ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ 51ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಮತ್ತು 27ನೇ ವರ್ಷದ ಜಾತ್ರಾಮಹೋತ್ಸವ ಸೋಮವಾರ ಮತ್ತು ಮಂಗಳವಾರ ಅದ್ಧೂರಿಯಾಗಿ ನಡೆಯಲಿದೆ.
ಮರು ದಿನ ಸೆ. 2 ರಂದು ಶ್ರೀಶರಣಬಸವೇಶ್ವರ ಜೋಡು ರಥೋತ್ಸವದೊಂದಿಗೆ ಶ್ರೀಶರಣ ಬಸವೇಶ್ವರ ಬೆಳ್ಳಿ ಮೂರ್ತಿಯ ಮೆರವಣಿಗೆ ನಡೆಯಲಿದೆ. ಹಿಂದಿನಿಂದ ಆಚರಿಸುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಸರ್ವ ಜನಾಂಗದವರು ಸೇರಲಿದ್ದಾರೆ.
ಐವತ್ತು ವರ್ಷ: ಕಳೆದ 50 ದಶಕಗಳಿಂದ ಇಲ್ಲಿನ ಶರಣಬಸವೇಶ್ವರ ಪುರಾಣ ಮಹೋತ್ಸವ ನಡೆಯುತ್ತಿದ್ದು. ಕಾಲಕ್ಕೆ ತಕ್ಕಂತೆ ಪಟ್ಟಣ ಅಭಿವೃದ್ಧಿಯಾಗುತ್ತಿದ್ದು ಈಗ ತಾಲೂಕು ಕೇಂದ್ರವಾಗಿದೆ. ಕೊಪ್ಪಳ ಜಿಲ್ಲೆಯ ಅತ್ಯಂತ ಶ್ರೀಮಂತ ಗ್ರಾಮ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ದೇಶ ಮತ್ತು ವಿದೇಶಕ್ಕೆಅಕ್ಕಿ ರಫ್ತು ಮಾಡುವ ಪಟ್ಟಣ ವಾಣಿಜ್ಯ ವ್ಯವಹಾರಕ್ಕೆ ಜಿಲ್ಲೆಯಲ್ಲಿಯೇ ನಂ.1 ಸ್ಥಾನ ಪಡೆದುಕೊಂಡಿದೆ.ಗಂಗಾವತಿಯ ಕಾಯಕಯೋಗಿ ಶ್ರೀಗುರು ಚನ್ನಬಸವ ಮಹಾಸ್ವಾಮಿಗಳ ವಾಕ್‌ಸಿದ್ಧಿಯಂತೆ ಕಾರಟಗಿ ಪಟ್ಟಣ ಕಲ್ಯಾಣವಾಗಿ ದಿನದಿಂದ ದಿನಕ್ಕೆ ವ್ಯಾಪಾರ,ಉದ್ಯೋಗ, ಶಿಕ್ಷಣ, ಕೈಗಾರಿಕೆಗಳಲ್ಲಿ ಮುಂದುವರೆದು ಕಲ್ಯಾಣವಾಗಿದೆ. ತಾಲೂಕು ರಚನೆಯಾದಾಗಿನಿಂದ ಪಟ್ಟಣ ಕಲ್ಯಾಣ ಕಾರಟಗಿ ಎನಿಸಿಕೊಂಡಿದೆ.
ಕಾರಟಗಿಯಲ್ಲಿ 1973ರಲ್ಲಿ ತೀರಾ ಶಿಥಿಲಾವಸ್ಥೆಯಲ್ಲಿದ್ದ ಗಣೇಶ ದೇವಾಲಯವನ್ನು ಹಿರಿಯರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ನವೀಕರಿಸಿ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಕ್ರಾಂತಿ ಸೃಷ್ಟಿಸಲಾಯಿತು.ಮರು ವರ್ಷವೇ ಶ್ರೀವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಿ ಮಹಾದಾಸೋಹಿ ಶ್ರೀಶರಣಬಸವೇಶ್ವರ ಪುರಾಣ ಪ್ರಾರಂಭಿಸಲಾಗಿದೆ. ಆ ವರ್ಷ ಪುರಾಣಿಕರಾಗಿ ಆಗಮಿಸಿದ್ದ ಶ್ರೀ ಮುಪ್ಪಿನಶಾಸ್ತ್ರಿಗಳು ಕಾರ್ಯಕ್ರಮಕ್ಕೆ ಹೊಸ ಆಯಾಮವನ್ನಿತ್ತರಲ್ಲದೆ ಉಳಿದ ಹಣದಲ್ಲಿ ಭವ್ಯವಾದ ಮಂಟಪ ನಿರ್ಮಿಸಿ ಅದೇ ಶರಣರ ಪುರಾಣ ಮುಂದುವರೆಸಿದರು. ಅಂದಿನಿಂದ ಸರ್ವ ಸಮುದಾಯ ಪುರಾಣ ಸಮಿತಿ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸುತ್ತಾ ಬರಲಾಗಿದೆ. ಈ ಬಾರಿ 51ನೇ ವರ್ಷದಂಗವಾಗಿ ದೇವಸ್ಥಾನ ಸಂಪೂರ್ಣ ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡು ಭಕ್ತರನ್ನು ಕೈಬಿಸಿ ಕರೆಯುತ್ತಿದೆ.
ಈ ಭಾರಿ 51 ನೇ ವರ್ಷದಂಗವಾಗಿ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನಡೆಯುವ ಹಿನ್ನೆಲೆಯಲ್ಲಿ ಬಂಧುಗಳು, ಆಪ್ತರು ಸಂಬಂಧಿಗಳು ಮನೆಗೆ ಆಗಮಿಸಿದ್ದು, ಜಾತ್ರೆಯ ನಡೆಯುವ ಎರಡು ದಿನಗಳ ಮುಂಚೆಯೇ ಪಟ್ಟಣದೆಲ್ಲಡೆ ಹಬ್ಬದ ವಾತವಾವರಣ ನಿರ್ಮಾಣವಾಗಿದೆ. ಮಂಗಲೋತ್ಸವ ಹಾಗೂ ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹ ಕಿಕ್ಕಿರಿದು ತುಂಬಿರುತ್ತದೆ.