ಹಾವೇರಿ: ಜಾತಿ, ಮತ, ಮೌಢ್ಯಗಳನ್ನು ತೊರೆದು ಕಾಯಕನಿಷ್ಠೆಯಿಂದ ದುಡಿದು ಅನುಭಾವದಿಂದ ನಿಜದ ಬದುಕು ಅರಿಯಬೇಕೆನ್ನುವ ಮಾನವತಾವಾದವನ್ನು ಹೇಳಿದವರು ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಎಂದು ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳದ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿ ಮಠದ ಶಾಂತವೀರ ಪಟ್ಟಾಧ್ಯಕ್ಷರ 44ನೇ ಸ್ಮರಣೋತ್ಸವದ ನಾಲ್ಕನೇ ದಿನದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು. ವ್ಯಕ್ತಿ ಉತ್ತಮ ಆಗಲು ಧರ್ಮ ಅಗತ್ಯ. ಶರಣರು ವಿವೇಕದ ಅಮೃತ ಸಿಂಚನದ ಮೂಲಕ ಐಕ್ಯತೆಯ ಸಮಾಜ ನಿರ್ಮಿಸಿದರು. ಐಕ್ಯತೆ ಎಂದರೆ ನಾನೊಬ್ಬನೇ ಬದುಕಬೇಕು ಎಂಬುದಲ್ಲ. ನನ್ನ ಜತೆಯಲ್ಲಿರುವವರಿಗೂ ಲೇಸು ಬಯಸುವುದು, ಹಸಿದವರು ಬದುಕಬೇಕು. ಬದುಕಿಲ್ಲದವರು ಮೊದಲು ಬದುಕಬೇಕು ಎನ್ನುವುದು ಐಕ್ಯತೆ. ನಾನು, ನನ್ನದು, ನನ್ನ ದೇವರು, ನನ್ನದೇ ಶ್ರೇಷ್ಠ ಎಂದರೆ ಐಕ್ಯತೆ ಉಳಿಯುವುದಿಲ್ಲ ಎಂದರು.ತಾರಿಹಾಳ ಅಡವಿ ಸಿದ್ದೇಶ್ವರ ಮಠದ ಅಡವೀಶ್ವರ ದೇವರು ಮಹಾತ್ಮರ ಜೀವನ ದರ್ಶನ ಕುರಿತು ಪ್ರವಚನ ಮಾಡಿದರು.
ಆನಂತರ ರೋಣ ತಾಲೂಕಿನ ನರೇಗಲ್ಲಿನ ನಿವೃತ್ತ ಶಿಕ್ಷಕ ಅರುಣ್ ಕುಲಕರ್ಣಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು, ಶಿವಯೋಗಿ ಹಿರೇಮಠ, ಶಿವಣ್ಣ ಶಿರೂರ, ಚಂಬಣ್ಣ ಯರೇಶಿಮಿ, ಶಂಕರ ಇಟಗಿ, ಮಡಿವಾಳಪ್ಪ ಸಾತೇನಹಳ್ಳಿ, ವಿ.ಎಚ್.ಕೆ. ಹಿರೇಮಠ, ಶಿವಬಸಯ್ಯ ಆರಾಧ್ಯಮಠ ಉಪಸ್ಥಿತರಿದ್ದರು. ವಾಗೀಶ್ ಶಾಸ್ತ್ರೀಗಳು ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.ಇದಕ್ಕೂ ಮುನ್ನ ಹಾವೇರಿಯ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ಹತ್ತಕ್ಕೂ ಹೆಚ್ಚು ನುರಿತ ಹಿರಿಯ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಸಿಂದಗಿ ಮಠದ ಆವರಣದಲ್ಲಿ ಜರುಗಿತು.
ಮಹಾವಿದ್ಯಾಲಯದ ಆಡಳಿತಾಧಿಕಾರಿ ವಿ.ಎಚ್.ಕೆ. ಹಿರೇಮಠ, ಪ್ರಾಚಾರ್ಯ ಡಾ. ಸಿ.ಎನ್. ಗೌಡರ ತಂಡದಿಂದ ಉಚಿತ ಬೃಹತ್ ಆರೋಗ್ಯ ಶಿಬಿರದಲ್ಲಿ 245ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಜರುಗಿತು. ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಥೈರಾಯ್ಡ್ ಪರೀಕ್ಷೆ ಎಚ್‍ಬಿಎ1ಸಿ (ಸಕ್ಕರೆ ಕಾಯಿಲೆ ಪರೀಕ್ಷೆ), ಅಲ್ಟ್ರಾಸೋನೋಗ್ರಫಿ ಪರೀಕ್ಷೆ ಮಾಡಿಸಿಕೊಂಡರು. ಪ್ರಸೂತಿ ಹಾಗೂ ಸ್ತ್ರೀರೋಗ, ಡಯಾಬಿಟಿಸ್ ಮತ್ತು ಹೃದಯರೋಗ, ಎಲುಬು ಮತ್ತು ಕೀಲು, ಶಸ್ತ್ರಚಿಕಿತ್ಸಾ ಹಾಗೂ ನೇತ್ರ ಚಿಕಿತ್ಸಾ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ಸೇವೆ ನೀಡಿದರು. ಸುಮಾರು ₹25 ಸಾವಿರಕ್ಕೂ ಹೆಚ್ಚು ಮೊತ್ತದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.ಹಾವೇರಿಯ ಸೃಜನ ಆಪ್ಟಿಕಲ್ ಸಹಯೋಗದಲ್ಲಿ ಹುಬ್ಬಳ್ಳಿಯ ಜಯಪ್ರಿಯ ಕಣ್ಣಿನ ಆಸ್ಪತ್ರೆಯವರು ನಡೆಸಿದ ಉಚಿತ ಕಣ್ಣಿನ ತಪಾಸಣೆಯಲ್ಲಿ 85ಕ್ಕೂ ಹೆಚ್ಚು ರೋಗಿಗಳು ಇದರ ಸದುಪಯೋಗ ಪಡೆದುಕೊಂಡರು.