ಅಧಿಕಾರಿಗಳು ನನ್ನ ಒಳ್ಳೆಯತನದ ದುರುಪಯೋಗವನ್ನು ಪಡೆಯಬೇಡಿ.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅನುದಾನದ ಕೊರತೆಯಿಲ್ಲ । ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕಕನ್ನಡಪ್ರಭ ವಾರ್ತೆ ಹಳಿಯಾಳ
ಅಧಿಕಾರಿಗಳು ನನ್ನ ಒಳ್ಳೆಯತನದ ದುರುಪಯೋಗವನ್ನು ಪಡೆಯಬೇಡಿ. ನೀವೆಲ್ಲ ನನ್ನ ಅನುಮತಿ ಪಡೆದ ನನ್ನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಿರಿ ಅದೂ ನೆನಪಿರಲಿ. ಕಚೇರಿಯಲ್ಲಿ ಕುಳಿತುಕೊಳ್ಳದೇ ಆದಷ್ಟು ಕಚೇರಿ ಬಿಟ್ಟು ಹೊರಬಂದು ಆಡಳಿತ ನಡೆಸಿ, ಜನರ ಸಮಸ್ಯೆ ತಿಳಿದುಕೊಳ್ಳಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಸೋಮವಾರ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಮೂರು ತಾಲೂಕಗಳನ್ನೊಳಗೊಂಡ ಕುಡಿಯುವ ನೀರಿನ ಸಮಸ್ಯೆಯ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಪ್ರತಿಬಾರಿಯೂ ಅಧಿಕಾರಿಗಳು ಹೇಳಿದ್ದನ್ನೇ ಹೇಳುತ್ತಾರೇ ಹೊರತು ಅವರಲ್ಲಿ ಕಾಮಗಾರಿ ಪ್ರಗತಿಯಾದ ಮಾತುಗಳೇ ಬರುತ್ತಿಲ್ಲ ಎಂದು ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.ಹಳಿಯಾಳ ವಿಧಾನಸಭಾ ಕ್ಷೇತ್ರದ ಮೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಮ್ಮ ಬಳಿ ಅನುದಾನದ ಕೊರತೆಯಿಲ್ಲ. ಅಂದಾಜು ₹1.80 ಕೋಟಿ ಅನುದಾನವಿದ್ದು, ಅದರ ಸದ್ಭಳಕೆಯನ್ನು ಮಾಡಿಕೊಳ್ಳಬೇಕು ದೇಶಪಾಂಡೆ ಸೂಚಿಸಿದರು.
ನಿಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳ ಸ್ಥಿತಿ ಹಾಗೂ ಇತರ ಮಾಹಿತಿಗಳು ನಿಮ್ಮ ಬೆರಳ ತುದಿಯ ಮೇಲಿರಬೇಕು. ತಹಸೀಲ್ದಾರ, ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಹೆಸ್ಕಾಂ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ ತಂಡವನ್ನು ಮಾಡಿ ವಾರಕೊಮ್ಮೆ ಸಭೆ ನಡೆಸಿ ಗ್ರಾಮ ಮಟ್ಟದಲ್ಲಿ ಕುಡಿಯುವ ನೀರಿನ ಸ್ಥಿತಿ ಹೇಗಿದೆ ಎಂದು ಪರಿಶೀಲಿಸಿ ನನ್ನ ಗಮನಕ್ಕೂ ತರಬೇಕು ಎಂದರು.ಬೇಸಿಗೆಯ ಕಾಲವಾದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ಕುಡಿಯುವ ನೀರಿಗೆ ಸಂಬಂಧಿತ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ವಾಸ ಮಾಡಬೇಕು, ಯಾರೂ ರಜೆಯ ಮೇಲೆ ತೆರಳಬಾರದು. ರಜೆಯ ಮೇಲೆ ತೆರಳಲು ಬಯಸುವರು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಿ ರಜೆ ಪಡೆಯಬಹುದು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.
ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯು ಉದ್ಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿದೆ. ಅದಕ್ಕಾಗಿ ಆದಷ್ಟು ನಿಮ್ಮ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ, ವಾರ್ಡಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆಯನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಿರಿ ಎಂದರು. ಅಷ್ಟೂ ಮೀರಿ ನೀರಿನ ಸಮಸ್ಯೆ ಎದುರಾದರೇ, ಅದಕ್ಕೆ ಆಯಾ ಗ್ರಾಪಂ ಅಧಿಕಾರಿಗಳನ್ನು ಅವರ ಮೇಲಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದರು.ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಕುಡಿಯುವ ನೀರಿನ ಸ್ಥಿತಿ ಪರಿಶೀಲನೆ ಮಾಡಿದ ಶಾಸಕರು, ಹಳಿಯಾಳ ತಾಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹಳಿಯಾಳ ಮತ್ತು ದಾಂಡೇಲಿ ನಗರಗಳಲ್ಲಿ ಕೈಗೊಂಡಿರುವ ಅಮೃತ 2-0 ಯೋಜನೆಯಲ್ಲಿ ನಡೆದಿರುವ ನಿರಂತರ ನೀರು ಯೋಜನೆ, ಜೋಯಿಡಾ ತಾಲೂಕಿನಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಸದಸ್ಯ ಸ್ಥಿತಿಗತಿಯನ್ನು ವಿಚಾರಿಸಿದರು. ಕುಡಿಯುವ ನೀರಿನ ಯೋಜನೆ ವಿಳಂಬವಾಗಿದ್ದು, ಸಮಾರೋಪಾದಿಯಲ್ಲಿ ಕೆಲಸ ಆರಂಭಿಸಿ ಎಂದರು.
ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ದಾಂಡೇಲಿ ತಹಸೀಲ್ದಾರ ಶೈಲೇಷ್ ಪರಮಾನಂದ, ತಾಪಂ ಇಒ ಪಿ.ಎಸ್. ಹಾದಿಮನಿ, ಜೋಯಿಡಾ ತಹಸೀಲ್ದಾರ ಮಂಜುನಾಥ ಮುನವಳ್ಳಿ, ತಾಪಂ ಇಒ ಭಾರತಿ ಎಂ., ದಾಂಡೇಲಿ ಸಿಪಿಐ ಜಯಪಾಲ ಪಾಟೀಲ, ಹಳಿಯಾಳ ಪೌರಸಂಸ್ಥೆ ಅಧಿಕಾರಿಗಳು, ಎಲ್ಲಾ ಮೂರು ತಾಲೂಕಗಳ ಪಿಡಿಒಗಳು, ಹೆಸ್ಕಾಂ, ಕೃಷಿ, ತೋಟಗಾರಿಕೆ, ಜಿಪಂ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.