ಕ್ರೀಡೆ, ಸೇನೆ, ಕಾಫಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದಿರುವ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡುವಂತೆ ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಮನವಿ ಮಾಡಿದ್ದಾರೆ.
ಮಡಿಕೇರಿ : ಕ್ರೀಡೆ, ಸೇನೆ, ಕಾಫಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದಿರುವ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡುವಂತೆ ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತಾವಿತ ಮರುವಿಂಗಡಣೆ ಪ್ರಕ್ರಿಯೆಯಡಿ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ದೊರಕಬೇಕು. ಕೊಡಗು ವಿಶೇಷ ಜಿಲ್ಲೆ. ಇಲ್ಲಿನ ಸಂಸ್ಕೃತಿ, ಭೌಗೋಳಿಕ ಪರಿಸರ, ಆದ್ದರಿಂದ ಇಲ್ಲಿನ ಸಮಸ್ಯೆಗಳು ಕೂಡ ಸಾಕಷ್ಟಿದೆ. ನಮ್ಮ ಜಿಲ್ಲೆಗೆ ಪ್ರತ್ಯೇಕ ಸಂಸತ್ ಸ್ಥಾನ ದೊರೆಯುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ದೊರಕವುದು ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ ಕೊಡಗಿನ ಸಂಸದರು ಎಂದರೆ ಅದಕ್ಕೆ ವಿಶೇಷ ಗೌರವ ಸಿಗಲಿದೆ. ಇದಲ್ಲದೆ ಸಂಸತ್ ಸದಸ್ಯರಿಗೆ ಹೆಚ್ಚಿನ ಅನುದಾನ ದೊರಕುವುದರಿಂದ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಕೂಡ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಭಿವೃದ್ಧಿಯಾಗಲಿದೆ. ಸಂಸತ್ ಸದಸ್ಯರನ್ನು ಸಂಪರ್ಕಿಸಲು ಸ್ಥಳೀಯರಿಗೆ ತುಂಬಾ ಅನುಕೂಲವಾಗಲಿದೆ ಎಂದು ಶರಣ್ ಪೂಣಚ್ಚ ಹೇಳಿದ್ದಾರೆ. ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಪರಿಹಾರ ಕಾಣದ ಮಾನವ-ಆನೆ ಸಂಘರ್ಷ ಪರಿಹರಿಸಲು ಕೇಂದ್ರ ಸರ್ಕಾರದ ಪಾತ್ರ ಕೂಡಾ ಮಹತ್ವದ್ದಾಗಿದೆ. ಜಿಲ್ಲೆಯ ಸಂಸತ್ ಸದಸ್ಯರು ಸಂಸತ್ ನಲ್ಲಿ ಈ ಬಗ್ಗೆ ಪ್ರತ್ಯೇಕವಾಗಿ ಬೇಡಿಕೆ ಇಟ್ಟರೆ ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರ ಸಮಸ್ಯೆ ಸಾಕಷ್ಟಿದೆ. ಬೆಲೆ ಇಳಿಮುಖ, ಹವಾಮಾನ ವೈಪರೀತ್ಯದ ಸಮಸ್ಯೆ, ಕಾಡಾನೆ ಹಾವಳಿ ಸೇರಿದಂತೆ ಬೆಳೆಗಾರರ ವಿವಿಧ ಸಮಸ್ಯೆಯನ್ನು ಪರಿಹರಿಸಲು ಕೇಂದ್ರಕ್ಕೆ ಸಂಸತ್ ಸದಸ್ಯರೊಂದಿಗೆ ನಿಯೋಗ ತೆರಳಲು ಕೂಡ ಅನುಕೂಲವಾಗಲಿದೆ. ಇದಲ್ಲದೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಲವು ಯೋಜನೆಗಳು ಜಿಲ್ಲೆಯ ಜನರಿಗೆ ತಲುಪಿಸುವಂತಾಗಲು ಜಿಲ್ಲೆಗೆ ಒಂದು ಪ್ರತ್ಯೇಕ ಸಂಸತ್ ಸ್ಥಾನ ನೀಡುವುದು ಅನಿವಾರ್ಯ ಎಂದು ಶರಣ್ ಪೂಣಚ್ಚ ಹೇಳಿದ್ದಾರೆ.
ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಹೆಚ್ಚು ಒಲಂಪಿಯನ್ ಗಳನ್ನು ನೀಡುವ ಮೂಲಕ ವಿಶೇಷ ಕೊಡುಗೆ ನೀಡಿದೆ. ನಮ್ಮ ಜಿಲ್ಲೆಗೆ ಪ್ರತ್ಯೇಕ ಸಂಸತ್ ಸದಸ್ಯರು ಇದ್ದರೆ ಕೇಂದ್ರ ಸರ್ಕಾರದಿಂದ ಕ್ರೀಡಾ ಕ್ಷೇತ್ರಕ್ಕೂ ಅನುದಾನ ದೊರಕುವಂತೆ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.