ಹೊನ್ನಾಳಿಯಲ್ಲಿ ಯುವ ಕಾಂಗ್ರೆಸ್ ತಾಲೂಕು ಸಮಿತಿ ಪ್ರತಿಭಟನೆ । ಸರ್ಕಾರಕ್ಕೆ ಮನವಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಅಚ್ಚೇ ದಿನ್ ಆಯೇಗಾ ಎಂದು ಹೇಳಿಕೊಂಡೇ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಆರಂಭದಿಂದಲೂ ಜನಸಾಮಾನ್ಯ ವಿರೋಧಿ ನೀತಿ ಅನುಸರಿಸುತ್ತಿದೆ. ಇದೀಗ ಕೃಷಿಗೆ ಅತಿ ಅಗತ್ಯಗಳಲ್ಲಿ ಒಂದಾಗಿರುವ ರಾಸಾಯನಿಕ ಗೊಬ್ಬರಗಳ ಬೆಲೆ ಅವೈಜ್ಞಾನಿಕವಾಗಿ ಹೆಚ್ಚಿಸಿ, ಅವರ ಜೀವನದ ಮೇಲೆ ಗದಾ ಪ್ರಹಾರ ನಡೆಸಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮನು ವಾಲಜ್ಜಿ ಆರೋಪಿಸಿದರು.ಯುವ ಕಾಂಗ್ರೆಸ್ ತಾಲೂಕು ಸಮಿತಿ ವತಿಯಿಂದ ಬುಧವಾರ ಕೇಂದ್ರ ಸರ್ಕಾರ ರೈತರಿಗೆ ಅಗತ್ಯವಾದ ರಾಸಾಯನಿಕ ಗೊಬ್ಬದ ಬೆಲೆ ಹೆಚ್ಚಳ ಮಾಡಿರುವ ಕ್ರಮ ಖಂಡಿಸಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ, ತಹಸೀಲ್ದಾರ್ ಹಾಗೂ ಸಹಾಯಕ ನಿರ್ದೇಶಕರು ಕೃಷಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕಳೆದ ವರ್ಷ ಇಪ್ಕೋ 15:15:15 ರಸಗೊಬ್ಬರದ ಬೆಲೆ ₹1250 ಇತ್ತು. ಈ ವರ್ಷ ₹1650 ರು.ಗಳಿಗೆ ಹೆಚ್ಚಿಸಲಾಗಿದೆ. ಇಪ್ಕೋ 10-26-26 ರಸಗೊಬ್ಬರ ₹1470ದಿಂದ ಈ ವರ್ಷ ₹1725 ಆಗಿದೆ. ಇದೇ ರೀತಿ ₹1250 ಇದ್ದ 20-20-0-13 ಗೊಬ್ಬರದ ಬೆಲೆ ₹1300 ಹಾಗೂ 12-32-16 ಗೊಬ್ಬರದ ಬೆಲೆ ₹1470 ರಿಂದ ₹1725ಕ್ಕೆ ಏರಿಕೆಯಾಗಿದೆ ಎಂದು ಕಿಡಿಕಾರಿದರು.20-20-20 ಗೊಬ್ಬರದ ಬೆಲೆ ₹1020 ರಿಂದ ₹1360ಕ್ಕೆ ಏರಿಕೆಯಾಗಿದ್ದರೆ, ಯೂರಿಯಾ ಬೆಲೆ ₹266 ರಿಂದ ₹280ಕ್ಕೆ ಹೆಚ್ಚಳವಾಗಿದೆ. ಎಂ.ಒ.ಪಿ. (ಪೋಟ್ಯಾಷ್) ₹1550 ರಿಂದ ₹1750ಕ್ಕೆ ಅಂದರೆ ₹200 ಹೆಚ್ಚಳ ಮಾಡಲಾಗಿದೆ. ಈ ರೀತಿ ರಸಗೊಬ್ಬರಗಳ ಬೆಲೆ ಹೆಚ್ಚಳ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ಹೊರೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಎಂ.ಸಚಿನ್, ಬಿ.ಆರ್. ವಿಜಯ್, ಎಸ್.ಎಚ್.ಸಿದ್ದೇಶ್, ಆರ್.ಎನ್. ಗಣೇಶ್, ಎಚ್ ಜಿ. ಪ್ರಕಾಶ್, ಸುರೇಶ್, ಅರುಣ್, ಬೀರೇಶ್ ಸೇರಿದಂತೆ ಹಲವಾರು ಯುವ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು.- - -
(ಕೋಟ್) * ರಾಷ್ಟ್ರಪತಿ ಮಧ್ಯೆ ಪ್ರವೇಶಿಸಲು ಒತ್ತಾಯ ಕೇಂದ್ರದ ಬಿಜೆಪಿ ಸರ್ಕಾರ ಒಂದೆಡೆ ರೈತರಿಗೆ ಕಿಸಾನ್ ಸಮ್ಮಾನ್ ಎಂದು ವರ್ಷಕ್ಕೆ ₹4 ಸಾವಿರ ನೀಡಿ ಹಿಂಬಾಗಿಲಿನಿಂದ ರಸಗೊಬ್ಬರ, ಔಷಧಿ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡುತ್ತಿದೆ. ಆ ಮೂಲಕ ದುಪ್ಪಟ್ಟು ಹಣವನ್ನು ಪರೋಕ್ಷವಾಗಿ ರೈತರಿಂದ ವಸೂಲು ಮಾಡುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ರಸಗೊಬ್ಬರಗಳ ಬೆಲೆ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಯುವ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುತ್ತದೆ. ಈ ವಿಷಯದಲ್ಲಿ ರಾಷ್ಠ್ರಪತಿ ಅವರು ಮಧ್ಯೆ ಪ್ರವೇಶಿಸಿ, ರಸಗೊಬ್ಬರಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನು ವಾಲಜ್ಜಿ ಮನವಿ ಮಾಡಿದರು.- - -
-23ಎಚ್.ಎಲ್.ಐ1.ಜೆಪಿಜಿ:ರಾಸಾಯನಿಕ ಗೊಬ್ಬರಳ ಬೆಲೆ ಹೆಚ್ಚಳ ಖಂಡಿಸಿ ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಯಿತು.