ಶರಣ್ ಪಂಪ್‌ವೆಲ್‌ಗೆ ಜಿಲ್ಲೆಗೆ 10 ದಿನ ನಿರ್ಬಂಧ

KannadaprabhaNewsNetwork |  
Published : Aug 20, 2026, 03:30 AM IST
ಪೋಟೋ: 19ಎಸ್‌ಎಂಜಿಕೆಪಿ07ಶಿಕಾರಿಪುರದಲ್ಲಿ ಗೋ ಕಳ್ಳತನದ ವಿರುದ್ಧ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಇಂದು ಕರೆ ನೀಡಿದ್ದ ಶಿಕಾರಿಪುರ ಬಂದ್‌ ವೇಳೆ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ಆಗಮಿಸುತ್ತಿದ್ದ ಹಿಂದೂ ಮುಖಂಡ ಶರಣ್ ಪಂಪ್ ವೆಲ್‌ ಅವರು ವಾಪಸ್‌ ಹೋಗುತ್ತಿರುವುದು.  | Kannada Prabha

ಸಾರಾಂಶ

ಬಜರಂಗದಳ ಮುಖಂಡರಾದ ಶರಣ್ ಪಂಪ್ ವೆಲ್ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ, ಶಿವಮೊಗ್ಗ ಜಿಲ್ಲಾಡಳಿತ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಜರಂಗದಳ ಮುಖಂಡರಾದ ಶರಣ್ ಪಂಪ್ ವೆಲ್ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ, ಶಿವಮೊಗ್ಗ ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲೆಯಲ್ಲಿ ಶಾಂತಿ- ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಶರಣ್ ಪಂಪ್ ವೆಲ್ ಅವರಿಗೆ ಆ.19ರಿಂದ 10 ದಿನಗಳ ಕಾಲ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.

ಭಾಷಣ ಮಾಡುವ ಮುನ್ನವೇ ನೋಟಿಸ್ ನೀಡಿ, ಕರೆದೊಯ್ದ ಪೊಲೀಸರು: ಇನ್ನು ಗೋ ಕಳ್ಳತನದ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಇಂದು ಕರೆ ನೀಡಿದ್ದ ಶಿಕಾರಿಪುರ ಬಂದ್‌ ವೇಳೆ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ಆಗಮಿಸುತ್ತಿದ್ದ ಮುಖ್ಯ ಭಾಷಣಕಾರ ಹಿಂದೂ ಮುಖಂಡ ಶರಣ್ ಪಂಪ್ ವೆಲ್‌ ರನ್ನು ತಡೆದ ಪೊಲೀಸರು ಇಂದೇ ನೋಟಿಸ್ ನೀಡಿದ್ದಾರೆ.

ಶಿಕಾರಿಪುರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭಾಷಣಕ್ಕೆ ಅವಕಾಶ ನೀಡದೇ, ಪೊಲೀಸರು ನಿರ್ಬಂಧಿಸಿದ್ದಾರೆ.

ಕಾರ್ಯಕ್ರಮಕ್ಕಾಗಿ ಆಗಮಿಸಿ, ಶಿಕಾರಿಪುರ ಪಟ್ಟಣದ ಆರ್‌ಎಸ್‌ಎಸ್‌ ಪಾಂಚಜನ್ಯ ಸಂಘದ ಕಚೇರಿಯಲ್ಲಿದ್ದ ವೇಳೆಯೇ ಶರಣ್ ಪಂಪ್ ವೆಲ್‌ಗೆ ಪೊಲೀಸರು ನಿರ್ಬಂಧದ ನೋಟಿಸ್ ನೀಡಿದರು. ಅಲ್ಲಿಂದ ಪ್ರತಿಭಟನಾ ಸ್ಥಳಕ್ಕೆ ತೆರಳಲು ಅವಕಾಶ ನೀಡದೇ, ಭದ್ರತೆಯಲ್ಲಿಯೇ ಕರೆದೊಯ್ದ ಪೊಲೀಸರು, ಜಿಲ್ಲೆಯ ಗಡಿವರೆಗೆ ಬಿಟ್ಟು ವಾಪಸ್ ಕಳುಹಿಸಿದ್ದಾರೆ.

-----

ನೋಟಿಸ್‌ ಒಂದು ದಿನ ಮುನ್ನವೇ ಕೊಡಬೇಕಿತ್ತು: ಪಂಪ್‌ವೆಲ್‌

ಶಿಕಾರಿಪುರದ ಬಳಿ ಗೋ ರಕ್ಷಕರ ಮೇಲೆ ತಲ್ವಾರ್‌ನಿಂದ ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ. ಇದನ್ನು ಖಂಡಿಸಿ ಶಿಕಾರಿಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಬೇಕಿತ್ತು. ಆದರೆ, ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಬರದಂತೆ ನನಗೆ ನೋಟಿಸ್ ನೀಡಿದ್ದಾರೆ. ಇದನ್ನು ಒಂದು ದಿನ ಮುನ್ನವೇ ಕೊಡಬೇಕಿತ್ತು. ಇವರು ಪ್ರತಿಭಟನೆಗೆ ಭಾಗಿಯಾಗಲು ಐದು ನಿಮಿಷ ಇರುವಾಗ ಕೊಟ್ಟಿದ್ದಾರೆ ಎಂದು ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ದೂರಿದರು.

ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ನನಗೆ ನೋಟಿಸ್ ನೀಡಿರೋದನ್ನು ಖಂಡಿಸುತ್ತೇನೆ. ರಾಜ್ಯ ಸರ್ಕಾರ ಮತ್ತೊಮ್ಮೆ ಹಿಂದೂ ವಿರೋಧಿ ನೀತಿಯನ್ನು ತೋರಿಸಿದೆ. ನಾವ್ಯಾರು ಭಯೋತ್ಪಾದಕರಲ್ಲ, ಗೋವಿನ ರಕ್ಷಣೆ ಮಾಡುವವರು. ನಾವು ರಾಷ್ಟ್ರದ ಜಾಗೃತಿಗಾಗಿ ಕೆಲಸ ಮಾಡುವವರು. ಬಜರಂಗದಳದ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ, ಇದನ್ನು ಖಂಡಿಸುವುದು ನನ್ನ ಹಕ್ಕು. ಪ್ರತಿಭಟನೆ ಮೂಲಕ ಖಂಡಿಸಲು ಬಂದ್ರೆ ನನಗೆ ತಡೆಯುವ ಕೆಲಸ ಆಗಿದೆ. ಜಿಲ್ಲಾಡಳಿತ ನೀಡಿರುವ ನೋಟಿಸ್ ವಿರುದ್ದ ನಾನು ಕೋರ್ಟ್‌ಗೆ ಹೋಗುತ್ತೇನೆ. ಮತ್ತೆ ಶಿಕಾರಿಪುರಕ್ಕೆ ಬಂದು ಭಾಷಣ ಮಾಡುತ್ತೇನೆ ಎಂದು ಹರಿಹಾಯ್ದರು.

ಗೋ ಮಾಫಿಯಾದ ಸಾಮ್ರಾಜ್ಯವನ್ನು ಮಲೆನಾಡು ಭಾಗದಲ್ಲಿ ವಿಸ್ತಾರ ಮಾಡಲು ಯತ್ನಿಸುತ್ತಿದ್ದಾರೆ. ಮಲೆನಾಡಿನ ಜನ ಜಿಹಾದಿಗಳಿಂದ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಗೃಹ ಸಚಿವರು ಆರ್‌ಎಸ್‌ಎಸ್‌ ಬಗ್ಗೆ ಮಾತಾಡೋದು ಬಿಟ್ಟು. ಗೋ ಹತ್ಯೆ ಮಾಡುವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲ್ಲೆಗೆ ಖಂಡನೆ: ಶಿಕಾರಿಪುರ ಬಂದ್ ಬಾಗಶಃ
ಫ್ಲೆಕ್ಸ್, ಬ್ಯಾನರ್ ಮುದ್ರಿಸಿಕೊಡುವಾಗ ಎಚ್ಚರವಹಿಸಿ: ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್