ಕಾಯಕಕ್ಕೆ ಮಹತ್ವ ನೀಡಿದ್ದ ಶರಣರು: ಡಾ. ಅನ್ನದಾನೀಶ್ವರ ಶ್ರೀ

KannadaprabhaNewsNetwork |  
Published : May 12, 2026, 02:45 AM IST
ಕಾರ್ಯಕ್ರಮದಲ್ಲಿ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಬಡವ ಶ್ರೀಮಂತರೆನ್ನುವ ಭೇದಭಾವವನ್ನು ತೆಗೆದುಹಾಕಿ ಎಲ್ಲರೂ ಒಂದೇ ಎನ್ನುವ ಸಮಾನತೆಯನ್ನು ಸಾರಿದರು ಎಂದರು.

ಮುಂಡರಗಿ: ಬಸವಣ್ಣನವರು ಕಾಯಕ ಸಿದ್ಧಾಂತವನ್ನು ಹೇಳುವ ಮೂಲಕ ಮಹಾಮನೆಗೆ ಪ್ರವೇಶ ಮಾಡುವವರೆಲ್ಲರೂ ಲಿಂಗಧಾರಿಗಳಾಗಬೇಕು. ಯಾರು ಲಿಂಗಧಾರಿಗಳಾಗುತ್ತಾರೆಯೋ ಅವರೆಲ್ಲರೂ ಸತ್ಯಶುದ್ಧವಾದ ಕಾಯಕ ಮಾಡಬೇಕು. ಲಿಂಗವನ್ನು ಪೂಜಿಸುವ ಕೈ ಮತ್ತೊಬ್ಬರನ್ನು ಬೇಡಬಾರದು. ತನ್ನ ಉಪಜೀವನವನ್ನು ತಾನೇ ಮಾಡಿಕೊಳ್ಳಬೇಕು ಎನ್ನುವ ಸಿದ್ಧಾಂತವನ್ನು ಹೇಳಿಕೊಟ್ಟರು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಸೋಮವಾರ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಾಗೂ ಅನ್ನದಾನೀಶ್ವರ ಮಠದ ಆಶ್ರಯದಲ್ಲಿ 893ನೇ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯ ಯಾವುದಾದರೊಂದು ಕಾಯಕ ಮಾಡಬೇಕು. ಕಾಯಕ ಮಾಡಿ ಬಂದ ಹಣದಿಂದ ತನ್ನ ಉಪಜೀವನ ನಡೆಸಿಕೊಂಡು ಉಳಿದಿದ್ದರಲ್ಲಿ ದಾಸೋಹ ಮಾಡಬೇಕು. ಶರೀರ ಶ್ರಮದಿಂದ ಮಾಡುವ ಕಾಯಕಕ್ಕೆ ಶರಣರು ವಿಶೇಷ ಮಹತ್ವ ನೀಡಿದ್ದಾರೆ. ಬಸವಣ್ಣನವರು ಲಿಂಗಧಾರಣೆ ಮಾಡುವ ಮೂಲಕ ಸಮಾನತೆಯನ್ನು ತಂದು ಕೊಟ್ಟರು ಎಂದರು.

ನೇತೃತ್ವ ವಹಿಸಿದ್ದ ವಿರುಪಾಪುರ- ಕಲಕೇರಿಯ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಬಡವ ಶ್ರೀಮಂತರೆನ್ನುು ಭೇದಭಾವವನ್ನು ತೆಗೆದುಹಾಕಿ ಎಲ್ಲರೂ ಒಂದೇ ಎನ್ನುವ ಸಮಾನತೆಯನ್ನು ಸಾರಿದರು. ಕಾಯಕವೇ ಕೈಲಾಸ ಎಂದು ಹೇಳಿ ಕಾಯಕ ತತ್ವಕ್ಕೆ ನಿಜವಾದ ಅರ್ಥವನ್ನು ತಂದುಕೊಟ್ಟರು ಎಂದರು.

ಪುರಸಭಾ ಮಾಜಿ ಸದಸ್ಯ ನಾಗೇಶ ಹುಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವ ಜಯಂತಿ ಸಮಾಜದಲ್ಲಿ ಸಮಾನತೆ, ಭ್ರಾತೃತ್ವ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯವ ಪ್ರಮುಖ ಹಬ್ಬವಾಗಿದೆ. ಇದು ಬಸವಣ್ಣನವರ ತತ್ವಾದರ್ಶಗಳನ್ನು ಎಲ್ಲೆಡೆ ಬಿತ್ತರಿಸುವ ಮಹತ್ತರವಾದ ದಿನವೂ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾನತೆಯ ಹರಿಕಾರ ಬಸವಣ್ಣನ ಕುರಿತು ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಶರಣರ ಚಳವಳಿಯಲ್ಲಿ ಮಹಿಳಾ ಸ್ವಾತಂತ್ರ್ಯದ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಪ್ರೊ. ಅಕ್ಕಮಹಾದೇವಿ ಹಿರೇಮಠ ಮಾತನಾಡಿದರು.

ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಮಾನ್ವಿ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ- ಲಿಂಗಾಯತ ಮಹಾಸಭಾ ಸದಸ್ಯತ್ವ ಸ್ವೀಕರಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು.

ತಾಲೂಕು ಅಧ್ಯಕ್ಷ ಶಿವನಗೌಡ ಡೋಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಜಾಫರ್ ಬಚ್ಚೇರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಭಿನವ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಮಹಾಸಭಾ ಅಧ್ಯಕ್ಷ ಎಸ್.ಎಸ್. ಗುಡಿಮನಿ, ಶಿವಪ್ಪ ಅಂಕದ, ಎಸ್.ವಿ. ಪಾಟೀಲ, ಕಾಶೀನಾಥ ಶಿರಬಡಗಿ, ಎಸ್.ಬಿ. ಹಿರೇಮಠ, ಗುಡದೀರಯ್ಯ, ವಿರುಪಾಕ್ಷಪ್ಪ, ಆರ್.ಕೆ. ರಾಯನಗೌಡರ, ಕೊಟ್ರಪ್ಪ ಬ್ಯಾಳಿ, ನಿರ್ಮಲಾ ಗೋಡಿ, ಆರ್.ಬಿ. ಹಕ್ಕಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕವಿತಾ ಉಳ್ಳಾಗಡ್ಡಿ ಸ್ವಾಗತಿಸಿ, ಎಸ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್‌ಗೆ ಕಸಾಪ ಆಹ್ವಾ‌ನ
ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ: ದೇಶಪಾಂಡೆ