ಕಲಬುರಗಿ: ಹನ್ನೆರಡನೇ ಶತಮಾನದಲ್ಲಿ ಶರಣರು ಬರೆದ ವಚನ ಸಾಹಿತ್ಯ ಭಾರತೀಯ ತತ್ವಶಾಸ್ತ್ರ ಪರಂಪರೆಯ ಬಹುದೊಡ್ಡ ಭಾಗವಾಗಿವೆ. ವೈಚಾರಿಕ ಅರಿವು, ನೈತಿಕ ಹೊಣೆಗಾರಿಕೆ ವಚನಗಳ ತಾತ್ವಿಕತೆಯಾಗಿದೆ ಎಂದು ಸಿಯುಕೆ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಯೂರ ಪೂಜಾರಿ ಹೇಳಿದರು.
ಉನ್ನತ ಶಿಕ್ಷಣದಲ್ಲಿ ವಚನ ಸಾಹಿತ್ಯ ಮತ್ತು ವಚನಕಾರರ ಅಧ್ಯಯನ ಈ ಕಾಲದ ಅಗತ್ಯ. ವಚನಗಳು, ಬಸವಣ್ಣನವರು, ಅಲ್ಲಮ ಪ್ರಭು ಉನ್ನತ ಶಿಕ್ಷಣದಲ್ಲಿ ಸಂಶೋಧನೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಮರ್ಶೆಯ ಸ್ವರೂಪ ಪಡೆಯುವುದು ಮುಖ್ಯವೆಂದರು.
ದೆಹಲಿ ವಿವಿ ಪ್ರಾಧ್ಯಾಪಕ ಡಾ.ವಿಕಾಸ ಕುಮಾರ್ ಮಾತನಾಡಿ, ಬಸವಣ್ಣ ಮತ್ತು ಅವರ ಸಮಕಾಲೀನ ವಚನಕಾರರ ಚಾರಿತ್ರಿಕ ಸಂದರ್ಭ ಅನಂತವಾದದ್ದು. ಶರಣರು ಕಟ್ಟಿಕೊಟ್ಟ ತಾತ್ವಿಕ ಚಿಂತನೆ ಅತ್ಯಂತ ವೈಚಾರಿಕ, ಬೌದ್ಧಿಕ ನಿಲುವಿನಿಂದ ಕೂಡಿದೆ ಎಂದರು.ಸಿಯುಕೆ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲೇಶ್ ಉಮ್ಮಲ್ಲಾ ಮಾತನಾಡಿ, ಶರಣರ ಆರ್ಥಿಕ ಹಾಗೂ ರಾಜಕೀಯ ಚಿಂತನೆ ಅಕಾಡೆಮಿಕ್ ಚರ್ಚೆಯ ಭಾಗವಾಗಬೇಕೆಂದರು.
ಸಿಯುಕೆ ಹಳೆಯ ವಿದ್ಯಾರ್ಥಿ ಹಾಗೂ ಬಸವಕಲ್ಯಾಣದ ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿದರು.ಸಿಯುಕೆ ಪ್ರಾಧ್ಯಾಪಕ, ಸಂವಾದ-ಉಪನ್ಯಾಸದ ಸಂಯೋಜಕ ಡಾ.ಥಿಯಾಗು, ಡಾ.ಡಾ.ಪಿ.ಬಿ.ಬಾಗೇವಾಡಿ, ಕೇರಳ ಕೇಂದ್ರೀಯ ವಿವಿಯ ಡಾ. ಶಿವಕುಮಾರ, ಡಾ.ಸನೂಪ್ ಎಂ.ಎಸ್., ಬಿಹಾರದ ಡಾ.ಓಂಕಾರ, ಒಡಿಶಾ ವಿವಿಯ ಡಾ ಸುಶಾಂತ್ ನಾಯಕ, ದೆಹಲಿ ವಿವಿಯ ಡಾ.ಅಖಿಲೇಶ್ ಮಿಶ್ರಾ, ಜೋತ್ಸ್ನಾ,ಡಾ.ಸಂತೋಷ , ಡಾ.ಶಿವಂ, ಪ್ರಸಾದ್ ಸ್ವಾಮಿ, ರಾಜು ಶಿಂಧೆ, ಪವನ ಪಾಟೀಲ, ಗಂಗಾಧರ ಇದ್ದರು.
ಡಾ. ಬಸವರಾಜ ಖಂಡಾಳೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.