ಪಾಂಡೇಶ್ವರದಲ್ಲಿ ೩೨ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಸಂಪನ್ನ
ಕನ್ನಡಪ್ರಭ ವಾರ್ತೆ ಕೋಟದುಷ್ಟ ಶಕ್ತಿ ಸಂಹಾರಕ್ಕಾಗಿ ನವದರ್ಗೆಯರು ಅವತರಿಸಿದನ್ನು ಆಚರಿಸುವ ಶರನ್ನವರಾತ್ರಿ ಉತ್ಸವ ಇಂದು ವ್ಯಾಪಕವಾಗಿ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಗ್ರಾಮ ಗ್ರಾಮಗಳಲ್ಲಿ ಶಾರದೋತ್ಸವ ರೂಪವನ್ನು ಪಡೆದು ಜನರ ಒಗ್ಗಟ್ಟಿಗೆ ಕಾರಣವಾಗುತ್ತಿದೆ ಎಂದು ಕೋಟದ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು.ಪಾಂಡೇಶ್ವರ ಶಾಲಾ ವಠಾರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಶಾರದೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಒಳಿತಿಗೆ ಧಾರ್ಮಿಕ ಆಚರಣೆಗಳ ಅಗತ್ಯವಿದೆ. ಈ ರೀತಿಯ ಒಗ್ಗಟ್ಟಿನ ಆಚರಣೆಗಳ ಮೂಲಕ ನಮ್ಮ ಸಂಪ್ರದಾಯ ಸಂಸ್ಕೃತಿಗಳ ಅನಾವರಣವಾಗುತ್ತದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ವಹಿಸಿದ್ದರು.ಈ ವೇಳೆ ಶಾರದೋತ್ಸವ ಸಮಿತಿಯ ಹಿರಿಯ ಸದಸ್ಯ ಪಿ.ವಿ. ಸೀತಾರಾಮ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಕೃಷಿ ಕುಟುಂಬದ ಅನ್ವಿತಾ ಪಾಂಡೇಶ್ವರ ಅವರನ್ನು ಅಭಿನಂದಿಸಲಾಯಿತು. ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ನೆರವು, ಶಾರದೋತ್ಸವ ಕ್ರೀಡಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.