ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಉತ್ತಮ ಸಮಾಜ ನಿರ್ಮಾಣಕ್ಕೆ ಶರಣ ಸಾಹಿತ್ಯ ಅತ್ಯವಶ್ಯ. ಒತ್ತಡದ ನಡುವೆಯೂ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.ಶಿರಾಳಕೊಪ್ಪ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಶರಣ ಸಾಹಿತ್ಯ ಪರಿಷತ್ ತಾಲ್ಲೂಕ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಆಗಿ ಮಾತನಾಡಿದ ಅವರು, ಇಂದು ನಾವು ಪತ್ರಿಕೆಯಲ್ಲಿ ನೋಡಿದರೆ ಸಣ್ಣ ಸಣ್ಣ ಘಟನೆಗಳಿಗೂ ಸಹ ಚಿಕ್ಕಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನಾವು ನೋಡುತ್ತೇವೆ. ಅವರಿಗೆ ಶಿಕ್ಷಣದ ಜೊತೆಗೆ ಮಾನಸಿಕ ಸ್ಥೈಯರ್ವನ್ನು ತುಂಬಬೇಕಿದೆ. ಮಕ್ಕಳು ತಮ್ಮ ತಂದೆ ತಾಯಿ ಎಷ್ಟು ಕಷ್ಟ ಪಟ್ಟು ಬೆಳೆಸಿದ್ದಾರೆ ಎಂಬುದನ್ನು ಬಿಟ್ಟು ಬರಿ ಕೇವಲ ನಾನು ನಾನು ಎಂಬ ಮಾನಸಿಕ ಸ್ಥಿತಿ ಹೊಂದಿರುವ ಮಕ್ಕಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದವರು ಅಭಿಪ್ರಾಯಪಟ್ಟರು.ನಾನು ಬಿಜೆಪಿಯ ರಾಜ್ಯಾಧ್ಯಕ್ಷನಾಗುತ್ತೇನೆಂದು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಆದರೆ ಪ್ರಧಾನಿ ಮೋದಿಜಿ ಹಾಗೂ ನಡ್ಡಾಜಿ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಜಯೇಂದ್ರರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ನಿರ್ಧರಿಸಿ ನನ್ನನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದರು. ಜೀವನದಲ್ಲಿ ಏನೇ ಸಾಧನೆ ಮಾಡಬೇಕು ಎತ್ತರಕ್ಕೆ ಬೆಳೆಯಬೇಕು ಎಂದರೆ ತಾಯಂದಿರ ಆಶೀರ್ವಾದ ಮುಖ್ಯ, ಹಾಗೆಯೇ ಪೂಜ್ಯ ಗುರುಗಳು , ತಂದೆ ಅವರ ಆಶೀರ್ವಾದ, ರಾಘಣ್ಣನವರ ಮಾಗರ್ದರ್ಶನ ಪಡೆದು ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದ ಅವರು, ಇಂದು ನನಗೆ ರಾಜ್ಯದ ಪ್ರವಾಸ ಮಾಡುವಾಗ ಕೆಲವು ಬಾರಿ ಭಯವಾಗುತ್ತದೆ, ಏಕೆಂದರೆ ನನ್ನ ನಡೆಯನ್ನು ರಾಜ್ಯದ ಜನ ಹಾಗೆಯೇ ಗುರುಗಳು ಸೇರಿದಂತೆ ಎಲ್ಲರೂ ಗಮನಿ ಸುತ್ತಿರುತ್ತಾರೆ. ಹಾಗೆಯೇ ವಿರೋಧ ಪಕ್ಷದವರು ತಪ್ಪು ಹುಡುಕಲು ಕಾಯುತ್ತಿರು ತ್ತಾರೆ. ಚಿಕ್ಕವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನಿರ್ವಹಿಸುವ ಶಕ್ತಿಯನ್ನು ಪರಮಪೂಜ್ಯರ ಆಶೀರ್ವಾದದಿಂದ ನನ್ನ ಮುಂದೆ ಎಂಥದ್ದೇ ಸವಾಲು ಬಂದರೂ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ಮುಖಾಂತರ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ಈ ಸಮಾರಂಭದ ಸರ್ವಾಧ್ಯಕ್ಷೆ ಮಧುರಾ ಅಶೋಕ ಕುಮಾರ ಅವರು ೧೨೦ಕ್ಕೂ ಹೆಚ್ಚುಬಾರಿ ರಕ್ತದಾನ ಮಾಡಿ ಗಿನ್ನಿಸ್ ದಾಖಲೆ ಮಾಡಿರುವ ಅವರನ್ನು ಅಭಿನಂದಿಸುವುದೇ ಒಂದು ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದರು.
ವೇದಿಕೆ ಮೇಲೆ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಧುರಾ ಅಶೋಕ ಕುಮಾರ ತೊಗಸಿರ್ ಮಳೇ ಮಠದ ಮಹಂತ ದೇಶೀಕೇಂದ್ರ ಸ್ವಾಮಿಗಳು, ವೀರಕ್ತ ಮಠದ ಸಿದ್ದೇಶ್ವರ ಶ್ರೀಗಳು, ಬಸವಾಶ್ರಮದ ಮಾತೆ ಮಹದೇವಿ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಡಾ.ಮುರುಘರಾಜ್, ಶಿರಾಳಕೊಪ್ಪ ಶರಣ ಸಾಹಿತ್ಯ ಘಟಕದ ಅಧ್ಯಕ್ಷ ಸುರಹೊನ್ನೆ ಚಂದ್ರಶೇಖರ, ಘಟಕದ ಪ್ರಭುಸ್ವಾಮಿ, ನಿವೇದಿತಾ ರಾಜು, ಸುಭಾಸ್ ಚಂದ್ರಸ್ಥಾನಿಕ್, ರೂಪಾ ಹಾಲೇಶ್, ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.ಸರ್ವಾಧ್ಯಕ್ಷರ ಮೆರವಣಿಗೆ, ವಿವಿಧ ಗೋಷ್ಠಿ:
ಶರಣ ಸಾಹಿತ್ಯ ಪರಿಷತ್ ಸಮ್ಮೇಳನ ಪ್ರಾರಂಭವಾಗುವ ಮೊದಲು ಪಟ್ಟಣದ ಬಸವೇಶ್ವರ ದೇವಾಲಯದಿಂದ ಸರ್ವಾಧ್ಯಕ್ಷೆ ಮಧುರಾ ಅಶೋಕಕುಮಾರ ಅವರನ್ನು ವಿವಿಧ ವಾಕ್ಯಗಳೊಂದಿಗೆ ರಾಜಬೀದಿಯಲ್ಲಿ ಮೆರವಣಿಗೆ ಮುಖಾಂತರ ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ಸಮ್ಮೇಳನದಲ್ಲಿ ವಿವಿಧ ಗೋಷ್ಠಿ ನಡೆಸಲಾಯಿತು. ಸಂಜೆ ವಿವಿಧ ಶಾಲೆಯ ಮಕ್ಕಳಿಂದ ಆಕರ್ಷಕ ಸಾಂಸ್ಕ್ರತಿಕ ಕಾಯರ್ಕ್ರಮ ರಾತ್ರಿ ೧೦ಗಂಟೆವರೆಗೆ ಮುಂದುವರೆದು ಮುಕ್ತಾಯವಾಯಿತು.