ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ೬೭ನೇ ವರ್ಷದ ವಾರ್ಷಿಕ ಜಾತ್ರೋತ್ಸವ ಜ. ೧೩ರಿಂದ ಕ್ಕೆ ನಡೆಯಲಿದೆ.
ಸೋಮವಾರಪೇಟೆ: ತಾಲೂಕಿನ ಶಾಂತಳ್ಳಿಯ ಚೋಳರ ಕಾಲದ ಐತಿಹ್ಯ ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ೬೭ನೇ ವರ್ಷದ ವಾರ್ಷಿಕ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜ. ೧೩ರಿಂದ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್ ಕುಮಾರ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೩ರಂದು ಸಂಜೆ ೬-೩೦ಕ್ಕೆ ‘ಬೆಳ್ಳಿ ಬಂಗಾರ ದಿನ’ ಆಚರಣೆಯೊಂದಿಗೆ ಜಾತ್ರೆ ಪ್ರಾರಂಭೋತ್ಸವ ಪೂಜೆ ನಡೆಯಲಿದೆ. ತಾ. ೧೪ರಂದು ‘ಮಕರ ಸಂಕ್ರಮಣ ಕರುವಿನ ಹಬ್ಬ’ ಹಾಗೂ ೭ಗಂಟೆಗೆ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾ ದೀಪವನ್ನು ಬೆಳಗಿಸಲಾಗುತ್ತದೆ. ಇದರೊಂದಿಗೆ ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ನೆರವೇರಲಿದೆ.ತಾ. ೧೫ರಂದು ‘ಅರಸು ಬಲ ಸೇವೆ’ ಪೂಜೆ ನಡೆಯಲಿದೆ. ಸಂಜೆ೭.೩೦ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗುತ್ತವೆ. ತಾ. ೧೬ರಂದು ಮಧ್ಯಾಹ್ನ ೧೨.೦೫ಕ್ಕೆ ೬೭ನೇ ಮಹಾ ರಥೋತ್ಸವ ಜರುಗಲಿದೆ. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬೋಸ್‌ರಾಜು, ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವರಾದ ಬಿ.ಎ. ಜೀವಿಜಯ, ಅಪ್ಪಚ್ಚು ರಂಜನ್, ಬಿಜೆಪಿ ಮುಖಂಡ ಹರಪಳ್ಳಿ ರವೀಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು. ೧೭ರಂದು ಮಧ್ಯಾಹ್ನ ೩ಕ್ಕೆ ಜಾತ್ರಾ ಸಮಾರೋಪ ಸಮಾರಂಭ ನಡೆಯಲಿದೆ. ಶಾಂತಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ ವಿಜಯ ಕುಮಾರ್, ಬೆಟ್ಟದಳ್ಳಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಪ್ರಮುಖರಾದ ಕೆ.ಎಸ್. ರಾಮಚಂದ್ರ, ಕೃಷ್ಣ ಕುಮಾರ್, ಜಯೇಂದ್ರ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಸಾಧಕರಾದ ಶಾಂತಳ್ಳಿ ಧರ್ಮದರ್ಶಿ ಕೆ.ಕೆ. ಪೊನ್ನಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಡಿ.ಪಿ. ಜೋಯಪ್ಪ, ನಿವೃತ್ತ ನೀರುಗಂಟಿ ಎಸ್.ಜೆ. ರಾಜು, ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಾದ ಬೆಟ್ಟದಳ್ಳಿ ಗ್ರಾಮದ ಕೆ.ಜಿ. ನಿಧಿ ಹಾಗೂ ಬೆಂಕಳ್ಳಿ ಗ್ರಾಮದ ಸಿ.ಎಸ್. ಆದ್ವಿ ಅವರನ್ನು ಸನ್ಮಾನಿಸಲಾಗುವುದು ಎಂದರು. ಜಾತ್ರೋತ್ಸವದ ಪ್ರಯುಕ್ತ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಥ್ರೋಬಾಲ್, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟಗಳು ನಡೆಯಲಿವೆ.ಜಾತ್ರೋತ್ಸವ ಅಂಗವಾಗಿ ಮೂರು ದಿನಗಳ ಕಾಲ ದೇವಾಲಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಇದರೊಂದಿಗೆ ಫಲಪುಷ್ಪ, ವಸ್ತು ಪ್ರದರ್ಶನ, ವಿಶೇಷ ವಸ್ತುಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಲಯ ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಕೆ.ಟಿ. ಮಧು ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಮುತ್ತಣ್ಣ, ಖಜಾಂಚಿ ಎಸ್.ಆರ್. ಉತ್ತಯ್ಯ ಹಾಗೂ ಜಿ.ಎಸ್. ಮಧು ಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.