಹಿರಿಯ ಕಲಾವಿದ ಚಿಕ್ಕಾನವಂಗಲದ ಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ತಿಳಿಸಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ ಅಜ್ಜಂಪುರ ತಾಲೂಕು, ಚಿಕ್ಕಮಗಳೂರು ಜಿಲ್ಲಾ ಘಟಕ ಮತ್ತು ಶ್ರೀಶೈಲ ಶಾಖಾ ಮಠ ಹಣ್ಣೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ ಅವರು, ಶಂಕರಪ್ಪ ಅವರು ಸುಮಾರು 30 ವರ್ಷಗಳಿಂದ ಜಿಲ್ಲೆಯಾದ್ಯಂತ ಜಾನಪದ ಗೀತೆ ಗಾಯನ, ಸಾಮಾಜಿಕ ನಾಟಕ, ವೀರಗಾಸೆ ನೃತ್ಯ, ಒಗಟು ಗಾದೆ ಮುಂತಾದ ಜಾನಪದ ಕಲಾ ಪ್ರಕಾರ ಪ್ರದರ್ಶಿಸಿ ಅನೇಕ ಗೌರವ ಸನ್ಮಾನಗಳನ್ನು ಹಲವಾರು ಸಂಘ ಸಂಸ್ಥೆಗಳಿಂದ ಸ್ವೀಕರಿಸಿದ್ದಾರೆ ಎಂದರು.

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ತಾಲೂಕಿನ ಶಾಸಕ ಜಿ.ಎಚ್. ಶ್ರೀನಿವಾಸ್ ಉದ್ಘಾಟಿಸಲಿದ್ದು, ಜಿಲ್ಲೆಯ ಪ್ರಮುಖ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲೆಯ ಎಲ್ಲ ಕಲಾವಿದರನ್ನು ಒಂದೆಡೆ ಸೇರಿಸಿ. ಜಾನಪದ ಕಲೆ, ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ದೊರಕಿಸಲಾಗುವುದು. ಡೊಳ್ಳು ಕುಣಿತ, ವೀರಗಾಸೆ, ಮರಗಾಲು ಕುಣಿತ, ಕೀಲು ಕುದುರೆ ಕುಣಿತ, ಸುಗ್ಗಿ ಕುಣಿತ, ವೀರ ಭದ್ರನ ಕುಣಿತ, ಕೋಲಾಟ, ಗಾಡಿ ಗೊಂಬೆ ಕುಣಿತ, ಸೋಮನ ಕುಣಿತ, ಮಹಿಳೆಯರ ವೀರಗಾಸೆ ಮತ್ತು ಜಾನಪದ ನೃತ್ಯ, ಪಟ ಕುಣಿತ, ನಂದಿ ಧ್ವಜ ಕುಣಿತ, ಹೀಗೆ ಜಿಲ್ಲೆಯ ಎಲ್ಲ ಜಾನಪದ ಕಲಾ ಪ್ರಕಾರಗಳ, ಕಲಾವಿದರನ್ನು ಒಂದೆಡೆ ಸೇರಿಸಿ, ಅದ್ಧೂರಿ ಸಮ್ಮೇಳನ ನಡೆಸಲಾಗುವುದು ಮತ್ತು ಹಿರಿಯ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಘಟಕದ ಗೌರವಾಧ್ಯಕ್ಷ ಮರಳು ಸಿದ್ದಪ್ಪ ಮಾತನಾಡಿ, ತಾಲೂಕಿನ ಎಲ್ಲ ಕಲಾವಿದರು ಸಮ್ಮೇಳನಕ್ಕೆ ಆಗಮಿಸಲಿದ್ದು ಎಲ್ಲ ಕಲಾವಿದರಿಗೂ ಕಲಾ ಪ್ರಾಕಾರಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗುವುದು. ಸಮ್ಮೇಳನದ ಅಧ್ಯಕ್ಷರನ್ನು ಪೂರ್ಣ ಕುಂಭ ಸ್ವಾಗತ ಕೋರಿ, ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಗುವುದು. ಜಾನಪದ ಗೋಷ್ಠಿ ಹಮ್ಮಿಕೊಂಡಿದ್ದು, ಜಿಲ್ಲೆಯ ಸಾಹಿತಿಗಳು ಪ್ರಮುಖ ವಿಷಯ ಕುರಿತು ಮಾತನಾಡಲಿದ್ದಾರೆ. ರಾತ್ರಿ ಗೀತೋತ್ಸವ ನಡೆಯಲಿದೆ ಎಂದರು.

ಸಮ್ಮೇಳನದ ಅಧ್ಯಕ್ಷ ಶಂಕರಪ್ಪ ಮಾತನಾಡಿ. ಕಳೆದ 35 ವರ್ಷಗಳಿಂದ ಜಾನಪದ ಕಲಾ ಕ್ಷೇತ್ರಕ್ಕೆ ನಾನು ಸಲ್ಲಿಸಿದ ಸೇವೆಗೆ ಸಂದ ಗೌರವ ಇದಾಗಿದೆ. ನನ್ನ ಕಲಾ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ ಎಂದರು.

ಅಜ್ಜಂಪುರ ಘಟಕದ ತಾಲೂಕು ಅಧ್ಯಕ್ಷ ಡಾ. ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲ ಹೋಬಳಿ ಗಳಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಗೊಂಡೇದಹಳ್ಳಿ ತಿಪ್ಪೇಶ್, ಸಾಹಿತಿ ರಾಜಣ್ಣ ಶಿವಮೂರ್ತಿ, ಶಿವಕುಮಾರ್, ಸಂಗಪ್ಪ, ಎಲ್ಐಸಿ ಶಿವಕುಮಾರ್, ಅಣ್ಣಯ್ಯ, ನವೀನ, ಭುವನೇಶ್, ಕಲ್ಲೇಶಪ್ಪ, ವಿನೋದ, ಯಶೋಧಾ, ದಿವ್ಯ ಮೊದಲಾದವರು ಉಪಸ್ಥಿತರಿದ್ದರು.

1ಎಜೆಪಿ1.....ಕಜಾಪ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಶಂಕರಪ್ಪನವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ