ವಿಶ್ವ ಸಾಹಿತ್ಯದಲ್ಲಿ ಶರಣರ ಸಾಹಿತ್ಯಕ್ಕೆ ಉನ್ನತ ಸ್ಥಾನ

KannadaprabhaNewsNetwork |  
Published : Nov 21, 2025, 01:15 AM IST
ಆನಂದಪುರ ಸಮೀಪದ ಮುರುಘ ಮಠದಲ್ಲಿ ನಡೆದ ಶರಣು ಸಾಹಿತ್ಯ ಸಮ್ಮೇಳನವನ್ನು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಆರ್‌.ಸಿ.ಶಶಿಧರ್ ಉದ್ಘಾಟಿಸಿದರು. | Kannada Prabha

ಸಾರಾಂಶ

21ನೇ ಶತಮಾನದಲ್ಲಾಗದಂತಹ ಸಾಧನೆ 12ನೇ ಶತಮಾನದಲ್ಲಿ ಬಸವಣ್ಣನವರು ಸಾಧಿಸಿದ್ದಾರೆ ಎಂದು ಅವರಾದಿ ಫಲಹಾರೇಶ್ವರ ಸಂಸ್ಥಾನ ಮಠದ ಶಿವಮೂರ್ತಿ ಸ್ವಾಮೀಜಿ ತಿಳಿಸಿದರು.

ಆನಂದಪುರ: 21ನೇ ಶತಮಾನದಲ್ಲಾಗದಂತಹ ಸಾಧನೆ 12ನೇ ಶತಮಾನದಲ್ಲಿ ಬಸವಣ್ಣನವರು ಸಾಧಿಸಿದ್ದಾರೆ ಎಂದು ಅವರಾದಿ ಫಲಹಾರೇಶ್ವರ ಸಂಸ್ಥಾನ ಮಠದ ಶಿವಮೂರ್ತಿ ಸ್ವಾಮೀಜಿ ತಿಳಿಸಿದರು.

ಸಮೀಪದ ಮುರುಘಾಮಠದಲ್ಲಿ ಗುರುವಾರ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ. 12ನೇ ಶತಮಾನದಲ್ಲಿ ಜನರಲ್ಲಿದ್ದ ಅಜ್ಞಾನ ಅಂಧಕಾರ, ಮೂಢನಂಬಿಕೆಗಳನ್ನು ತೊಡೆದು ಹಾಕಿ ಎಲ್ಲರೂ ಸಮಾನರು ಎಂಬ ಸಮಾನತೆಯನ್ನು ಸಾರಿದ ಬಸವಣ್ಣ 21ನೇ ಶತಮಾನದಲ್ಲಿ ಮಾಡದೇ ಇರುವಂತಹ ಸಾಧನೆಯನ್ನು 12ನೇ ಶತಮಾನದಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದರು.

ವಚನಗಳು ಸರಳವಾಗಿ ಆಡು ಭಾಷೆಯಲ್ಲಿ ರಚಿತವಾಗಿವೆ. ಕನ್ನಡ ಸಾಹಿತ್ಯ ಭಾಷೆ ಹಿರಿಮೆ ಗಿರಿಮೆಗಳು ಕನ್ನಡಕ್ಕೆ ನೀಡಿರುವ ಹಿರಿಮೆ ಶರಣರ ವಚನ ಸಾಹಿತ್ಯದ ಕೊಡುಗೆಯಾಗಿದೆ. ಅನುಭವಿಗಳ ಸಾಹಿತ್ಯ ಜನರಿಂದ ಜನರಿಗಾಗಿ ಜನರ ಮಟ್ಟದಲ್ಲಿ ಬೆಳೆದು ಬದುಕುವ ಜೀವಂತ ಸಾಹಿತ್ಯ ವಚನ ಸಾಹಿತ್ಯವಾಗಿದೆ. ಶಿವ ಶರಣರ ವಚನ ಸಾಹಿತ್ಯ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಅಡಕವಾಗಿದೆ. ನಾವು ಮಾತನಾಡುವಂತಹ ಮಾತುಗಳೂ ವಚನ ಸಾಹಿತ್ಯದಡಿಯಲ್ಲಿವೆ. ಶರಣರ ವಚನ ಸಾಹಿತ್ಯ ಅನ್ಯ ಭಾಷೆ ಸಾಹಿತ್ಯಗಳಲ್ಲಿ, ವಿಶ್ವ ಸಾಹಿತ್ಯದ ಉನ್ನತ ಸ್ಥಾನ ಹೊಂದಿದೆ ಎಂದು ತಿಳಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಆರ್.ಸಿ.ಶಶಿಧರ್, ಕೆಳದಿ ಅರಸರ ಗುರು ಪೀಠವಾದ ಮುರುಘಮಠ ಶರಣರ ಸಾಹಿತ್ಯವನ್ನು ತುಂಬಿಸುವಂತಹ ಮಠವಾಗಿದ್ದು, ಪ್ರತಿ ತಿಂಗಳು ನಡೆಯುವ ಗೋಷ್ಠಿಯಲ್ಲಿ ಜನಸಾಮಾನ್ಯರಿಗೆ ವಿವಿಧ ವಿಷಯಗಳ ಬಗ್ಗೆ ಪ್ರವಚನ ಮಾಡುತ್ತಾ ಬಂದಿದೆ. ಮನುಷ್ಯನ ಜೀವನದ ಕೌಶಲ್ಯಗಳನ್ನು ನಾವು ಶರಣರ ವಚನ ಸಾಹಿತ್ಯದಲ್ಲಿ ಕಾಣಲು ಸಾಧ್ಯ. ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಧಾರವಾಡದ ಮಹೇಶ್ ಮಾಶಾಲ್ ಮಾತನಾಡಿ, ವ್ಯಕ್ತಿತ್ವ ವಿಕಸನವು ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ವ್ಯಕ್ತಿತ್ವದ ಗುಣ ಲಕ್ಷಣಗಳನ್ನು ಬಳಸಿಕೊಳ್ಳುವ ಪ್ರತಿಕವಾಗಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕಾದರೆ ವ್ಯಕ್ತಿಯ ಆತ್ಮವಿಶ್ವಾಸ ಕೌಶಲ್ಯಗಳು ವೃದ್ಧಿ ಆಗಬೇಕು. ವ್ಯಕ್ತಿಯು ಉತ್ತಮವಾಗಿ ಬದುಕುವ ಗುರಿಗಳನ್ನು ಸಾಧಿಸಬೇಕಾದರೆ ಸವಾಲುಗಳನ್ನು ಎದುರಿಸಿ ಧೈರ್ಯದಿಂದ ಮುಂದೆ ನುಗ್ಗಿ ತಮ್ಮ ಸಾಧನೆ ಮಾಡಬೇಕು ಎಂದರು.

ಅನೇಕ ಶರಣರು ಪ್ರತಿಪಾದಿಸಿದ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಇಂದಿನ ಸಮಾಜಕ್ಕೆ ತಿಳಿಸಬೇಕಾದ ಅವಶ್ಯಕತೆ ಇದೆ ಎಂದರು.

ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಡೆ ಸಂಸ್ಥಾನ ಮಠದ ಡಾ. ಮಹಂತ ಸ್ವಾಮಿ ಧ್ವಜಾರೋಹಣ ನೆರವೇರಿಸಿ, ಆರೋಗ್ಯ ಶಿಬಿರವನ್ನು ಉದ್ಘಾಟಿಸಿದರು.

ರಾಮದುರ್ಗದ ಶಾಂತವೀರ ಸ್ವಾಮೀಜಿ, ಮೂಲೆಗೆದ್ದೆ ಶಿವಯೋಗಿ ಆಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ. ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ, ಬಳಸಗೋಡು ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಡಾ.ಬಸವ ಮರಳುಸಿದ್ಧ ಸ್ವಾಮೀಜಿ, ಎಸ್‌ಐ ಪ್ರವೀಣ್, ಉಮೇಶ್ ಮಸರೂರ್, ದೀಪೋತ್ಸವ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಸಾಗರ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ರಾಜೇಂದ್ರ ಸೇರಿದಂತೆ ಅನೇಕ ಮಠಾಧೀಶರು ಹಾಗೂ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ಸೈಬರ್‌ ವಂಚಕರಿಗೆ ಹಣ ನೀಡಲುಸ್ನೇಹಿತನ ಮನೆಯಲ್ಲಿ ಚಿನ್ನ ಕದ್ದ..!
ಮತ್ತೆ ಟೋಯಿಂಗ್‌ ಆರಂಭಿಸಲು ಜಿಬಿಎ ನಿರ್ಧಾರ