ನವದೆಹಲಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಸುಂದರೇಶ್ ಹಾಗೂ ಕೋಟೇಶ್ವರ ಸಿಂಗ್ ಅವರಿದ್ದ ವಿಭಾಗೀಯ ಪೀಠ, ಎಫ್ಐಆರ್ ರದ್ದುಗೊಳಿಸಿ ಆದೇಶ ನೀಡಿದೆ. ಸೂಲಿಬೆಲೆ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ರಾಯಚೂರಿನ ಶಿರವಾರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೂಲಿಬೆಲೆ ಅವರು, ಖರ್ಗೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ತಮ್ಮ ಮಾತುಗಳ ನಡುವೆ ಖರ್ಗೆಯವರನ್ನು ‘ಅಯೋಗ್ಯ’ ಎಂದು ಸಂಬೋಧಿದ್ದರೆಂದು ಅವರ ವಿರುದ್ಧ ರಾಯಚೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವತಿಯಿಂದ ಜಾತಿನಿಂದನೆಯ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ರಾಯಚೂರಿನ ಶಿರವಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸೂಲಿಬೆಲೆಯವರು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ಮನವಿ ಮಾಡಿದ್ದರು. ಆದರೆ, ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸೂಲಿಬೆಲೆಯವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸೂಲಿಬೆಲೆಗೆ ಈ ಪ್ರಕರಣದಲ್ಲಿ ನಿರಾಳತೆ ಸಿಕ್ಕಿದೆ.
ಪ್ರಕರಣವೇನು?:
ರಾಯಚೂರಿನ ಶಿರವಾರದಲ್ಲಿ ನಡೆದ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಚಕ್ರವರ್ತಿ ಸೂಲಿಬೆಲೆ, ಕಲಬುರಗಿಯ ಇಎಸ್ಐ ಆಸ್ಪತ್ರೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಲಬುರಗಿಯಲ್ಲಿ ಇಎಸ್ಐ ಆಸ್ಪತ್ರೆ ತೆರೆದಿರುವುದನ್ನು ತಮ್ಮ ಸಾಧನೆ ಎಂದು ಖರ್ಗೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಜನರ ತೆರಿಗೆ ದುಡ್ಡಿನಲ್ಲಿ ಕಟ್ಟಲಾಗಿರುವ ಆಸ್ಪತ್ರೆಯನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವಂತಹ ಅಯೋಗ್ಯ ಅವರು ಎಂದು ಹೇಳಿಕೆ ನೀಡಿದ್ದರು.
ಪ್ರಿಯಾಂಕ್ ಖರ್ಗೆ ತಮ್ಮ ಕ್ಷೇತ್ರದ ಬಗ್ಗೆ ಗಮನ ಹರಿಸಲಿ: ಸೂಲಿಬೆಲೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂಲಿಬೆಲೆ, ಶ್ರಾವಣ ಆರಂಭವಾಗಿದೆ. ಅದಕ್ಕೆ ಸರಿಯಾಗಿ ಪ್ರಿಯಾಂಕ್ ಖರ್ಗೆಯವರು ತಮ್ಮ ಬಳಗದ ಮೂಲಕ ಅವರ ತಂದೆಯನ್ನು ಅಯೋಗ್ಯ ಎಂದಿದ್ದೆ ಎಂಬ ಕಾರಣಕ್ಕೆ ಜಾತಿನಿಂದನೆಯ ದೂರು ದಾಖಲಿಸಿ, ಸುಪ್ರೀಂಕೋರ್ಟಿನವರೆಗೂ ಅಲೆದಾಡಿಸಿದರು. ಈಗಷ್ಟೇ ಸುಪ್ರೀಂಕೋರ್ಟ್ ಅವರಿಗೆ ಛೀಮಾರಿ ಹಾಕಿದೆ.
ನನಗೆ ಪ್ರಿಯಾಂಕ್ ಖರ್ಗೆಯವರ ಮೇಲೆ ಯಾವ ಕೋಪವೂ ಇಲ್ಲ. ಅವರು ಇನ್ನಾದರೂ ತಮ್ಮ ಕ್ಷೇತ್ರದ ಕಡೆಗೆ ಗಮನಹರಿಸಲಿ. ಜನರು ಪಡುತ್ತಿರುವ ಸಂಕಟದಿಂದ ಅವರನ್ನು ಪಾರು ಮಾಡುವ ಸಮಾಜಮುಖಿ ಕೆಲಸಗಳಲ್ಲಿ ನಿರತರಾದರೆ ಅವರಿಗೂ ಒಳಿತು, ರಾಜ್ಯಕ್ಕೂ ಒಳಿತು, ದೇಶಕ್ಕೂ ಒಳಿತು ಎಂದು ಸಲಹೆ ನೀಡಿದರು.