ಶರಣ ಸಂಸ್ಕೃತಿ ಉತ್ಸವದ ಸಮಾರೋಪದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಅನುಭವ ಮಂಟಪದಲ್ಲಿ ಆಯೋಜಿಸಲಾದ ಶರಣ ಸಂಸ್ಕೃತಿ ಉತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, ಶರಣ ಎಂದರೆ ದೇಹದ ಮೇಲೆ ವ್ಯಾಮೋಹವಿಲ್ಲದೆ ಅಹಂಕಾರವಿಲ್ಲದಿರುವ ವ್ಯಕ್ತಿ. ಸಂಸ್ಕೃತಿ ಎಂದರೆ ಸಮಾಜ, ನಾಡು ವಿಕಾಸವಾಗುವಂತೆ ಮಾಡಿ ಪರಿಪೂರ್ಣಯತೆಯೆಡೆಗೆ ನಡೆಯುವುದೇ ಸಂಸ್ಕೃತಿ. ಉತ್ಸವವೆಂದರೆ ಅದು ಹಬ್ಬ ಉಲ್ಲಾಸ ಹಾಗೂ ಎಲ್ಲರನ್ನೂ ಸೇರಿಸಿ ಸಂಭ್ರಮಿಸುವ ಶಕ್ತಿ ಅದಕ್ಕೆ ಇರುತ್ತದೆ ಎಂದರು.
ಶಿವಶರಣೆ ರಾಜ ಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ ಮಾತನಾಡಿ, ನಾವು ಆತ್ಮ ಮತ್ತು ಪರಮಾತ್ಮನನ್ನು ಸೇರಲು ಬಾಲ್ಯದಿಂದಲೇ ಪ್ರಾರಂಭಿಸಿದ್ದವು. ಇಂದು ಪ್ರತಿಯೊಬ್ಬ ಶರಣರು ಆಧ್ಯಾತ್ಮಿಕತೆಯನ್ನು ಬೆಳಸಿಕೊಳ್ಳಬೇಕು. ತನ್ನನ್ನು ತಾನು ಅರಿತವರೆ ಶರಣರು. ತನ್ನನ್ನು ತಾನು ಮರೆತವರೆ ಮಾನವರು. ಅಕ್ಕಮಹಾದೇವಿ ದೇಹ ಮತ್ತು ಆತ್ಮದ ಬಗ್ಗೆ ಹೇಳಿರುವುದನ್ನು ವ್ಯಾಖ್ಯಾನಿಸುತ್ತ ಆತ್ಮಜ್ಯೋತಿ ಇದೆ ಅದನ್ನು ತಾವೇ ಕಾಣಬೇಕು. ದೇವನೊಬ್ಬನೇ, ಆತನೇ ಪರಮಾತ್ಮ ಶಿವ. ಪರಮಾತ್ಮನಿಗೆ ಸಾವಿಲ್ಲ ಅದಕ್ಕೆ ಜ್ಯೋತಿ ರೂಪವನ್ನು ಕೊಡುತ್ತೇವೆ ಎಂದು ನುಡಿದರು.ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಹತ್ತು ದಿನಗಳ ಶರಣ ಸಂಸ್ಕೃತಿ ಉತ್ಸವದ ಯಶಸ್ವಿಗೆ ಕಾರಣರಾದ ಎಲ್ಲಾ ವರ್ಗದ ಶರಣರಿಗೆ ತುಂಬು ಹೃದಯದ ಶರಣಾರ್ಥಿಗಳನ್ನು ತಿಳಿಸಿದರು. ಮಧ್ಯಕರ್ನಾಟಕದ ದಸರಾ ಎಂದೇ ಖ್ಯಾತಿ ಪಡೆದ ಉತ್ಸವದಲ್ಲಿ ಹಲವು ವಿಚಾರ ಸಂಕಿರಣಗಳು ಗಮನ ಸೆಳೆದವು ಎಂದರು. ಇದೇ ಸಂದರ್ಭದಲ್ಲಿ ಈ ಉತ್ಸವದ ಯಶಸ್ವಿಗೆ ಕಾರಣರಾದ ಡಾ.ಬಸವಕುಮಾರ ಸ್ವಾಮಿಗಳಿಗೆ ಶ್ರೀಮಾದಾರ ಚೆನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಡಾ.ಬಸವಪ್ರಭು ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನಸ್ವಾಮೀಜಿ, ಶ್ರೀ ಚನ್ನಬಸವಸ್ವಾನಮೀಜಿ, ವಿವಿಧ ಮಠಾದೀಶರು, ಹರಗುರು ಚರಮೂರ್ತಿಗಳು, ಸಾಹಿತಿ ಗಣೇಶ್ ಅಮೀನಗಡ, ಕನ್ನಡಪರ ಹೋರಾಟಗಾರ ಪಾಲನೇತ್ರ, ಚಿತ್ರದುರ್ಗದ ಈಶ್ವರ್ ಸ್ಟೀಲ್‌ನ ರುದ್ರೇಶ್ ಐಗಳ್, ಯಾದವ ಸಮಾಜದ ಸಿ. ಮಹಾಲಿಂಗಪ್ಪ, ಒಕ್ಕಲಿಗ ಸಮಾಜದ ಜಿ.ಎಸ್. ಪರಮೇಶ್ವರಪ್ಪ, ಆರ್ಯವೈಶ್ಯ ಸಮಾಜದ ಎಲ್.ಜಿ.ಶ್ರೀನಿವಾಸ್ ಬಾಬು, ಮೇದಾರ ಸಮಾಜದ ಸಿ.ಬಿ ಪಾಟೀಲ್, ಜೈನ ಸಮಾಜದ ರಣಜಿತ್ ಜೈನ್, ಜೋಗಿ ಸಮಾಜದ ಡಾ. ಕೆ ಜಗದೀಶ್, ಗಾಣಿಗ ಸಮಾಜದ ತಿಪ್ಪೇಸ್ವಾಮಿ ಹಾಗೂ ಈಡಿಗ ಸಮಾಜದ ಎಸ್.ಜೀವನ್ ಉಪಸ್ಥಿತರಿದ್ದರು.