- ಸಿದ್ಧರಾಮ ಹೊನ್ಕಲ್ ಅವರ ‘ನಿನ್ನ ಜೊತೆ ಜೊತೆಯಲಿ’ ಗಜಲ್ ಕೃತಿ ಬಿಡುಗಡೆ
ಕನ್ನಡಪ್ರಭ ವಾರ್ತೆ ಶಹಾಪುರ
ಕನ್ನಡ ಸಾಹಿತ್ಯಕ್ಕೆ ಬಹುಮುಖ ಕೊಡುಗೆ ನೀಡಿದ ಶಾಂತರಸರನ್ನು ಹುಡುಕಿಕೊಂಡು ಬಂದ ಗೌರವಗಳು ಹಲವಾರು. ಕನ್ನಡ, ಉರ್ದು, ಪಾರ್ಸಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿದರು.ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಡಾ. ಚೆನ್ನಣ್ಣ ವಾಲಿಕಾರ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ನಡೆದ ನಾಡಿನ ಹಿರಿಯ ಗಜಲ್ ಗಾರುಡಿಗ ಲೇಖಕ, ದಿ. ಶಾಂತರಸರ ಜನ್ಮ ಶತಮಾನೋತ್ಸವ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಮತ್ತು ಗಜಲ್ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಯಚೂರಿನ ಖ್ಯಾತ ಕಥೆಗಾರರಾದ ಮಹಾಂತೇಶ್ ನವಲಕಲ್ ಮಾತನಾಡಿ, ಗಜಲ್ ಸಾಹಿತ್ಯ ಪುರಾತನದಾಗಿದ್ದು, ಅರೇಬಿಕ್ ಕಾವ್ಯಗಳಿಂದ ಹುಟ್ಟಿಕೊಂಡಿದೆ. ಶಾಂತರಸರ ಗಜಲ್ ನಲ್ಲಿ ಯಥೇಚ್ಛವಾಗಿ, ಆಧ್ಯಾತ್ಮಿಕ, ಪ್ರೀತಿ ಪ್ರೇಮ, ಪ್ರಣಯ, ಹಾಸ್ಯ, ವಿಡಂಬನೆಯ ಜೊತೆಗೆ ಕಾವ್ಯಾತ್ಮಕ ಅಭಿವ್ಯಕ್ತಿಯಾಗಿ ಅದರೊಳಗೆ ಕಾಣಬಹುದು ಎಂದು ನುಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ಸಾಹಿತಿ ಸಿದ್ದರಾಮ ಹೊನಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಪ್ರಭು ಹೆಂಬಿರಾಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಯ್ಯಣ್ಣ ಇನಾಮದಾರ್, ಶಿವಲೀಲಾ, ಎಂ. ಎಸ್. ಸಜ್ಜನ್ ಹನ್ನಮ್ಮ, ಶಿವಶರಣಪ್ಪ ಭಂಡಾರಿ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ಲೇಖಕ ಸಿದ್ಧರಾಮ ಹೊನ್ಕಲ್ ಅವರ ‘ನಿನ್ನ ಜೊತೆ ಜೊತೆಯಲಿ’ ಗಜಲ್ ಕೃತಿ ಬಿಡುಗಡೆ ಮಾಡಲಾಯಿತು.