ಶಂಕರಪುರ: ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಸಂಪನ್ನ

KannadaprabhaNewsNetwork | Published : Oct 12, 2024 12:04 AM

ಸಾರಾಂಶ

ಸಾಲ್ಮರ ಕೃಷ್ಣವೇಣಿ ಆಯುರ್ವೇದ ಮತ್ತು ಆಯುರ್ವೇದ ಆಶ್ರಯಧಾಮ ಸಾಲ್ಮರ ನೇತೃತ್ವದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಿತು. ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಹಾಗೂ ಶಂಕರಪುರ ರೋಟರಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶಂಕರಪುರ ಸಮೀಪದ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಮತ್ತು ಆಯುರ್ವೇದ ಆಶ್ರಯಧಾಮ ಸಾಲ್ಮರ ನೇತೃತ್ವದ ಹಾಗೂ ರೋಟರಿ ಕ್ಲಬ್ ಶಂಕರಪುರ, ರೋಟರ್‍ಯಾಕ್ಟ್ ಕ್ಲಬ್ ಸುಭಾಸ್‌ನಗರ, ರೋಟರಿ ಸಮುದಾಯದಳ ಇನ್ನಂಜೆ ಸಹಭಾಗಿತ್ವದಲ್ಲಿ ಏರ್ಪಡಿಸಿದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಹಾಗೂ ಶಂಕರಪುರ ರೋಟರಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್‌ನ ಈ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಒಳ್ಳೆಯ ಉದ್ದೇಶಕ್ಕಾಗಿ ಜನರ ಆರೋಗ್ಯಪೂರ್ಣ ಜೀವನಕ್ಕೆ ಪೂರಕವಾಗಿ ಆಯುರ್ವೇದ ಮತ್ತು ಆಶ್ರಯಧಾಮವನ್ನು ಪ್ರಾರಂಭಿಸಿದ್ದು, ಈ ಭಾಗದ ನಾಗರಿಕರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಕರೆಯಿತ್ತರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಟ್ರಸ್ಟ್ ಪ್ರಮುಖ ಟ್ರಸ್ಟಿ ಸಿಎ ಹರಿದಾಸ್ ಭಟ್, ಈ ಸಂಸ್ಥೆ ತಮ್ಮ ಅಜ್ಜ ಗೋವಿಂದ ಭಟ್ ಹಾಗೂ ಅಜ್ಜಿ ಕೃಷ್ಣವೇಣಿಯವರ ಕಲ್ಪನೆಯ ಕೂಸು. ಸಮಾಜಕ್ಕೆ ಏನನ್ನಾದರೂ ಒಳ್ಳೆಯದನ್ನು ಮಾಡಬೇಕೆಂಬ ಉದ್ದೇಶದಿಂದ ಅವರ ಸ್ಮರಣಾರ್ಥ ಅವರ ಮಕ್ಕಳು, ಮೊಮ್ಮಕ್ಕಳು ಸೇರಿ ಈ ಸ್ತುತ್ಯ ಕಾರ್ಯ ಸಾಕಾರಗೊಳಿಸಿದ್ದೇವೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವುದರ ಜೊತೆಗೆ ಈ ಕಾರ್ಯಕ್ಕೆ ಉತ್ತೇಜನ ನೀಡುವಂತೆ ಕೇಳಿಕೊಂಡರು.ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ.ರಮೇಶ್ ಮಿತ್ತಾಂತಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ವೈದ್ಯಾಧಿಕಾರಿ ಡಾ. ಲಕ್ಷ್ಮೀಶ ಉಪಾಧ್ಯ, ಆರೋಗ್ಯಪೂರ್ಣ ಜೀವನಕ್ಕೆ ಆಯುರ್ವೇದದ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟಿ ಸಾಲ್ಮರ ಪದ್ಮನಾಭ ಭಟ್ ವಂದಿಸಿದರು. ವೇದಿಕೆಯಲ್ಲಿ ರೋಟರ್‍ಯಾಕ್ಟ್ ಅಧ್ಯಕ್ಷ ನವೀನ್ ಮೇಸ್ತಾ, ರೋಟರಿ ಸಮುದಾಯದಳದ ಕಾರ್ಯದರ್ಶಿ ವಜ್ರೇಶ್ ಆಚಾರ್ಯ ಉಪಸ್ಥಿತರಿದ್ದರು.ನಂತರ ಸಾಮೂಹಿಕ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

Share this article