ಸಾಗರ: ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ನವರಾತ್ರಿ ಅಂಗವಾಗಿ ಭಾನುವಾರ ಶಾರದಾ ಪ್ರಸಾದಮ್ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು. ವಿದ್ವಾನ್ ಜಿ.ಎಸ್. ಗಣಪತಿ ಭಟ್ ಮತ್ತು ಉದ್ಯಮಿ ಟಿ.ವಿ.ಪಾಂಡುರಂಗ ಅವರಿಗೆ ಶಾರದಾ ಪ್ರಸಾದಮ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, 2024ರಲ್ಲಿ ಶಂಕರ ಮಠದ ರಜತ ಮಹೋತ್ಸವ ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಎಲ್ಲರ ಸಹಕಾರ ಮುಖ್ಯ ಎಂದರು. ರಜತ ಮಹೋತ್ಸವದ ನೆನಪಿಗಾಗಿ ಶ್ರೀಮಠಕ್ಕೆ ಸಂಪರ್ಕ ಕಲ್ಪಿಸುವ ಗಾಂಧಿನಗರ ವೃತ್ತ ಮತ್ತು ಗಣಪತಿ ಕೆರೆ ಭಾಗದಲ್ಲಿ ಬೃಹತ್ ದ್ವಾರ ನಿರ್ಮಿಸುವುದು, ಮಠದ ಪಕ್ಕದಲ್ಲಿ ವಿಶಾಲವಾದ ಬಯಲು ರಂಗಮಂದಿರ ನಿರ್ಮಾಣ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ₹2 ಕೋಟಿ ಅಂದಾಜು ವೆಚ್ಚ ನಿರೀಕ್ಷೆ ಮಾಡಲಾಗಿದೆ. ರಜತ ಮಹೋತ್ಸವ ವರ್ಷದಲ್ಲಿ ಶ್ರೀ ಮಠದಲ್ಲಿ ನಿರಂತರವಾಗಿ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಪ್ರತಿವರ್ಷ ನವರಾತ್ರಿ ಸಂದರ್ಭ ಸಾಧಕರನ್ನು ಗುರುತಿಸಿ, ಶ್ರೀ ಮಠದ ವತಿಯಿಂದ ಶಾರದಾ ಪ್ರಸಾದಮ್ ಪುರಸ್ಕಾರ ನೀಡಿ ಗೌರವಿಸುವ ಪರಂಪರೆ ದಶಕಗಳಿಂದ ನಡೆಯುತ್ತಿದೆ. ಈ ವರ್ಷ ಸಂಸ್ಕೃತ ವಿದ್ವಾಂಸ ಜಿ.ಎಸ್.ಗಣಪತಿ ಭಟ್ ಮತ್ತು ಉದ್ಯಮಿ ಹಾಗೂ ದಾನಿ ಟಿ.ವಿ.ಪಾಂಡುರಂಗ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಗಣಪತಿ ಭಟ್ ಮಧ್ಯಪ್ರದೇಶದಲ್ಲಿ ನಡೆದ 108 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರೆ, ಪಾಂಡುರಂಗ ಅವರು ವಿದ್ಯಾಪೋಷಕ್ ಸೇರಿದಂತೆ ಅನೇಕ ಸಂಘಟನೆಗಳಿಗೆ ಆರ್ಥಿಕ ನೆರವು ಕಲ್ಪಿಸುವ ಜೊತೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು. ಮ.ಸ.ನಂಜುಂಡಸ್ವಾಮಿ ಉಪಸ್ಥಿತರಿದ್ದರು. ಪ್ರೊ. ಕೆ.ಆರ್. ಕೃಷ್ಣಯ್ಯ ಸ್ವಾಗತಿಸಿದರು. ಸುನಿತಾ ನಿರೂಪಿಸಿದರು. ಪ್ರಭಾವತಿ ಎಸ್.ಕೆ. ವಂದಿಸಿದರು. - - - -22ಕೆಎಸ್ಎಜಿ1: ಸಾಗರ ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ನವರಾತ್ರಿ ಅಂಗವಾಗಿ ಭಾನುವಾರ ಶಾರದಾ ಪ್ರಸಾದಮ್ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು.