ಚನ್ನಪಟ್ಟಣ: ಶಾಂತವೇರಿ ಗೋಪಾಲಗೌಡರು ಪ್ರಬುದ್ಧ ರಾಜಕಾರಣದ ಪ್ರತೀಕವಾಗಿದ್ದವರು. ಓಟನ್ನು ನೀವೇ ಕೊಡಿ, ನೋಟನ್ನು ನೀವೇ ಕೊಡಿ, ನಿಮ್ಮ ಸೇವೆಗೆ ಅವಕಾಶ ನೀಡಿ ಎಂದು ಜನತೆಯ ಬಳಿ ವಿನಯದಿಂದ ಕೇಳಿಕೊಂಡಂತಹ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಸಂಸ್ಕೃತಿ ಚಿಂತಕ ಹಾಗೂ ವಿಚಾರವಾದಿ ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ಅವರ ವ್ಯಕ್ತಿತ್ವ ಮತ್ತು ಚಿಂತನೆಗಳಿಂದ ರಾಷ್ಟ್ರಕವಿ ಕುವೆಂಪು, ಡಾ. ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಸೇರಿದಂತೆ ಆ ಕಾಲದ ಅನೇಕ ಸಾಹಿತಿಗಳು ಪ್ರಭಾವಿತರಾಗಿದ್ದು, ಅವರೊಡನೆ ಆತ್ಮೀಯ ಒಡನಾಟ ಹೊಂದಿದ್ದರು ಎಂದು ತಿಳಿಸಿದರು.
ಶಾಂತವೇರಿ ಗೋಪಾಲಗೌಡರಂತೆಯೇ ರಾಜಕೀಯದಲ್ಲಿದ್ದು ಶುದ್ಧ ಹಸ್ತರಾಗಿದ್ದವರಲ್ಲಿ ಸಿಂ.ಲಿಂ. ನಾಗರಾಜು ಕೂಡ ಪ್ರಮುಖರು. ಮತದಾರರಿಗೆ ಯಾವುದೇ ಆಸೆ ಆಮಿಷಗಳನ್ನು ಒಡ್ಡದೆ ಜನಸೇವೆಗೆ ಬದ್ಧರಾಗಿದ್ದ ಅವರು ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಎಂ. ಬೈರೇಗೌಡ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಮೌಲ್ಯಯುತ ಹಾಗೂ ಪ್ರಬುದ್ಧ ರಾಜಕಾರಣಕ್ಕೆ ಹೆಸರಾಗಿದ್ದವರು . ಅಂತೆಯೇ ಕನ್ನಡ ಸೇವೆಯಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ ಸಿಂ ಲಿಂ ನಾಗರಾಜು ಅವರು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಮಟ್ಟದಲ್ಲಿಯೂ ಹೆಸರು ಮಾಡಿದ ವ್ಯಕ್ತಿ.
ಜಿಲ್ಲೆಯ ಸಾಹಿತಿ ಮೇದರದೊಡ್ಡಿ ಹನುಮಂತ ರಚಿಸಿರುವ ನೆಲದಲ್ಲಿಯೂ ನಕ್ಷತ್ರಗಳಿವೆ ಎಂಬ ಕವನ ಸಂಕಲನದ ಶೀರ್ಷಿಕೆಯೇ ವಿಶೇಷತೆಯನ್ನು ಹೊಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಚಿಂತಕ ರೂಪೇಶ್ ಪುತ್ತೂರು, ನೆಲದಲ್ಲಿಯೂ ನಕ್ಷತ್ರಗಳಿವೆ ಕವನ ಸಂಕಲನದ ಬಗ್ಗೆ ಮಾತನಾಡಿ, ಗ್ರಾಮೀಣ ಬದುಕಿನ ಸ್ಪಂದನೆ, ಬದುಕಿನ ಹೋರಾಟ ಮತ್ತು ಮಾನವೀಯ ಮೌಲ್ಯಗಳನ್ನು ಸ್ಪರ್ಶಿಸುವ ಕವನಗಳು ಓದುಗರ ಮನಸ್ಸಿಗೆ ಹತ್ತಿರವಾಗುತ್ತವೆ ಎಂದು ಹೇಳಿದರು.
ಪೊಟೋ೧೫ಸಿಪಿಟಿ೩: ಚನ್ನಪಟ್ಟಣ ತಾಲೂಕಿನ ಸಿಂಗರಾಜಪುರದ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವಕವಿ ಮೇದರದೊಡ್ಡಿ ಹನುಮಂತ ರಚಿಸಿರುವ "ನೆಲದಲ್ಲಿಯೂ ನಕ್ಷತ್ರಗಳಿವೆ " ಕವನ ಸಂಕಲನ ಬಿಡುಗಡೆ ಮಾಡಲಾಯಿತು.