ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರಿಗೆ ಕೋಟೆ ನಾಡಿನ ನಾಗರಿಕ ಗೌರವ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾರ್ವಜನಿಕ ಹಿತಕ್ಕಾಗಿ ನಿರಂತರ ಧ್ವನಿ ಎತ್ತಿದ ಅಪರೂಪದ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಎಂದು ಸಚಿವ ಟಿ.ರಘುಮೂರ್ತಿ ಬಣ್ಣಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಚಿಕ್ಕಪ್ಪನಹಳ್ಳಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕೋಟೆನಾಡಿನ ನಾಗರಿಕ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಷಣ್ಮುಖ ಅವರು ತಮ್ಮ ಹಿತಾಸಕ್ತಿ, ಸುಖ-ಸಂತೋಷಗಳ ಕಂಫರ್ಟ್ ಝೋನ್‍ನಿಂದ ಹೊರಬಂದು, ಸಾಮಾಜಿಕ ಸಮಾನತೆಗಾಗಿ ಸದಾ ಧ್ವನಿ ಎತ್ತುವ ಹೋರಾಟ ಮನೋಭಾವದ ಪತ್ರಕರ್ತ ಎಂದರು.
ಸಾಮಾನ್ಯವಾಗಿ ಪತ್ರಕರ್ತರು ಅಥವಾ ಯಾವುದೇ ಕ್ಷೇತ್ರದಲ್ಲಿರುವವರು ತಮ್ಮ ವೃತ್ತಿ, ಕುಟುಂಬ ಮತ್ತು ಭವಿಷ್ಯದ ಸುರಕ್ಷತೆಯ ಬಗ್ಗೆ ಯೋಚಿಸಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಆದರೆ ಷಣ್ಮುಖ ಅವರು ಸಮಾಜದ ಕೆಳಹಂತದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಪ್ರಾಣಭಯ, ಯಾವುದೇ ಅಡೆತಡೆಗಳನ್ನ ಲೆಕ್ಕಿಸುತ್ತಿರಲಿಲ್ಲ.
2008ರಲ್ಲಿ ತಾವು ಚಳ್ಳಕೆರೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸಮಯದಿಂದಲೂ ಷಣ್ಮುಖ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರು ಯಾವತ್ತೂ ಸ್ವಂತ ಲಾಭಕ್ಕಾಗಿ ಮಾತನಾಡಿದವರಲ್ಲ, ಬದಲಾಗಿ ಸಮಾಜದ ಪ್ರಗತಿ ಮತ್ತು ಸಾರ್ವಜನಿಕ ವಿಷಯಗಳ ಕುರಿತಾಗಿಯೇ ಚರ್ಚಿಸುತ್ತಿದ್ದರು ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಹಾಗೂ ವಾಣಿ ವಿಲಾಸ ಸಾಗರದಿಂದ ಚಳ್ಳಕೆರೆ ಕ್ಷೇತ್ರಕ್ಕೆ 0.5 ಟಿಎಂಸಿ ನೀರು ಕಾಯ್ದಿರಿಸುವ ಹೋರಾಟದಲ್ಲಿ ಷಣ್ಮುಖ ಅವರ ಪತ್ರಿಕಾ ಬರಹಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಚಳ್ಳಕೆರೆಗೆ ನೀರು ತಲುಪಲೇಬೇಕು ಎಂದು ಪತ್ರಿಕೆಗಳಲ್ಲಿ ಸರಣಿ ಲೇಖನಗಳನ್ನು ಬರೆಯುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಶಾಸಕನಾಗಿ ನಾನು ಸರ್ಕಾರಿ ಮಟ್ಟದಲ್ಲಿ ಆದೇಶ ತರಲು ಶ್ರಮಿಸಿದಾಗ, ಇವರ ನಿಷ್ಠುರ ಬರಹಗಳು ನಮಗೆ ದೊಡ್ಡ ಬೆಂಬಲವಾಗಿದ್ದವು ಎಂದು ಸಚಿವರು ನೆನಪಿಸಿಕೊಂಡರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನನ್ನ ರಾಜಕೀಯ ಜೀವನದ ಆರಂಭದಿಂದಲೂ ಹೆಜ್ಜೆ ಹೆಜ್ಜೆಗೂ ತಪ್ಪುಗಳನ್ನು ತಿದ್ದಿ, ಸರಿಯಾದ ದಾರಿಯಲ್ಲಿ ಮುನ್ನಡೆಸಿದ ಷಣ್ಮುಖಣ್ಣ ಅವರು ನನ್ನ ಪಾಲಿಗೆ ಮಾರ್ಗದರ್ಶಿ ಗುರು ಇದ್ದಂತೆ ಎಂದು ಹೇಳಿದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ ಮಾತನಾಡಿ, ಷಣ್ಮುಖ ಅವರೊಂದಿಗೆ ನನಗೆ ಸುಮಾರು 50 ವರ್ಷಗಳ ದೀರ್ಘಾವಧಿಯ ಸ್ನೇಹ ಹಾಗೂ ಒಡನಾಟವಿದೆ. 1986 ರಿಂದ ನಾನು ಸಾರ್ವಜನಿಕ ರಂಗದಲ್ಲಿದ್ದಾಗ ಆರಂಭದಲ್ಲಿ ಅವರು ತಮ್ಮ ಬರವಣಿಗೆಗಳ ಮೂಲಕ ನಮಗೆ ‘ವೈರಿ’ಯಂತೆಯೇ ಕಂಡಿದ್ದರು. ಆದರೆ ಆ ವೈರುಧ್ಯದ ಬರವಣಿಗೆಯಲ್ಲಿ ಸದಾ ಸತ್ಯಾಂಶ ಮತ್ತು ಜನಪರ ಕಾಳಜಿಯಿತ್ತು. ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸ ಮಾಡುವಾಗ ಲೋಪಗಳು ಸಹಜ. ನಮ್ಮ ತಪ್ಪುಗಳನ್ನು ತಿದ್ದಿ ಸರಿ ಹಾದಿಗೆ ತರಲು ಅವರ ವರದಿಗಳು ನಮಗೆ ಕಣ್ಣು ತೆರೆಸುವಂತೆ ಮಾಡುತ್ತಿದ್ದವು ಎಂದರು.
ಸಾಮಾನ್ಯವಾಗಿ ಪತ್ರಕರ್ತರು ನಿಯಮಿತವಾಗಿ ಸುದ್ದಿ ಬರೆದು ತಮ್ಮ ಕರ್ತವ್ಯ ಮುಗಿಸುತ್ತಾರೆ. ಆದರೆ ಷಣ್ಮುಖ ಅವರ ಶೈಲಿ ವಿಶಿಷ್ಟವಾದುದು. ಅವರು ಸಮಸ್ಯೆಗಳ ಬಗ್ಗೆ ಪತ್ರಿಕೆಯಲ್ಲಿ ಬರೆದು ಸುಮ್ಮನಾಗುವುದಿಲ್ಲ. ಆ ಸಮಸ್ಯೆಗೆ ಪೂರ್ಣ ಪರಿಹಾರ ಸಿಗುವವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಚಿವರ ಮಟ್ಟದಲ್ಲಿ ನಿರಂತರವಾಗಿ ಬೆನ್ನತ್ತಿ ಹೋರಾಟ ನಡೆಸುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ನಿಲ್ಲುವ ಗುಣ ಅವರಲ್ಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಮಾಧ್ಯಮ ಕ್ಷೇತ್ರಕ್ಕೆ ಸೀಮಿತವಾಗದೆ ಸಾಮಾಜಿಕ ಹೋರಾಟಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಅಭಿವೃದ್ಧಿ ಯೋಜನೆಗಳು ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಪತ್ರಿಕೆ ಮೂಲಕ ನಿರಂತರವಾಗಿ ಬೆಳಕಿಗೆ ತಂದಿದ್ದಾರೆ. ಮೇಲ್ನೋಟಕ್ಕೆ ಷಣ್ಮುಖ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದರೂ, ರಾಜಕೀಯದಲ್ಲಿ ನನ್ನ ಆಡಳಿತಾವಧಿಯಲ್ಲಿ ನಮಗೆ ಅತ್ಯಂತ ಹೆಚ್ಚು ‘ಕಾಟ’ ಕೊಟ್ಟವರು ಹಾಗೂ ಸವಾಲೊಡ್ಡಿದವರು ಅವರೇ. ಆದರೆ, ಆ ವಿರೋಧವು ವೈಯಕ್ತಿಕವಾಗಿರಲಿಲ್ಲ. ಬದಲಾಗಿ ಸಾರ್ವಜನಿಕ ಹಿತಾಸಕ್ತಿಯ ಧ್ವನಿಯಾಗಿತ್ತು ಎಂದರು.
ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುಯ್ಯ ಮಾತನಾಡಿ, ಷಣ್ಮುಖ ನಂತಹವರು ಯಾವುದೇ ಪತ್ರಿಕೆಗೆ ಆಸ್ಥಿ. ಸಂಸ್ಥೆ ಕಟ್ಟುವಲ್ಲಿ ಅವರ ಶ್ರಮ ಅಪಾರ. ವರದಿಗಾರಿಕೆ ಹಾಗೂ ಮಾತಿನಲ್ಲಿ ನಿಷ್ಠುರವಾಗಿ ನಡೆದುಕೊಳ್ಳುವ ಷಣ್ಮುಖ ಹಿಡಿದ ಕೆಲಸವ ಸಾಧಿಸದೆ ಎಂದೂ ಬಿಡುವವನಲ್ಲ. ಆ ಕಾರಣಕ್ಕಾಗಿಯೇ ಕನ್ನಡಪ್ರಭದಂತಹ ಸಂಸ್ಥೆಯಲ್ಲಿ ಸುಧೀರ್ಘ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ದುರ್ಗದ ಪತ್ರಿಕಾ ಮಾಧ್ಯಮದಲ್ಲಿ ಚಿಕ್ಕಪ್ಪನಹಳ್ಳಿಯವರ ಹೆಸರು ಬಹುಮುಖಿ ಕೆಲಸಗಳಿಗೆ ಇರುವ ಹೆಸರಾಗಿದೆ. ಬರೀ ಪತ್ರಿಕೋದ್ಯಮವಲ್ಲದೇ ಹತ್ತು ಹಲವು ಹೋರಾಟಗಳ ಸಂಗಾತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಚಿಕ್ಕಪ್ಪನಹಳ್ಳಿ ಗೆಳೆಯ ಬಳಗದ ವತಿಯಿಂದ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರಿಗೆ ಕೋಟೆನಾಡಿನ ನಾಗರಿಕ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ಧನಂಜಯ, ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಮಂಜುನಾಥ್ ಇದ್ದರು. ಜಡೇಕುಂಟೆ ಮಂಜುನಾಥ್, ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ್ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.